ಬೆಳಗಾವಿ: ರಾಜ್ಯದ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 35 ಸಾವಿರಕ್ಕೂ ಹೆಚ್ಚಿನ ದೇವಸ್ಥಾನಗಳ ಸಮಗ್ರ ಆಸ್ತಿಯನ್ನೂ ಸಮೀಕ್ಷೆ ನಡೆಸಲು ಮಹತ್ವದ ತೀರ್ಮಾನ ಮಾಡಲಾಗಿದೆ.
ದೇವಸ್ಥಾನದ ಆಸ್ತಿ ಸಂರಕ್ಷಣೆಯ ಪ್ರಮುಖ ಉದ್ದೇಶದಿಂದ, ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳು ಮತ್ತು ಅವುಗಳ ಆಸ್ತಿ ವಿವರಗಳನ್ನು ಸಮಗ್ರ ಸಮೀಕ್ಷೆ ಮಾಡಲು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ನಿರ್ಧರಿಸಲಾಗಿದೆ ಎಂದು ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಸಂಸ್ಥೆಗಳ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಂತರ ಮಾತನಾಡಿದ ಸಚಿವೆ, ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಎ, ಬಿ ಮತ್ತು ಸಿ ದರ್ಜೆಯ 35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿವೆ. ಇವು ನಮ್ಮ ಗೆಜೆಟ್‌ನ ಪಟ್ಟಿಯಲ್ಲಿ ನಮೂದಾಗಿವೆ. ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಂರಕ್ಷಣೆ, ದೇವಾಲಯಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕುವುದು ಹಾಗೂ ಅವುಗಳ ವಾಸ್ತವಿಕ ಸಮೀಕ್ಷೆ ನಡೆಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ವಿಶೇಷ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ಡಿಜಿಟಲ್ ತಂತ್ರಜ್ಞಾನದ ಮೂಲಕ ಸಮಗ್ರ ಸಮೀಕ್ಷೆ
ದೇವಸ್ಥಾನಗಳ ಸಮಗ್ರ ಸಮೀಕ್ಷೆಯನ್ನು ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾಡಲಾಗುವುದು. ನಮ್ಮ ಪಟ್ಟಿಯಲ್ಲಿರುವ ದೇವಸ್ಥಾನಗಳ ಬಳಿ ತೆರಳುವುದು, ಅವುಗಳ ವಾಸ್ತವಿಕ ಚಿತ್ರಣವನ್ನು ಡಿಜಿಟಲ್ ಆಗಿ ನಮೂದಿಸುವುದು ಹಾಗೂ ಅವುಗಳಲ್ಲಿರುವ ಆಸ್ತಿಗಳ ವಾಸ್ತವಿಕ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಕಲೆ ಹಾಕುವುದನ್ನು ಮಾಡಲಾಗುವುದು.
ದೇವಸ್ಥಾನಗಳ ಫೋಟೋ, ಅವುಗಳ ಆದಾಯ, ಅವುಗಳಲ್ಲಿನ ನಿರ್ವಹಣೆಯ ಮಾಹಿತಿ ಹೀಗೆ ಹತ್ತು ಹಲವು ವಿಷಯಗಳನ್ನು ಕಲೆ ಹಾಕುವುದು ಹಾಗೂ ಅವುಗಳನ್ನು ಡಿಜಿಟಲ್ ರೂಪದಲ್ಲಿ ಜನ ಸಾಮಾನ್ಯರಿಗೂ ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ.
ರಾಜ್ಯದ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚಿಸಲು ಪರಿಷತ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅಲ್ಲದೇ, ಉತ್ತರ ಕರ್ನಾಟಕದ ಪ್ರಮುಖ ದೇವಸ್ಥಾನದಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ರಚಿಸಲಾಗುತ್ತಿರುವ ಯೋಜನೆಗಳ ಬಗ್ಗೆ ವಿಸ್ತ್ರತ ಚರ್ಚೆಯನ್ನು ನಡೆಸಲಾಯಿತು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಯೋಜನೆ ಅಂತಿಮಗೊಳಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಜಯರಾಂ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ | Dress Code | ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಒತ್ತಾಯ