ಚಿಕ್ಕೋಡಿ: ಶಕ್ತಿ ಯೋಜನೆ (Shakti Scheme) ಯಿಂದ ಮಹಿಳೆಯರ ಓಡಾಟ (Free Bus service), ಆ ಮೂಲಕ ಸಬಲೀಕರಣವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಅದರ ನಡುವೆಯೇ ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರ (Fight between women in KSRTC Bus) ನಡುವೆ ವಿಪರೀತ ಕಾದಾಟವೂ ಜೋರಾಗಿದೆ. ಬೆಳಗಾವಿಯಲ್ಲಿ ಸರ್ಕಾರಿ ಬಸ್‌ನಲ್ಲಿ (Government bus) ಸೀಟ್‌ಗಾಗಿ ಇಬ್ಬರು ಮಹಿಳೆಯರ ನಡುವೆ ಶುರುವಾದ ಜಗಳ ಕೊನೆಗೆ ಒಬ್ಬ ಬಾಲಕಿಯ ಎಂಟ್ರಿ, ಆಕೆಯ ಮೇಲೆ ಚಪ್ಪಲಿ ಏಟಿನ ತಿರುವಿನೊಂದಿಗೆ ಮುನ್ನುಗ್ಗಿತ್ತು.
ಅದು ಹಿಡಕಲ್ ಡ್ಯಾಂ – ಬೆಳಗಾವಿ ಮಾರ್ಗದ ಬಸ್‌ನಲ್ಲಿ ನಡೆದ ಹೊಡೆದಾಟದ ದೃಶ್ಯ ಈಗ ವೈರಲ್ ಆಗಿದೆ. ಇದರಲ್ಲಿ ಸೀಟ್‌ಗಾಗಿ ಇಬ್ಬರು ಮಹಿಳೆಯರ ನಡುವೆ ದೊಡ್ಡ ಕಿತ್ತಾಟವೇ ನಡೆಯುತ್ತದೆ. ಮಧ್ಯೆ ಒಬ್ಬ ಬಾಲಕಿ ಬರುತ್ತಾಳೆ, ಆಗ ಅವಳಿಗೆ ಚಪ್ಪಲಿ ಏಟು ಬೀಳುತ್ತದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ಈ ಘಟನೆ ನಡೆದಿದೆ. ಅರಂಭದಲ್ಲಿ ಸೀಟಿನ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಕೊನೆಗೆ ಅದು ಜೋರಾಗಿ ಸೀಟಿನಲ್ಲಿ ಕುಳಿತ ಮಹಿಳೆ ನಿಂತಿದ್ದ ಮಹಿಳೆಗೆ ಹಲ್ಲೆ ಮಾಡುತ್ತಾಳೆ. ಆಗ ಆಕೆಯ ಜತೆಗಿದ್ದ ಸುಮಾರು 10 ವರ್ಷದ ಬಾಲಕಿ ಸೀಟಿನಲ್ಲಿ ಕುಳಿತ ಮಹಿಳೆಯನ್ನು ತಡೆಯಲು ಮುಂದಾಗುತ್ತಾಳೆ. ಮತ್ತು ಆಕೆ ಮೊದಲು ಹೊಡೆತ ತಿಂದ ಮಹಿಳೆಗೆ ರಕ್ಷಣೆಯಾಗಿ ನಿಲ್ಲುತ್ತಾಳೆ.
ಈ ನಡುವೆ, ಆ ಹುಡುಗಿ ಮತ್ತು ಸೀಟಿನಲ್ಲಿ ಕುಳಿತ ಮಹಿಳೆಯ ನಡುವೆ ಏನೋ ಮಾತುಕತೆ ನಡೆಯುತ್ತದೆ. ಆಗ ಸೀಟಿನಲ್ಲಿ ಕುಳಿತ ಮಹಿಳೆ ತನ್ನ ಚಪ್ಪಲಿಯನ್ನು ತೆಗೆದು ಬಾಲಕಿಯ ಮೇಲೆ ಹಲ್ಲೆ ಮಾಡುತ್ತಾಳೆ. ಪಕ್ಕದಲ್ಲಿ ಕುಳಿತಾಕೆ ಹಿಡಿದುಕೊಂಡರೂ ಬಿಡಿಸಿಕೊಂಡು ಹಲ್ಲೆ ಮಾಡುತ್ತಾಳೆ. ಬಾಲಕಿ ಜೋರಾಗಿ ಅಳುತ್ತಾ ರಕ್ಷಣೆ ಕೋರುತ್ತಾಳೆ.
ಇದನ್ನೂ ಓದಿ : Shakti Scheme: ಶಕ್ತಿ ಯೋಜನೆಯಿಂದ ಹುಟ್ಟಿಕೊಂಡ ವಿಚಿತ್ರ ಸಮಸ್ಯೆ! ನಿರ್ವಾಹಕರ ಕೊರಳಿಗೇ ಉರುಳು
ಆಗ ಎದುರಿನಿಂದ ಬರುವ ಒಬ್ಬ ಪುರುಷ ಮಹಿಳೆಯ ಕೈಯಿಂದ ಚಪ್ಪಲಿಯನ್ನು ಕಿತ್ತುಕೊಂಡು ಆಕೆಯ ಬೆನ್ನಿಗೂ ಒಂದು ಬಾರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಚಪ್ಪಲಿಯೇಟು ತಿಂದ ಮಹಿಳೆ ಮತ್ತು ಬಾಲಕಿ ಬೊಬ್ಬೆ ಹಾಕಿ ಕಣ್ಣೀರು ಸುರಿಸಿದರು. ಇದು ನಿನ್ನ ಬಸ್ಸಲ್ಲ, ನಿನ್ನ ಬಸ್ಸಲ್ಲ ಎಂಬ ಜಗಳ ಜೋರಾಗಿ ನಡೆಯಿತು.
ಅಂತಿಮವಾಗಿ ಈ ಪ್ರಕರಣ ಏನಾಯಿತು ಎನ್ನುವುದು ವಿಡಿಯೊದಲ್ಲಿಲ್ಲ. ಆದರೆ, ಜೋರಾದ ಬೈಗುಳ, ಆಕ್ರೋಶಗಳು ಅಲ್ಲಿ ಕೇಳಿಬಂದವು.