ಬೆಳಗಾವಿ: ಕೋವಿಡ್-19 ಪ್ರಕರಣಗಳು ಚೀನಾ ಮುಂತಾದೆಡೆ ಹೆಚ್ಚುತ್ತಿರುವ ಕಾರಣಕ್ಕೆ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿರುವ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಮೂರನೇ ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್, ನಿನ್ನೆ ಕೇಂದ್ರ ಆರೋಗ್ಯ ಸಚಿವರು ಪತ್ರ ಬರೆದಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಮೂರನೇ ಅಲೆ ಬಳಿಕ ಚೀನಾ, ಜಪಾನ್ ಸೇರಿ ಹಲವು ದೇಶಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ವಿಶೇಷವಾಗಿ ಚೀನಾದಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ.
ಇದನ್ನೂ ಓದಿ | Corona threat | ಹೊರದೇಶದಲ್ಲಿ ಕೋವಿಡ್ ಹೆಚ್ಚಳ: ರಾಜಧಾನಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ
ನಮ್ಮಲ್ಲಿ 3ನೇ ಡೋಸ್ ನೀಡಲು ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಹೀಗಾಗಿ ಈಗ ಕೊವೀಡ್ ಪಾಸಿಟಿವ್ ಬರುವವರನ್ನು ಹೆಚ್ಚಿನ ನಿಗಾ ವಹಿಸಿದ್ದೇವೆ. ಮಂಗಳವಾರ ಮುಖ್ಯ ಕಾರ್ಯದರ್ಶಿಗಳ ಸಭೆ ಮಾಡಿದ್ದೇನೆ.
ಸಿಎಂ ನೇತೃತ್ವದ ಸಭೆಯನ್ನೂ ಮಾಡುತ್ತೇವೆ. ಮತ್ತಷ್ಟು ಕ್ರಮಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡುತ್ತೇವೆ. ಲಸಿಕಾಕರಣ 100% ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಗಟ್ಟಿಯಾಗಿ ಮಾಡಬೇಕಿದೆ.
ಇದರ ಜತೆಗೆ ಸಿದ್ಧತೆಗಳನ್ನು ಮಾಡಬೇಕಿದೆ. ಅತಿ ಹೆಚ್ಚು ಪ್ರಯಾಣಿಕರು ಬರುವ ಸ್ಥಳ ಬೆಂಗಳೂರು ವಿಮಾನ ನಿಲ್ದಾಣ ಆಗಿರುವುದರಿಂದ ಅಲ್ಲಿ ಸ್ವಲ್ಪ ನಿಗಾ ಇಡಲು ಪ್ರಾರಂಭ ಮಾಡಿದ್ದೇವೆ. ಆತಂಕ ಇಲ್ಲ. ಇವತ್ತಿನ ಸಭೆಯಲ್ಲಿ ಇನ್ನಷ್ಟು ಚರ್ಚೆ ಮಾಡುತ್ತೇವೆ.
ಮೂರನೇ ಡೋಸ್ ಯಾರೆಲ್ಲ ತೆಗೆದುಕೊಂಡಿಲ್ಲ ಅವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ. ಮಕ್ಕಳಿಗೂ ಲಸಿಕೆ ಅವಶ್ಯಕತೆ ಇದೆ, ಅವರಿಗೂ ನೀಡಲಾಗುವುದು. ನಾವು ಈ ಸೋಂಕಿನ ಗಂಭೀರತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಸಭೆಯಾದ ಬಳಿಕೆ ಬೇಕಾದ ಮಾರ್ಗಸೂಚಿ ಮಾಡುತ್ತೇವೆ. ಕೇಂದ್ರ ಆರೋಗ್ಯ ಇಲಾಖೆಯ ಜತೆ ಚರ್ಚೆ ಮಾಡುತ್ತೇವೆ.
ಅಲ್ಲಿಂದಲೂ ಮಾರ್ಗದರ್ಶನ, ಸಲಹೆ ಪಡೆಯುತ್ತೇವೆ. ಕೊವೀಡ್ ಎದುರಿಸುವ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಳ್ಳಬೇಕಿದೆ. ಹೊಸ ತಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪಾಸಿಟಿವ್ ಕೇಸ್‌ಗಳನ್ನೂ ಟೆಸ್ಟ್ ಮಾಡುವುದಕ್ಕೆ ಹೇಳಿದ್ದೇವೆ ಎಂದರು.
ಇದನ್ನೂ ಓದಿ | ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?