Site icon Vistara News

Murder Case | ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದವರು ನಾಲ್ಕು ತಿಂಗಳ ಬಳಿಕ ಸೆರೆ

Murder case

ಬೆಳಗಾವಿ : ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ ಮೂವರು ಆರೋಪಿಗಳನ್ನು ಅಥಣಿ ಪೊಲೀಸರು ನಾಲ್ಕು ತಿಂಗಳ ಬಳಿಕ ಬಂಧಿಸಿದ್ದಾರೆ. ಹುಚ್ಚಪ್ಪ ಗುಂಡೇವಾಡಿ,ಅಂಕುಶ ಸೂರ್ಯವಂಶಿ ,ಮುತ್ತಪ್ಪ ತೇಲಿ ಬಂಧಿತ ಆರೋಪಿಗಳು. ಈ ಮೂವರು ಮಲ್ಲಪ್ಪ ಮಗದುಮ್(೩೪) ಎಂಬುವರನ್ನು ಕತ್ತು ಹಿಸುಕಿ ಕೊಲೆ ಮಾಡಿ, ಪೊಲೀಸರನ್ನು ಯಾಮಾರಿಸುವ ಉದ್ದೇಶದಿಂದ ಜೀಪೊಂದನ್ನು ಗೋಡೆಗೆ ಗುದ್ದಿಸಿ ಮೃತದೇಹವನ್ನು ಅದರಡಿ ಹಾಕಿದ್ದರು. ಆದರೆ ಕೊಲೆ ನಡೆದಿರಬಹುದು ಎಂಬ ಗುಮಾನಿ ಮೇಲೆ ತನಿಖೆ ನಡೆಸಿದ್ದ ಪೊಲೀಸರಿಗೆ ಆರೋಪಿಗಳ ಕೃತ್ಯ ಬಯಲಾಗಿದೆ.

ಮೃತ ದೇಹದ ಮೇಲೆ ಕಂಡು ಬಂದಿದ್ದ ಗಾಯದ ಗುರುತು ಹಾಗೂ ಇನ್ನಿತರ ಕುರುಹುಗಳ ಆಧಾರದ ಮೇಲೆ ಅಪಘಾತವಲ್ಲ ಎಂಬುವ ಸುಳಿವು ಪಡೆದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಕೊಲೆಯಾದ ಮಲ್ಲಪ್ಪ ಮಗದುಮ್, ಆರೋಪಿಗಳಲ್ಲಿ ಒಬ್ಬನಾದ ಹುಚ್ಚಪ್ಪ ಗುಂಡೇವಾಡಿಯ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅವರಿಬ್ಬರ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಬೇಸತ್ತ ಹುಚ್ಚಪ್ಪನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ಹುಚ್ಚಪ್ಪ, ತನ್ನ ಪತ್ನಿಯ ಸಾವಿಗೆ ಮಲ್ಲಪ್ಪನೇ ಕಾರಣ ಎಂದು ಯೋಚಿಸಿ, ಕೊಲೆಗೆ ಸಂಚು ರೂಪಿಸಿದ್ದ.

ತನ್ನ ಕೃತ್ಯಕ್ಕೆ ಆರೋಪಿಗಳಾದ ಸೂರ್ಯವಂಶಿ, ಮುತ್ತಪ್ಪ ತೇಲಿಯನ್ನು ಜತೆಗೆ ಸೇರಿಸಿಕೊಂಡಿದ್ದ ಹುಚ್ಚಪ್ಪ. ಮೂವರ ಸೇರಿ ಮಲ್ಲಪ್ಪನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಪೊಲೀಸರ ಹಾದಿ ತಪ್ಪಿಸುವ ಉದ್ದೇಶದಿಂದ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು. .

ಕೊಲೆಯಾದ ಅಥಣಿ ಪಟ್ಟಣದ ಮಲ್ಲಪ್ಪ ಮಗದುಮ್

ಇದನ್ನೂ ಓದಿ | Murder Case | ರೌಡಿಶೀಟರ್‌ ಹಂದಿ ಅಣ್ಣಿ ಕೊಲೆ ಪ್ರಕರಣದ 8 ಆರೋಪಿಗಳು ಪೊಲೀಸರಿಗೆ ಶರಣು

ಅಥಣಿಯ ತರಡೆ ಕಡಿ ಮಷಿನ್ ಬಳಿ ಮೊದಲು ಕೊಲೆ ಮಾಡಿ ನಂತರ ಜೀಪ್ ನಲ್ಲಿ ಶವ ಇರಿಸಿ ನಂತರ ಅಪಘಾತ ಎಂದು ಕಿರಾತಕರು ನಂಬಿಸಿದ್ದರು ಎನ್ನಲಾಗಿದೆ. ಸತತ ನಾಲ್ಕು ತಿಂಗಳ ಬಳಿಕ ಪೊಲೀಸರು ಪ್ರಕರಣವನ್ನು ಭೇದಿಸಿ ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | ಪ್ರೀತಿ ಕೊಂದ ಕೊಲೆಗಾತಿ ಈಗ ಹೇಳೋ ಕತೆಗೆ ಸ್ಫೂರ್ತಿ; ಸುಂದರಿ ಹೆಂಡತಿಯ ಮರ್ಡರ್‌ ಕಹಾನಿ!

Exit mobile version