Site icon Vistara News

Inhuman Behaviour : ಅಪ್ಪನ ಹೆಣ ಬಿಸಾಕಿ ಎಂದ ಮಗಳು, ಅಂತ್ಯ ಸಂಸ್ಕಾರ ನಡೆಸಿದ ಪೊಲೀಸರು; ಬ್ಯಾಂಕ್‌ ಮ್ಯಾನೇಜರ್‌ ಕಥೆ ಇದು

Inhuman Behaviour

ಚಿಕ್ಕೋಡಿ: ಹಣವೇ ಇಂದು ದೇವರಂತೆ/
ಜಗವೇ ಹಣದ ಮುಷ್ಟಿಯಲ್ಲಂತೆ/
ಹಣದ ಮುಂದೆ ತಂದೆ ತಾಯಿ ಲೆಕ್ಕಕ್ಕಿಲ್ಲವೋ/
ನೀತಿಗೆಟ್ಟ ಮಕ್ಕಳಿಗೆ ಪ್ರೀತಿ ಕೊಟ್ಟು ಸಲಹಿದೆನೂ/
ಕೊಳ್ಳಿ ಇಡುವ ಬದಲು ಅವರು ಕೊಳ್ಳೆ ಹೊಡೆದರೋ/
ನನ್ನ ಶವವ ಅನಾಥ ಮಾಡಿ ಓಡಿ ಹೋದರು: ವಿಷ್ಣುವರ್ಧನ್‌ ಅಭಿನಯದ ಸಿರಿವಂತ ಸಿನಿಮಾದ ಹಾಡನ್ನು ಹೋಗುವ ಘಟನೆಯೊಂದು ಚಿಕ್ಕೋಡಿಯಲ್ಲಿ ನಡೆದಿದೆ. ಮಕ್ಕಳು, ಮನೆ, ಸಂಸಾರ, ಬಂಧುಗಳು ಎಂಬ ಸಂಬಂಧದ ಮೇಲೆ (Inhuman Behaviour) ಸಂಶಯ ಬರುವ ಹಾಗೆ ಮಾಡಿದೆ.

ನನ್ನ ಮಗಳು ಕೆನಡಾದಲ್ಲಿದ್ದಾಳೆ ಮಗ ಆಫ್ರಿಕಾದಲ್ಲಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಜೀವವೊಂದು ಬಾಳಿನ ಅಂತ್ಯದಲ್ಲಿ ಅನಾಥ ಹೆಣವಾಗಿ ಕೊನೆಗೆ ಪೊಲೀಸರ ಕೈಯಲ್ಲಿ ಅಂತ್ಯಕ್ರಿಯೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಎದುರಿಸಿದೆ. ಬ್ಯಾಂಕ್‌ ಮ್ಯಾನೇಜರ್‌ (Retired Bank Manager) ಆಗಿದ್ದ ಮೂಲಚಂದ್‌ ಶರ್ಮಾ (72) ಅವರೇ ಹೀಗೆ ಅನಾಥ ಶವವಾದವರು (Dead body). ಇಲ್ಲಿ ಮಕ್ಕಳ ಕ್ರೌರ್ಯದ ನುಡಿಗಳು ಯಾವ ಮಟ್ಟದಲ್ಲಿತ್ತು ಎಂದರೆ ನಿಮಗೆ ಸಾಧ್ಯವಾದರೆ ಅಂತ್ಯಸಂಸ್ಕಾರ (Final rites) ಮಾಡಿ, ಇಲ್ಲವಾದರೆ ಎಲ್ಲಾದರೂ ಎಸೆದು ಬಿಡಿ ಎಂದು ಮಕ್ಕಳು ಪೊಲೀಸರಿಗೇ ಹೇಳಿದ್ದಾರಂತೆ!

ಮೂಲಚಂದ್‌ ಶರ್ಮ ಅವರು ಮೂಲತಃ ಪೂನಾದವರು. ಅವರು ಪಾರ್ಶ್ವವಾಯುವಿಂದ ಬಳಲುತ್ತಿದ್ದರು. ಅವರನ್ನು ಕರೆದುಕೊಂಡು ಒಬ್ಬ ವ್ಯಕ್ತಿ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿರುವ ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಕರೆ ತಂದು, ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನಂತರ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಜ್‌ನಲ್ಲಿ ಇಟ್ಟು ಸಹಲುತ್ತಿದ್ದರು.

ಕೆಲವು ದಿನದ ಹಿಂದೆ ಮೂಲಚಂದ್‌ ಶರ್ಮ ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದ. ಲಾಡ್ಜ್‌ ಮಾಲೀಕರು ಹೋಗಿ ಮೂಲಚಂದ್‌ ಅವರನ್ನು ವಿಚಾರಿಸಿದಾಗ ಭಯಾನಕ ಕಥೆಯೊಂದು ಹೊರಬಿತ್ತು.! ಅದೇನೆಂದರೆ, ಅವರನ್ನು ಆಸ್ಪತ್ರೆಗೆ ಕರೆತಂದು ಲಾಡ್ಜ್‌ನಲ್ಲಿಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ವ್ಯಕ್ತಿ ಇವರ ಸಂಬಂಧಿಕನೇನೂ ಆಗಿರಲಿಲ್ಲ. ಆತ ಒಬ್ಬ ಸಂಬಳಕ್ಕೆ ನೇಮಕ ಮಾಡಿಕೊಂಡಿದ್ದ ಹೋಮ್‌ ನರ್ಸ್‌.

ಅವನಿಗೆ ಕೊಟ್ಟ ದುಡ್ಡಿನ ಅವಧಿ ಮುಗಿದಿತ್ತು. ಕಾಂಟ್ರಾಕ್ಟ್‌ ಮುಗಿದ ಕೂಡಲೇ ಅವನು ಮೂಲಚಂದ್‌ ಅವರನ್ನು ಲಾಡ್ಜ್‌ನಲ್ಲೇ ಬಿಟ್ಟು ಹೋಗಿದ್ದ. ಲಾಡ್ಜ್‌ ಮ್ಯಾನೇಜರ್‌ ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ವಿಚಾರಿಸಿದಾಗ ಮೂಲಚಂದ್‌ ಶರ್ಮಾ ತಮ್ಮ ಬದುಕಿನ ಕಥೆ ಹೇಳಿದ್ದರು.

ʻʻನಾನು ಬಡವ ಅಲ್ಲ,‌ ನನ್ನ ಮಕ್ಕಳು ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಮಗಳು ಕೆನಡಾದಲ್ಲಿದ್ದಾಳೆ, ಮಗ ಆಫ್ರಿಕಾದಲ್ಲಿದ್ದಾಳೆʼʼ ಎಂದು ಹೇಳಿದರು. ಇವರನ್ನು ಚಿಕ್ಕೋಡಿಯ ಆಸ್ಪತ್ರೆಗೆ ಸೇರಿಸೋಣ ಎಂದು ಪೊಲೀಸರು ಪ್ರಯತ್ನಪಟ್ಟರು. ಆಗ ಮೂಲಚಂದ್‌ ಅವರು ಯಾವ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗೆ ಬರಲ್ಲ ಎಂದರಂತೆ.

ಮೂಲಚಂದ್‌ ಅವರ ಕೈಯಿಂದ ಮಕ್ಕಳ ಫೋನ್ ನಂಬರ್ ಪಡೆದು ಹಲವು ಬಾರಿ ಕರೆ ಮಾಡಿದರೂ ಮಗನಾಗಲೀ, ಮಗಳಾಗಲೀ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಬಳಿಕ ಪೊಲೀಸರು ಮೂಲಚಂದ್ರ ಶರ್ಮಾರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.

ಎರಡು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಮೃತಪಟ್ಟಿದ್ದಾರೆ. ಕೊನೆಗೆ ಮತ್ತೊಮ್ಮೆ ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ. ಆಗ ಒಮ್ಮೆ ಸಂಪರ್ಕಕ್ಕೆ ಸಿಕ್ಕಿದ ಮಗಳು ಆಡಿದ ಮಾತು ಕೇಳಿ ಪೊಲೀಸರೇ ದಂಗಾಗಿ ಹೋದರು.

ʻʻಅವರು ನಮ್ಮ ತಂದೆ ಆವಾಗ ಆಗಿದ್ದರು. ಈಗ ಇಲ್ಲ. ನಾವೇನಾದ್ರೂ ಚಿಕಿತ್ಸೆ ಕೊಡಿಸಿ ಅಂತ ಹೇಳಿದ್ದೇವಾ? ” ಅಂತ್ಯಕ್ರಿಯೆ ಮಾಡೋಕೆ ಆದರೆ ಮಾಡಿ‌ ಇಲ್ಲ ಹೆಣ ಬಿಸಾಕಿ” ಎಂದು ಮಗಳು ಪೊಲೀಸರಿಗೇ ಆವಾಜ್‌ ಹಾಕಿದ್ದಾಳೆ. ಪೊಲೀಸರು ಬೇರೆ ದಾರಿ ಇಲ್ಲದೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಾಗರಮುನ್ನೊಳ್ಳಿ ಗ್ರಾಮದಲ್ಲಿ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಿದರು.

ಒಬ್ಬ ಹಿರಿಯ ವ್ಯಕ್ತಿಯ ಮೃತದೇಹವನ್ನು ಜತನದಿಂದ ಅಂತ್ಯಕ್ರಿಯೆ ಮಾಡಿದ ಪೊಲೀಸರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅದೇ ಹೊತ್ತಿಗೆ ಮಕ್ಕಳ ವರ್ತನೆಯನ್ನು ಜನರು ಖಂಡಿಸುತ್ತಿದ್ದಾರೆ.

ಇದನ್ನೂ ಓದಿ: Murder Case: ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಕೊಲೆಗೈದ ತಂದೆ; ಸುಣ್ಣದ ಡಬ್ಬಿಯಲ್ಲಿತ್ತು ಹಂತಕನ ನಂಬರ್‌!

Exit mobile version