ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನೋಡಲು ಪ್ರತ್ಯೇಕವಾಗಿ ಕಂಡರೂ, ಜೆಡಿಎಸ್‌ಗೆ ನೀಡುವ ಪ್ರತಿ ಮತವೂ ಕಾಂಗ್ರೆಸ್ ಪಕ್ಷದ ಗೆಲುವಿಗೇ ಕಾರಣವಾಗುತ್ತದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದರು. ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ (Janasankalpa Yatre) ಭಾಗವಹಿಸಿ ಅಮಿತ್ ಶಾ ಮಾತನಾಡಿದರು.
ಬೆಳಗಾವಿಗೆ ಬಂದ ಮೇಲೆ ಕಿತ್ತೂರು ರಾಣಿ ಚೆನ್ನಮ್ಮನನ್ನು ಸ್ಮರಿಸಿಕೊಳ್ಳಲೇಬೇಕು. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಅವರು ವೀರ ಸಾವರ್ಕರ್ ಅವರಿಗೆ ಸಹಾಯ ಮಾಡಿದ್ದರು. ವಿಧಾನಸಭೆಯಲ್ಲಿ ವೀರ ಸಾವರ್ಕರ್ ಚಿತ್ರ ಅಳವಡಿಸಿ ಇಡೀ ಕರ್ನಾಟಕದ ಪರವಾಗಿ ಗೌರವ ನೀಡುವ ಕಾರ್ಯ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಂದಿನ ಐದು ವರ್ಷ ನಿಮ್ಮನ್ನು ಯಾರು ಆಳಬೇಕು ಎಂದು ನಿರ್ಧಾರ ಮಾಡಿ. ಒಂದು ಕಡೆ ಕುಟುಂಬ ರಾಜಕಾರಣದ ಕಾಂಗ್ರೆಸ್ ಹಾಗೂ ಜೆಡಿಎಸ್. ಇನ್ನೊಂದು ಕಡೆ ರಾಷ್ಟ್ರಭಕ್ತರ ಬಿಜೆಪಿ ಪಕ್ಷ. 15-20 ಸೀಟು ಪಡೆದು ಕಾಂಗ್ರೆಸ್ ಮೈತ್ರಿಯೊಂದಿಗೆ ಪರಿವಾರ ರಾಜಕಾರಣವನ್ನು ಜೆಡಿಎಸ್ ಹೇರುತ್ತದೆ. ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ದೆಹಲಿಯ ನಾಯಕರಿಗೆ ಎಟಿಎಂ ರೀತಿ ಕೆಲಸ ಮಾಡಿತ್ತು. ಸಮಗ್ರ ಕರ್ನಾಟಕಕ್ಕೆ ಹೇಳುವುದೇನೆಂದರೆ, ಜೆಡಿಎಸ್‌ಗೆ ನೀಡುವ ಪ್ರತಿ ಮತವೂ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೇ ನಿಲ್ಲುತ್ತದೆ, ಕಾಂಗ್ರೆಸ್ ಪಕ್ಷವನ್ನೇ ಗೆಲ್ಲಿಸುತ್ತದೆ ಎಂದರು.
ಇದನ್ನೂ ಓದಿ : ಟಿಪ್ಪು ವಿವಾದ : ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಫೋಟೊ; ಪತ್ನಿಯ ಹೆಸರಲ್ಲಿ ಸಾವರ್ಕರ್ ಗಲಾಟೆ ಆರೋಪಿ ಷರೀಫ್ ಕೃತ್ಯ
ಈ ಜಿಲ್ಲೆಯ 18ರಲ್ಲಿ 16 ಸೀಟುಗಳನ್ನು ಬಿಜೆಪಿ ಗೆಲ್ಲುವ ಯೋಜನೆ ರೂಪಿಸಿದೆ. ಇಷ್ಟು ಜನರನ್ನು ಗೆಲ್ಲಿಸಿ ಕಳಿಸುತ್ತೀರ? ಮೋದಿಯವರ ಕೈ ಬಲಪಡಿಸುತ್ತೀರ? ಮೋದಿಯವರ ಮೇಲೆ ಭರವಸೆ ಇಟ್ಟು ಪೂರ್ಣ ಬಹುಮತ ಸರ್ಕಾರ ಮಾಡಿ. ದೇಶದಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೇರಿಸಿ ಎಂದು ಕರೆ ನೀಡಿದರು.