ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ತಮ್ಮ ಜನ್ಮದಿನದಂದು, ತಾವು ಓದಿದ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಲೇಜು ದಿನಗಳನ್ನು ಸ್ಮರಿಸಿದರು. ಕೆ.ಎಲ್.ಇ. ಸೊಸೈಟಿಯ ಬಿ.ವಿ. ಬೂಮರೆಡ್ಡಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೊಮ್ಮಾಯಿ ಮಾತನಾಡಿದರು.
ಈಗ ಕಾಲೇಜು ಕ್ಯಾಂಪಸ್ ಬಹಳ ಅಭಿವೃದ್ಧಿಯಾಗಿದೆ. ಈ ಕ್ಯಾಂಪಸ್ ನೋಡಿದಾಗ, ಈಗ ನಾವು ಇಲ್ಲಿ ವಿದ್ಯಾರ್ಥಿಯಾಗಬೇಕಿತ್ತು ಎನ್ನಿಸುತ್ತಿದೆ. ಅವತ್ತು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಬಿಟ್ಟರೆ ಬೇರೆ ಕೋರ್ಸ್ ಇರಲಿಲ್ಲ ಎಂದ ಬೊಮ್ಮಾಯಿ, ತಮಗೆ ಪಾಠ ಮಾಡಿದ ಶಿಕ್ಷಕರ ಹೆಸರುಗಳನ್ನು ಹೇಳಿ ನೆನೆದರು. ಬಿವಿಬಿ ಕ್ಯಾಂಟೀನ್ ನಮ್ಮ ಬಹಳ ಫೇವರಿಟ್ ಜಾಗ. ಕ್ಯಾಂಟೀನ್‌ನಲ್ಲಿ ಬೋಂಡಾ ಸೂಪ್ ಬಹಳ ಚೆನ್ನಾಗಿತ್ತು ಎಂದು ಅಂದಿನ ದಿನಗಳನ್ನು ಸ್ಮರಿಸಿದರು. ನಾವು ಬದುಕಿನಲ್ಲಿ ಎಷ್ಟೇ ದೊಡ್ಡವರಾದರೂ ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳನ್ನು ಮರೆಯಬಾರದು. ಸಂಸ್ಥೆಗೆ ಏನೆಲ್ಲ ಕೊಡಬೇಕೊ ಅದೆಲ್ಲವನ್ನೂ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದು ನಮ್ಮ ಧರ್ಮ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಭಾರತವು ವಿಶ್ವದಲ್ಲೆ ಅತ್ಯಂತ ಸದೃಢವಾಗಿ ಬೆಳೆಯುತ್ತಿರುವ ರಾಷ್ಟ್ರ. ಮುಂದಿನ 25 ವರ್ಷ ಭಾರತದ ರಾಷ್ಟ್ರ. ಇದರಲ್ಲಿ ತಾಂತ್ರಿಕ ಹಾಗೂ ಕೌಶಲ್ಯ ಹೊಂದಿದ ಯುವಕರ ಪಾತ್ರ ಅತ್ಯಂತ ಪ್ರಮುಖವಾದದ್ದು. ದೇಶವು ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಆಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಲ್ಲಿ ಕರ್ನಾಟಕದ ಪಾಲು ಒಂದು ಲಕ್ಷ ಕೋಟಿ ಡಾಲರ್ ಇರಬೇಕೆಂದು ನಿರ್ಧಾರ ಮಾಡಿದ್ದೇವೆ. ಕೇಂದ್ರ ಸರ್ಕಾರದ ಜತೆಗೂಡಿ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ಇದೇ ಡಬಲ್ ಇಂಜಿನ್ ಸರ್ಕಾರದ ಲಾಭ ಎಂದರು.
ಇದನ್ನೂ ಓದಿ : Amit Shah : ರಾಜ್ಯದಲ್ಲಿ ಶನಿವಾರ ಅಮಿತ್ ಶಾ ಪ್ರವಾಸ: ರಂಗೇರಿದ ಚುನಾವಣಾ ಕಣ
ಅಮಿತ್ ಶಾ ಅವರನ್ನು ಶ್ಲಾಘಿಸಿದ ಬೊಮ್ಮಾಯಿ, ಅವರು ಗೃಹಸಚಿವರಾದ ನಂತರ ವಿಧಿವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಗುಜರಾತ್‌ನಲ್ಲಿ ಮಾಡಿದಂತಹದ್ದೇ ಒಂದು ಮಾದರಿಯನ್ನೂ ಕರ್ನಾಟಕದಲ್ಲೂ ಕೊಡಲಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆಗೆ 700 ಕೋಟಿ ರೂ. ನೀಡಿದ್ದಾರೆ. ಪ್ರಥಮ ಬಾರಿಗೆ ಮೋದಿ ಸರ್ಕಾರ ರಚಿಸಿದ ಸಹಕಾರ ಸಚಿವಾಲಯದ ಸಚಿವರೂ ಆಗಿ ಅಮಿತ್ ಶಾ ಅವರು ಕಾರ್ಯನಿರ್ವಹಿಸುತ್ತಿದ್ದು, ಬರುವ ದಿನದಲ್ಲಿ ಬಹುದೊಡ್ಡ ಬದಲಾವಣೆ ಕಾಣಲಿದ್ದೇವೆ ಎಂದು ಹೇಳಿದರು.