Site icon Vistara News

Karnataka Politics : ಕಾಂಗ್ರೆಸ್‌ 300 ಕಡೆ ಪ್ರತಿಭಟನೆ ಮಾಡುತ್ತಿರುವುದು ಏಕೆ?: ಸಿಎಂ ಬೊಮ್ಮಾಯಿ ನೀಡಿದ ಉತ್ತರ ಇದು

ಬೆಳಗಾವಿ: ಬೆಂಗಳೂರನ್ನು ಹಾಳು ಮಾಡಿದವರು ಕಾಂಗ್ರೆಸ್‌ನವರು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮದ್ವರೊಂದಿಗೆ ಮಾತನಾಡಿದ ಬೊಮ್ಮಾಯಿ, ಹತ್ತು ಹದಿನೈದು ಜನ ಸೇರಿ 300 ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಕಡೆ ಎಲ್ಲ ಕಾಂಗ್ರೆಸ್‌ ನಾಯಕರೂ ಬರುವುದಿಲ್ಲ. ಇದಕ್ಕಾಗಿಯೇ ಮುನ್ನೂರು ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಲ್ಲಿ ಅವರ ಕಾರ್ಯಕರ್ತರನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಒತ್ತುವರಿಯಾಗಲು, ರಾಜಕಾಲುವೆ ಮುಚ್ಚಲು, ಅದರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಲು ಹತ್ತು ಹಲವಾರು ಹಗರಣಗಳು ಅವರ ಕಾಲದಲ್ಲಿ ಆಗಿವೆ. ಅದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕಾಂಗ್ರೆಸ್ ನ ಅವಿಭಾಜ್ಯ ಅಂಗ. ಕಾಂಗ್ರೆಸ್ ನ ನಾಯಕರು ಭ್ರಷ್ಟಾಚಾರದಲ್ಲಿ ಪಿ.ಹೆಚ್.ಡಿ ಪಡೆದಿದ್ದಾರೆ. ಅವರು ಈ ರೀತಿಯ ನಾಟಕ ಮಾಡುತ್ತಾರೆ. ಜನ ಇದನ್ನು ಒಪ್ಪುವುದಿಲ್ಲ.

ಲೋಕಾಯುಕ್ತ ಮುಚ್ಚಿದ ಇವರು ಭ್ರಷ್ಟಾಚಾರಕ್ಕೆ ಕೊಡುಗೆ ನೀಡಿದ್ದಾರೆ. ಅದಕ್ಕೆ ರಕ್ಷಣೆ ನೀಡಿದವರು. ಅವರ ವಿರುದ್ಧದ ಎಲ್ಲ ದೂರುಗಳನ್ನು ಎಸಿಬಿ ಗೆ ಕೊಟ್ಟು ಮುಚ್ಚಿಹಾಕಿದ್ದಾರೆ. ಅವೆಲ್ಲವೂ ಲೋಕಾಯುಕ್ತಕ್ಕೆ ಬಂದು ತನಿಖೆಯಾಗುವುದು ಎಂದು ಹೇಳಿದರು.

ಚರ್ಚೆ ಮಾಡದೇ ಓಡಿ ಹೋದರು
ಬಹಿರಂಗ ಚರ್ಚೆ ಮಾಡಲಿ ಎಂದು ಕಾಂಗ್ರೆಸ್ ಆಹ್ವಾನಿಸಿರುವ ಬಗ್ಗೆ ಉತ್ತರಿಸಿ ಬಹಿರಂಗ ಚರ್ಚೆ ಎನ್ನುವುದು ಹಾಸ್ಯಾಸ್ಪದ. ವಿಧಾನಸಭೆಯಲ್ಲಿ ಚರ್ಚೆಗೆ ನೋಟೀಸು ನೀಡಿದಾಗ ಓಡಿ ಹೋದರು. ಬೆಳಗಾವಿಯಲ್ಲಿ ಒಂದು ವಾರದ ಮುನ್ನ ನೋಟೀಸು ಕೊಟ್ಟರು. ಕೊನೆ ಗಳಿಗೆವರೆಗೂ ಮಾತನಾಡಲಿಲ್ಲ. ಅದಕ್ಕಿಂತ ಬಹಿರಂಗ ಸಭೆ ಇನ್ಯಾವುದು ಬೇಕು. ಇಡೀ ರಾಜ್ಯವೇ ನೋಡುತ್ತಿರುತ್ತದೆ. ವೇದಿಕೆಯಾಗಿರುವುದೇ ಅದಕ್ಕೆ. ಅಲ್ಲಿ ಚರ್ಚಿಸದೆ ಇಲ್ಲಿ ಮಾತನಾಡುವುದು ಪ್ರಯೋಜನವಿಲ್ಲ. ನಾವು ವಿಧಾನಸಭೆಯಲ್ಲಿ ಎದುರಿಸಲು ಶಕ್ತಿಯಿದೆ. ಜನರ ಬಳಿಯೂ ತೆಗೆದುಕೊಂಡು ಹೋಗುವ ಶಕ್ತಿಯಿದೆ ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.

ಜನವರಿ 28 ಕ್ಕೆ ರಾಜ್ಯಕ್ಕೆ ಅಮಿತ್ ಶಾ
ಜನವರಿ 28ಕ್ಕೆ ಅಮಿತ್ ಶಾ ಹುಬ್ಬಳ್ಳಿ ಮತ್ತು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಒಂದು ಸಾರ್ವಜನಿಕ ಸಭೆ ಹಾಗೂ ಮತ್ತೊಂದು ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಯಲಿದೆ ಎಂದರು.

ಇದನ್ನೂ ಓದಿ | ಮುಂದಿನ ಬಾರಿ ಪ್ರಧಾನಿ ಆಗುವವರು ಯಾರೆಂದು ಗುಜರಾತ್​ ಚುನಾವಣಾ ಫಲಿತಾಂಶವೇ ಹೇಳಿದೆ ಎಂದ ಗೃಹ ಸಚಿವ ಅಮಿತ್​ ಶಾ

ಗೋವಾ ಸರ್ಕಾರ ಮಹದಾಯಿ ಡಿಪಿಆರ್ ರದ್ದುಗೊಳಿಸಬೇಕೆಂದು ನಿರ್ಣಯ ಅಂಗೀಕಾರ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನ್ಯಾಯಮಂಡಲಿ ರಚನೆಯಾಗಿ, ಆದೇಶ ನೀಡಿ, ಅಧಿಸೂಚನೆ ಹೊರಡಿಸಿದೆ. ನ್ಯಾಯಮಂಡಲಿ ಆದೇಶ ಸುಪ್ರೀಂಕೋರ್ಟ್ ಆದೇಶವಿದ್ದಂತೆ. ಅದರ ಆಧಾರದ ಮೇಲೆ. ಕಾನೂನು ಬದ್ಧವಾಗಿ ಕೆಲ್ಸ ಮಾಡುತ್ತಿದ್ದೇವೆ. ಈ ನಿರ್ಣಯ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕಳಸಾ ಬಂಡೂರಿ ಯೋಜನೆಗೆ ಡಿಪಿಆರ್ ದೊರೆತಿದ್ದು, ಅರಣ್ಯ ಇಲಾಖೆಯ ಅನುಮೋದನೆ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.

Exit mobile version