Site icon Vistara News

Lakshmi Hebbalkar : ಮಗನ ಪರ ಪ್ರಚಾರಕ್ಕೆ ಅಂಗನವಾಡಿ ಸಿಬ್ಬಂದಿಯನ್ನು ಬಳಸಿದ್ರಾ ಹೆಬ್ಬಾಳ್ಕರ್‌?

Lakshmi Hebbalkar misuse

ಬೆಳಗಾವಿ:‌ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ (Mrinal Hebbalkar) ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ (Belagavi Constituency) ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಆಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಅಧಿಕಾರ ದುರುಪಯೋಗದ (Misuse of Power) ಆರೋಪ ಎದುರಾಗಿದೆ.

ಮಗನ ಸ್ಪರ್ಧೆ ಖಚಿತ ಆಗುತ್ತಿದ್ದಂತೆಯೇ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಅಂಗನವಾಡಿ ಕಾರ್ಯಕರ್ತೆಯರು (Anganawadi Workers), ಆಶಾ ಕಾರ್ಯಕರ್ತೆಯರು, ಸಹಾಯಕಿಯರನ್ನು ಬುಧವಾರ ತಮ್ಮ ಕಚೇರಿಗೆ ಕರೆಯಿಸಿಕೊಂಡು ಮಗನ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ಬೆಳಗಾವಿಯ ಕುವೆಂಪು ನಗರದಲ್ಲಿರುವ ಗೃಹ ಕಚೇರಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಕರೆಸಿಕೊಂಡು ಮಗನ ಪರ ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ಮಾಡಿದ ಹೆಬ್ಬಾಳ್ಕರ್‌ ಅವರು, ಚುನಾವಣೆಯಲ್ಲಿ ನನ್ನ ಮಗನ ಪರ ಕೆಲಸ ಮಾಡಿ ವೋಟ್ ಹಾಕಿಸಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. 500ಕ್ಕೂ ಅಧಿಕ ಕಾರ್ಯಕರ್ತೆಯರೊಂದಿಗೆ ಹೆಬ್ಬಾಳ್ಕರ್‌ ಅವರು ಸಭೆ ಮಾಡುವಾಗಲೇ ಚುನಾವಣಾ ಅಧಿಕಾರಿಗಳು, ಪ್ಲೇಯಿಂಗ್ ಸ್ಕ್ವಾಡ್ ಸಿಬ್ಬಂದಿ ದಾಳಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಹೆಬ್ಬಾಳ್ಕರ್ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವುದು ತಿಳಿದುಬಂತು ಎನ್ನಲಾಗಿದೆ. ಎಲ್ಲರಿಂದಲೂ ಮಾಹಿತಿ ಪಡೆದುಕೊಂಡು ಚುನಾವಣಾಧಿಕಾರಿಗಳು ವಾಪಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಹೆಬ್ಬಾಳ್ಕರ್ ಅವರಿಂದಲೂ ಮಾಹಿತಿ ಪಡೆದಿದ್ದಾರೆ. ಚುನಾವಣಾ ಅಧಿಕಾರಿಗಳು ಸಚಿವೆ ಹೆಬ್ಬಾಳ್ಕರ್ ವಿರುದ್ಧ ಕೇಸ್ ದಾಖಲಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Lok Sabha Election 2024 : ಕಾಂಗ್ರೆಸ್‌ನ 16 ಟಿಕೆಟ್‌ ಫೈನಲ್‌; ಹೆಬ್ಬಾಳ್ಕರ್‌ ಪುತ್ರ, ಜಾರಕಿಹೊಳಿ ಪುತ್ರಿ ಕಣಕ್ಕೆ?

ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹೇಳುವುದೇನು?

ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಭೆ ವಿಚಾರ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಭೆ ಮಾಡಿಲ್ಲ, ಕಾರ್ಯಕರ್ತೆಯರಿಗೆ ಇತ್ತೀಚೆಗೆ ಕೆಲಸದ ಒತ್ತಡ ಜಾಸ್ತಿ ಆಗ್ತಿದೆ, ಈಗ ಬಿಎಲ್ಒ ಆಗಿ ಕೆಲಸ ಮಾಡ್ತಿದ್ದಾರೆ, ಬಿಎಲ್ಒ ಆಗಲು ನಮಗೆ ತೊಂದರೆ ಆಗ್ತಿದೆ ಎಂದು ಹೇಳಲು ಬಂದಿದ್ದರು. ಆದರೆ, ತಿಳಿ ಹೇಳಿ ಕೆಲಸ ಮಾಡಿ ಅಂತಾ ಹೇಳಿದ್ದೇನೆ ಎಂದು ಹೇಳಿದರು.

ಚುನಾವಣಾ ಅಧಿಕಾರಿಗಳಿಂದ ದೂರು ದಾಖಲಿಸುತ್ತಿರುವ ಬಗ್ಗೆ ಕೇಳಿದಾಗ, ʻʻದೂರು ಕೊಡಲಿ ಇದೆಲ್ಲಾ ಸರ್ವೇ ಸಾಮಾನ್ಯ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ದೇಶದ ಕಾನೂನಿಗೆ ಗೌರವ ಕೊಡುತ್ತೇನೆ. ಇದು ನನ್ನ ಐದನೇ ಚುನಾವಣೆ. ಹೀಗಾಗಿ ಚುನಾವಣೆ ಹೇಗೆ ಮಾಡಬೇಕು ಅನ್ನೋದು ಗೊತ್ತುʼʼ ಎಂದು ಹೇಳಿದರು ಲಕ್ಷ್ಮೀ ಹೆಬ್ಬಾಳ್ಕರ್‌.

Exit mobile version