ಬೆಳಗಾವಿ: ರಮೇಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬದವರ ಕುರಿತು ಮಾತನಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ, ಮಾತನಾಡಬೇಕು ಎಂದರೆ ನಮ್ಮ ಡಿಕ್ಷ್ನರಿಯಲ್ಲೂ ಪದಗಳಿವೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಆರೋಪ ಹೊರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸುದ್ದಿಗೋಷ್ಠಿ ನಡೆಸಿದರು. ನಾನು ಇಂಜಿನಿಯರಿಂಗ್ ಓದಿದ್ದೇನೆ. ನಮ್ಮ ಅಕ್ಕ ಎಂಎ ಓದಿದ್ದಾಳೆ. ಅಸಾಂವಿಧಾನಿಕ ಪದಗಳನ್ನು ಅವರ ರೀತಿಯಲ್ಲೇ ಬಳಸಿದರೆ ಜನರು ನಮ್ಮನ್ನು ಅಳೆಯುತ್ತಾರೆ. ಆಗ ಅವರಿಗೂ ನಮಗೂ ವ್ಯತ್ಯಾಸ ಇರುವುದಿಲ್ಲ. ಹೀಗೆ ಮಾತನಾಡಲು ಹೊರಟರೆ ನಮ್ಮ ಡಿಕ್ಷ್ನರಿಯಲ್ಲೂ ಪದಗಳಿವೆ.
ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿ ಟಿಕೆಟ್ ಕೊಡಿಸಲು ಹೇಗೆ ಸಾಧ್ಯ? ಆಗ ಡಾ. ಜಿ. ಪರಮೇಶ್ವರ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರು ಹೇಗೆ ಪ್ರಭಾವ ಬೀರಿದರು? ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಸಿಡಿ ಪ್ರಕರಣ ಹೊರಬಂದು ಒಂದೂವರೆ ವರ್ಷ ಕಳೆದಿದೆ. ಈಗ ಏಕೆ ಸಿಬಿಐಗೆ ವಹಿಸಲು ಕೇಳುತ್ತಿದ್ದೀರ? ಸಿಬಿಐ ಸೇರಿ ಅನೇಕ ಸಂಸ್ಥೆಗಳನ್ನು ಚುನಾವಣೆ ಸಮಯದಲ್ಲಿ ಬಿಜೆಪಿಯವರು ದುರುಒಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ನಾವು ಅನೇಕ ಬಾರಿ ಹೇಳುತ್ತಿದ್ದೇವೆ. ಈಗ ಇದು ಆ ಮಾತನ್ನು ಪುಷ್ಠೀಕರಿಸುತ್ತದೆ.
ಇದನ್ನೂ ಓದಿ : Karnataka Election | ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಬಳಿಕ ಈಗ ಆಣೆ ಪ್ರಮಾಣ ರಾಜಕೀಯ!
ರಮೇಶ್ ಜಾರಕಿಹೊಳಿ ಅವರು ನಮ್ಮನ್ನೂ ಬಿಜೆಪಿಗೆ ಕರೆದಿದ್ದರು. ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದು ಬೇಡ ಎಂದು ನಾವು ಅಲ್ಲಿಗೆ ಹೋಗಲಿಲ್ಲ. ಆ ಸಿಟ್ಟಿಗಾಗಿ ರಮೇಶ್ ಜಾರಕಿಹೊಳಿ ಈ ರೀತಿ ಮಾತನಾಡಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ. ನಮ್ಮ ಜತೆ ಜನರಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದು ಬರುತ್ತಾರೆ, ಮುಂದೆ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತದೆ ಎಂದಿದ್ದಾರೆ.