Site icon Vistara News

Laxmi Hebbalkar : ಬೆಳಗಾವಿ ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್‌; ಜಮೀನು ಬಾಡಿಗೆ ಹೆಚ್ಚಳ!

Minister Laxmi Hebbalkar infront of Belagavi Suvarna Vidhana Soudha

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌದದ (Belagavi Suvarna Vidhana Soudha) ಸಮೀಪ ಇರುವ ರೈತರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Minister Laxmi Hebbalkar) ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಈ ಬಾರಿ ವಿಧಾನ ಮಂಡಲ ಅಧಿವೇಶನದ (Assembly Session) ವೇಳೆ ರೈತರಿಗೆ ದುಪ್ಪಟ್ಟು ಲಾಭ ಆಗುವಂತೆ ಮಾಡಿದ್ದಾರೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರತಿ ವರ್ಷವೂ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತವೆ. ಈ ಪ್ರತಿಭಟನೆಗೆ ಸುವರ್ಣ ವಿಧಾನಸೌಧದಿಂದ ದೂರ ಇರುವ ಜಮೀನುಗಳಲ್ಲಿ ಟೆಂಟ್‌ ಹಾಕಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗುತ್ತಿತ್ತು. ಇಲ್ಲಿ ಬಂದು ಪ್ರತಿಭಟನೆ ಮಾಡುವವರಿಗೆ ಜಾಗಕ್ಕೆ ಇಂತಿಷ್ಟು ಎಂದು ದರವನ್ನು ನಿಗದಿಪಡಿಸಲಾಗಿತ್ತು. ಆ ಹಣವನ್ನು ಅವರು ಜಮೀನು ಮಾಲೀಕರಿಗೆ ನೀಡಬೇಕಿತ್ತು. ಈಗ ವಿವಿಧ ಪ್ರತಿಭಟನೆಗಳಿಗೆ ಬಳಸಲಾಗುವ ರೈತರ ಜಮೀನಿನ ಬಾಡಿಗೆಯನ್ನು ಹೆಚ್ಚಳ ಮಾಡಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸೂಚಿಸಿದ್ದಾರೆ.

ಈಗಾಗಲೇ ನೀಡುತ್ತಿರುವ ದರ ನಮಗೆ ಯಾವುದಕ್ಕೂ ಸಾಲುವುದಿಲ್ಲ. ಪ್ರತಿಭಟನೆಗೆ ನೀಡಲಾಗುವ ಜಾಗದ ಬಾಡಿಗೆ ದರವನ್ನು ಏರಿಕೆ ಮಾಡಿ ಎಂದು ಹಲವು ವರ್ಷಗಳಿಂದ ರೈತರು ಮನವಿ ಮಾಡುತ್ತಲೇ ಬರುತ್ತಿದ್ದರು. ಆದರೆ, ಈ ಬಾರಿ ರೈತರ ಮನವಿಗೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಂದಿಸಿದ್ದಾರೆ. ಅವರಿಗೆ ಈ ಹಿಂದೆ ಬರುತ್ತಿದ್ದ ಬಾಡಿಗೆ ದರಕ್ಕಿಂತ ದುಪ್ಪಟ್ಟು ಬರುವಂತೆ ಮಾಡಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಅದರಂತೆ ಕ್ರಮ ವಹಿಸಲಾಗಿದೆ.

ಇದನ್ನೂ ಓದಿ: ಹಳೇ, ಕೊಳಕು ಬಟ್ಟೆ ಹಾಕಿ ಬರುವ ಬಡವರಿಗೂ ಸ್ಪಂದಿಸಿ ಚಿಕಿತ್ಸೆ ನೀಡಿ: ಸಿದ್ದರಾಮಯ್ಯ ಹೃದಯಸ್ಪರ್ಶಿ ಮಾತು

ಜಿಲ್ಲಾಧಿಕಾರಿಗೆ ಸೂಚಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್

ರೈತರ ಮನವಿಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಳೆದ ವರ್ಷ ಪ್ರತಿಭಟನೆಯ ಟೆಂಟ್ ನಿರ್ಮಾಣಕ್ಕೆ ಬಳಸಲಾಗಿದ್ದ ರೈತರ ಜಮೀನಿಗೆ ಪ್ರತಿ ಗುಂಟೆಗೆ ರೂ. 1200 ನೀಡಲಾಗಿತ್ತು. ಆ ಜಮೀನಿನಲ್ಲಿ ಯಾವುದೇ ಫಸಲು ಬೆಳೆದಿರಲಿಲ್ಲ.
ಈ ಬಾರಿ ಹಲಗಾ ಗ್ರಾಮದ ರೈತರ 3.28 ಎಕರೆ ಜಮೀನನ್ನು ಪ್ರತಿಭಟನಾ ಟೆಂಟ್‌ಗಾಗಿ ಬಳಸಲಾಗುತ್ತಿದೆ. ಈ ಜಮೀನಿನಲ್ಲಿ ರೈತರು ಫಸಲು ಬೆಳೆದಿದ್ದರಿಂದ ಪ್ರತಿ ಗುಂಟೆಗೆ ರೂ. 3,000 ನೀಡುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ನೀಡಿದ್ದರು.‌

3000 ರೂ. ನೀಡಲು ಕ್ರಮ: ಉಪ ವಿಭಾಗಾಧಿಕಾರಿ

ಸಚಿವರ ಸೂಚನೆಯಂತೆ ರೈತರಿಗೆ ಪ್ರತಿ ಗುಂಟೆಗೆ ರೂ. 3000 ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಭಾಗದ ರೈತರಿಗೆ ಈ ನಿರ್ಧಾರದಿಂದ ಪರ್ಯಾಯ ಆದಾಯದ ಮೂಲ ಸೃಷ್ಟಿಯಾದಂತೆ ಆಗುತ್ತದೆ.

ಇದನ್ನೂ ಓದಿ: Congress Karnataka : ನಿಗಮ-ಮಂಡಳಿ ನೇಮಕದಲ್ಲಿ ಸಿಎಂ, ಡಿಸಿಎಂ ಏಕಪಕ್ಷೀಯ ನಿರ್ಧಾರ; ಜಾರಕಿಹೊಳಿ ಬೇಸರ

ಇಲ್ಲಿ ಒಮ್ಮೊಮ್ಮೆ ಪ್ರತಿಭಟನೆಗಳು ಅಧಿವೇಶನ ನಡೆಯುವಷ್ಟೂ ದಿನ ನಡೆಯುತ್ತವೆ. ಇದರಿಂದ ರೈತರಿಗೆ ಈಗಿನ ದರದಂತೆ ಹೆಚ್ಚಿಗೆ ಲಾಭವೂ ದೊರೆಯುತ್ತದೆ. ಈ ಬಗ್ಗೆ ರೈತರು ಫುಲ್‌ ಖುಷ್‌ ಆಗಿದ್ದಾರೆ.

Exit mobile version