ವಿಧಾನ ಪರಿಷತ್: ಉಪಕುಲಪತಿಯಾಗಿ ನೇಮಕವಾಗಲು ಐದು ಕೋಟಿ ರೂ. ಲಂಚ ನೀಡಬೇಕು ಎಂಬ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಕಾಂಗ್ರೆಸ್ ಪ್ರಸ್ತಾಪಿಸಿದ ವಿಚಾರದಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿ ಉಂಟಾಯಿತು.
ಪತ್ರಿಕೆಗಳಲ್ಲಿ ಈ ಕುರಿತು ಬಂದಿರುವ ವರದಿಯನ್ನು ತೋರಿಸಿದ ಕಾಂಗ್ರೆಸ್ ಸದಸ್ಯರು, ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಬಯಸಿದರು. ಪತ್ರಿಕೆಗಳಲ್ಲಿ ಬಂದಿರುವುದರ ಬಗ್ಗೆ ಚರ್ಚೆ ಮಾಡಲು ಆಗುವುದಿಲ್ಲ. ದಾಖಲೆ ಇದ್ದರೇ ಚರ್ಚೆಗೆ ಸಿದ್ಧ. ನಾವು ಅಂತಹ ಪಾಪ ಮಾಡಿಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಮಧ್ಯಪ್ರವೇಶಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕಾನೂನು ಮಂತ್ರಿಗಳು ಇದ್ದಾರೆ. ಸಂನ್ಯಾಸಿಗಳು, ಹರಿಚಂದ್ರ ಇವರ ಪಕ್ಕದಲ್ಲಿ ಇದ್ದರು. ಈ ರೀತಿ ಆರೋಪ, ರಾಜ್ಯಪಾಲರ ಮೇಲೆ ಬಂದಿದೆ. ಒಬ್ಬ ಸಂಸದ ಮಾಡಿರುವ ಆರೋಪ ಇದು ಎಂದರು. ಮಧ್ಯಪ್ರವೇಶಿಸಿದ ಮಾಧುಸ್ವಾಮಿ, ರಾಜ್ಯಪಾಲರ ಬಗ್ಗೆ ಈ ಸದನದಲ್ಲಿ ಚರ್ಚೆ ಮಾಡಲು ಆಗುವುದಿಲ್ಲ ಎಂದರು.
ಈ ಸಮಯದಲ್ಲಿ ಮಾತನಾಡಿದ ಬಿಜೆಪಿಯ ಎನ್. ರವಿಕುಮಾರ್, ವಿಪಕ್ಷ ನಾಯಕರು ಸೂಚಿಸಿರುವ ನಿಳುವಳಿಗೆ ತಕರಾರು ಇಲ್ಲ. ಆದರೆ ನಾನು ನಿಮಗೆ ಒಂದು ನೋಟಿಸ್ ಕೊಟ್ಟಿದೇನೆ. ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಭ್ರಷ್ಟಾಚಾರ ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಬಹಿರಂಗವಾಗಿ ಹೇಳಿದ್ದಾರೆ. ಇದರ ಬಗ್ಗೆ ನಿಯಮ 68ಎ ಕೆಳಗಡೆ ಚರ್ಚೆಗೆ ಅವಕಾಶ ಕೊಡಿ ಎಂದರು.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ಸ್ಪೀಕರ್ ಪೀಠದ ಮುಂದೆ ಆಗಮಿಸಿ ಪ್ರತಿಭಟನೆ ನಡೆಸಿದರು. ಮಾತು ಮುಂದುವರಿಸಿದ ರವಿಕುಮಾರ್, ಯಾರು ಎಷ್ಟು ಮಾಡಿಕೊಂಡರು ಲಿಸ್ಟ್ ಕೊಡಬೇಕು. ನಾವು ಕೂಡ ಚರ್ಚೆಗೆ ರೆಡಿ ಇದ್ದೇವೆ ಎನ್ನುತ್ತ ರಮೇಶ್ ಕುಮಾರ್ ಹೇಳಿಕೆಯನ್ನು ಪ್ರದರ್ಶನ ಮಾಡಿದರು.
ಹರಿಪ್ರಸಾದ್ ಮಧ್ಯಪ್ರವೇಶಿಸಿ, ಸುಳ್ಳನ್ನು ನೂರು ಸಾರಿ ಹೇಳಿದರೆ ಸತ್ಯ ಆಗುವುದಿಲ್ಲ. ಹಾವಿನಪುರದಿಂದ ಬಂದವರಿಂದ ನಾವು ಕಲೆಯಬೇಕಿಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ರವಿಕುಮಾರ್, ನೀವೇನು ಇಟಲಿಯಿಂದ ಬಂದವರ? ಎಂದರು.
ಸದನದ ಸದಸ್ಯರು ಅಲ್ಲದದವರ ಬಗ್ಗೆ ಇಲ್ಲಿ ಚರ್ಚೆ ಮಾಡಲು ಆಗುವುದಿಲ್ಲ ಎಂದು ಸಭಾಪತಿ ತಿಳಿಸಿದರೂ ಗದ್ದಲ ನಿಲ್ಲದ ಹಿನ್ನೆಲೆಯಲ್ಲಿ 15 ನಿಮಿಷ ಮುಂದೂಡಲಾಯಿತು. ಮತ್ತೆ ಸಭೆ ಸೇರಿದಾಗಲೂ ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರಿಯಿತು. ನಡುವೆಯೇ, ತೊಗರಿ ಬೆಳೆಗಾರರ ಸಮಸ್ಯೆ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಲಾಯಿತು. ಊತ್ತರ ನೀಡಲು ಕೃಷಿ ಸಚಿವ ಬಿ.ಸಿ. ಪಾಟೀಲ್ ಮುಂದಾದಾಗ ಅದಕ್ಕೆ ಅಡ್ಡಿಪಡಿಸಿದ ಕಾಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು.
ರಮೇಶ್ ಕುಮಾರ್ ಆಡಿಯೋ ತರಿಸಿಕೊಂಡು ಪರಿಶೀಲನೆ ನಡೆಸಿ. ಅದರಲ್ಲಿ ಭ್ರಷ್ಟಾಚಾರ ಎಂಬುದನ್ನು ರಮೇಶ್ ಕುಮಾರ್ ಹೇಳಿಲ್ಲ ಎಂದು ಹೇಳಿದರು. ಜೈಲಿಗೆ ಹೋಗಿ ಬಂದ ಸಿಎಂ ಪಕ್ಷ ಎಂದು ಕಾಂಗ್ರೆಸ್ ಘೋಷಣೆ ಕೂಗುತ್ತಿದ್ದಾಗ, ನೆಹರೂಯಿಂದ ಸೋನಿಯಾವರೆಗೂ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್‌ಗೆ ಧಿಕ್ಕಾರ. ತಿಹಾರ್ ಜೈಲಿಗೆ ಹೋಗಿ ಬಂದಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಧಿಕ್ಕಾರ ಎಂದು ರವಿಕುಮಾರ್ ಘೋಷಣೆ ಕೂಗಿದರು.
ಸದನ ಮತ್ತೆ ಗದ್ದಲದಲ್ಲಿ ಮುಳುಗಿದಾಗ 10 ನಿಮಿಷ ಮುಂದೂಡಲಾಯಿತು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಹರಿಪ್ರಸಾದ್, ಜೆಡಿಎಸ್ ಸಭಾ ನಾಯಕ ಬೋಜೇಗೌಡ ಹಾಗೂ ರವಿಕುಮಾರ್ ಜತೆ ಸಭಾಪತಿ ಬಸವರಾಜ್ ಹೊರಟ್ಟಿ ಸಂಧಾನ ಸಭೆ ನಡೆಸಿದರು.
ಮತ್ತೆ ಕಲಾಪ ಸೇರಿದಾಗ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ನೆಹರೂ ಬಗ್ಗೆ ಹೇಳಿಕೆ ನೀಡಿದ ರವಿಕುಮಾರ್ ಕ್ಷಮೆ ಕೇಳಬೇಕು. ಅನೇಕ ರೀತಿಯ ವಿಷಯಗಳು ಸದನದಲ್ಲಿ ಚರ್ಚೆ ಮಾಡಬೇಕು. ಸಣ್ಣಪುಟ್ಟ ವಿಷಯ ಮರೆತುಬಿಡೋಣ. ಈ ವಾಕ್ಯವನ್ನು ಕಡತದಿಂದ ತೆಗೆಯಿರಿ. ಕ್ಷಮೆ ಕೆಳದೆ ಹೋದರೆ ಸದನ ನಡೆಸಲು ಬಿಡುವುದಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ರಮೇಶ್ ಕುಮಾರ್ ಅವರು ಭ್ರಷ್ಟಾಚಾರ ಎಂಬ ಪದ ಬಳಿಸಿಲ್ಲ. ಒಂದು ವೇಳೆ ಬಳಸಿದ್ದರೆ, ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತಿದ್ದೇನೆ. ಇಲ್ಲ ಅಂದರೆ ಅವರು ರಾಜೀನಾಮೆ ಕೊಡಲಿ ಎಂದು ಹರಿಪಸ್ರಾದ್ ಸವಾಲು ಹಾಕಿದರು. ಆಡಳಿತ ಪಕ್ಷದವರು ಸೋಲಲಿ, ಕ್ಷಮೆ ಕೇಳಿದರೆ ಸಣ್ಣವರು ಆಗುವುದಿಲ್ಲ ಎಂದು ಜೆಡಿಎಸ್‌ನ ಭೋಜೇಗೌಡ ಹೇಳಿದರು.
ಸದ್ಯ ಕಾಂಗ್ರೆಸ್ ಜತೆ ಸಖ್ಯ ಬೆಳೆಸಿರುವ ಎಚ್. ವಿಶ್ಚನಾಥ್ ಮಾತನಾಡಿ, ನೆಹರು ಬಗ್ಗೆ ಮಾತಾಡಿದ್ದು ನೋಡಿ ನೋವು ಆಯಿತು. ಹೊಟ್ಟೆ ಉರಿಯುತ್ತೆ ಸರ್. ಅದಕ್ಕಾಗಿ ರವಿಕುಮಾರ್ ಕ್ಷಮೆ ಕೇಳಲಿ. ಹಿಂದೆ ಬೆಂಕಿ ಮಾಹದೇವ ಎಂದು ಇದ್ದರು, ಮಂತ್ರಿ ಆಗಿದ್ದರು. ದಯಮಾಡಿ ಬೆಂಕಿ ರವಿ ಆಗಬಾರದು ಎಂದರು.
ಆಯನೂರು ಮಂಜುನಾಥ್ ಮಾತನಾಡಿ, ಸದನದದಲ್ಲಿ ಕೆಲವೊಮ್ಮೆ ಎಲ್ಲೆ ಮೀರಿ ಮಾತಾಡುತ್ತಿರುತ್ತಾರೆ. ನೆಹರು ಬಗ್ಗೆ ಮಾತಾಡಬಾರದಿತ್ತು. ರವಿಕುಮಾರ್ ಅವರು ನೆಹರು ಹೆಸರು ವಾಪಸ್ ತೆಗೆದುಕೊಳ್ಳಲಿ. ದ್ವೇಷದ ಮಾತುಗಳು ಬೇಡ. ಹಾವಿನಪುರ ಎನ್ನಬೇಡಿ, ಸಂಘಟನೆ ನೋವು ಆಗುತ್ತದೆ ಎಂದರು. ಪ್ರತಿಪಕ್ಷಗಳಷ್ಟೆ ಅಲ್ಲದೆ ಸ್ವಪಕ್ಷೀಯರಿಂದಲೂ ಬೆಂಬಲ ಪಡೆಯದ ರವಿಕುಮಾರ್ ಒಂಟಿಯಾದರು.
ಮಾತು ಮುಂದುವರಿಸಿದ ರವಿಕುಮಾರ್, ಮೊದಲನೆಯದಾಗಿ ಪೀಠಕ್ಕೆ ಕ್ಷಮೆ ಕೇಳುತ್ತೇನೆ. ಏಕೆಂದರೆ ಇದರಿಂದಾಗಿ ಬಹಳಷ್ಟು ಜನರ ಸಮಯ ವ್ಯರ್ಥವಾಗುತ್ತಿದೆ. ನೆಹರು ಅವರ ಹೆಸರು, ಭ್ರಷ್ಟಾಚಾರ ಮಾಡಿದ್ದಾರೆ ಎಂಬುವ ರೀತಿಯಲ್ಲಿ ನಾನು ಹೇಳಿದ್ದೇನೆ ಎಂದು ಭಾವಿಸಿದ್ದರೆ ಆ ಪದ ವಾಪಸ್ ಪಡೆಯುತ್ತೇನೆ. ವಿಪಕ್ಷ ನಾಯಕರಿಗೆ ಆ ರೀತಿ ಅರ್ಥ ಆಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ. ವಿಪಕ್ಷ ನಾಯಕರು ಆಗಾಗ ಚುಚ್ಚುತ್ತಾರೆ. ಈ ಕಡೆಯವರಿಗೆ ನೋವು ಆಗುತ್ತದೆ. ಹಾವಿನಪುರ, ನಾಗಪುರ ಎನ್ನುತ್ತಾರೆ. ಅದನ್ನು ಮುಂದೆ ಬಳಸಬಾರದು. ಹಾವಿನಪುರ ಎಂಬುದು ವಾಪಸ್ ಪಡೆಯಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನೆಹರು ಅವರ ಹೆಸರು ಬಳಿಸಿದರೆ, ಘಾಸಿ ಆಗುವುದಿಲ್ಲ. ನೆಹರು ಅವರ ಹೆಸರಿನ ಜತೆ ಭ್ರಷ್ಟಾಚಾರ ಎಂದು ಬಳಸಿದರು. ಅದಕ್ಕೆ ವಿಷಾದ ವ್ಯಕ್ತಪಡಿಸಬೇಕು. ನಾನು ನಾಗಪುರವನ್ನು ಕನ್ನಡದಲ್ಲಿ ಹಾವಿನಪುರ ಎಂದೆ. ನನಗೆ ಕನ್ನಡ ಮೇಲೆ ಅಭಿಮಾನ ಎಂದರು
ಬಿಜೆಪಿಯ ಭಾರತೀಶೆಟ್ಟಿ ಮಾತನಾಡಿ, ನಾವು ಯಾರೂ ಪಕ್ಷೇತರರಲ್ಲ. ಒಂದೊಂದು ಸಂಘಟನೆ ಹಿನ್ನೆಲೆಯಲ್ಲಿ ಬಂದವರಿದ್ದೇವೆ. RSS ಅನ್ನು ಸುಲಭ ಶೌಚಾಲಯ ಎನ್ನುತ್ತಾರೆ. ನಮ್ಮ ದೇವಾಲಯಗಳನ್ನು ಹಾಗೆ ಕರೆದಾಗ ನೋವಾಗುತ್ತದೆ ಎಂದರು.
ಮಾತು ಮುಂದುವರಿಸಿದ ರವಿಕುಮಾರ್, ನಾನು ಕ್ಷಮೆ ಕೇಳುತ್ತೇನೆ. ಆದರೆ ಆರ್‌ಎಸ್‌ಎಸ್ ಅನ್ನು ಸುಲಭ್ ಶೌಚಾಲಯ ಎಂದು ಕರೆದಿದ್ದ ಅವರ ಹೇಳಿಕೆ ಬಗ್ಗೆ ವಿಷಾದ ವ್ಯಕ್ತ ಪಡಿಸುವುದು ಅವರ ಮನಸ್ಸಿಗೆ ಬಿಟ್ಟದ್ದು. ಆದರೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ, ತಕ್ಕ ಪಾಠ ಕಲಿಸುತ್ತಾರೆ ಎಂದು ಮಾತು ಮುಗಿಸಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ