ಬೆಳಗಾವಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಿರಿಯ ಸದಸ್ಯನಾಗಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾಡಾಳ್ ವಿರೂಪಾಕ್ಷ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ (Lokayukta Raid) ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದರು ಬಿಜೆಪಿಯವರು. ಹಾಗಾದರೆ ಏಕೆ ರೈಡ್ ಆಗಿರಲಿಲ್ಲ? ನೀವು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯಿತಲ್ಲ ಏಕೆ ತನಿಖೆ ಮಾಡಲಿಲ್ಲ? ಈಗ ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಇಷ್ಟು ವರ್ಷ ವಿಚಾರಣೆ ಏಕೆ ಮಾಡಲಿಲ್ಲ? ಬಾಯಿಗೆ ಕಡುಬು ಸಿಕ್ಕಿಹಾಕಿಕೊಂಡಿತ್ತ? ಕಳ್ಳೇಪುರಿ ತಿನ್ನುತ್ತಾ ಇದ್ದಿರ? ಎಂದು ಪ್ರಶ್ನಿಸಿದರು.
ಮಂತ್ರಿಗಳು ಇಷ್ಟು ಕಲೆಕ್ಟ್ ಮಾಡಿಕೊಡಬೇಕು, ನಿಗಮ ಮಂಡಳಿ ಅಧ್ಯಕ್ಷರಾದವರು ಇಷ್ಟು ಕಲೆಕ್ಟ್ ಮಾಡಿಕೊಡಬೇಕು ಎಂದು ಗುರಿ ನಿಗದಿಪಡಿಸಿದ್ದಾರೆ. 40 ಲಕ್ಷ ರೂ. ಕಚೇರಿಯಲ್ಲಿ, ಆರು ಕೋಟಿ ರೂ. ಮನೆಯಲ್ಲಿ ಸಿಕ್ಕಿದೆ. ಇದು ಭ್ರಷ್ಟಾಚಾರದಿಂದ ಪಡೆದಿರುವ ಹಣ, ಲೂಟಿ ಮಾಡಿರುವ ಹಣ. ಮಾಡಾಳ್ ವಿರೂಪಾಕ್ಷಪ್ಪ ಹಿರಿಯ ಶಾಸಕ, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿರುವಂಥವರು.
ಬಿಜೆಪಿಯವರು ಕೋಮು ಧ್ವೇಷ ಹುಟ್ಟುಹಾಕಿ ಗೆಲ್ಲಲು ಪ್ರಯತ್ನ ಮಾಡಿದರು, ಆದರೆ ಜನರು ಅದನ್ನು ಕೇಳುವುದಿಲ್ಲ ಎಂದು ಗೊತ್ತಾಯಿತು. ಈಗ ಅದಕ್ಕಾಗಿಯೇ ಹಣದ ಮೂಲಕ ಗೆಲ್ಲಲು ಮುಂದಾಗಿದ್ದಾರೆ.
ಇದನ್ನೂ ಓದಿ: Lokayukta Raid : ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳು ವಿರೂಪಾಕ್ಷಪ್ಪ ರಾಜೀನಾಮೆ, ಸಿಎಂ ಸೂಚನೆ ಬೆನ್ನಲ್ಲೇ ರಿಸೈನ್
ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಕಾನೂನು ರೂಪಿಸಿದ್ದು ನಾವು, ಇವರು ಹಕ್ಕುಪತ್ರ ಕೊಡೋಕೆ ಪ್ರಧಾನಮಂತ್ರಿಯವರನ್ನು ಕರೆದುಕೊಂಡು ಬಂದಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಏನೂ ಮಾಡಿಲ್ಲ. ನಾವು ಅಧಿಕಾರದಲ್ಲಿದ್ದಾಗ ಐದು ವರ್ಷದಲ್ಲಿ 14 ಲಕ್ಷ ಮನೆ ಕಟ್ಟಿದ್ದೆವು. ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಒಂದೂ ಹೊಸ ಮನೆ ಕಟ್ಟಿಲ್ಲ. ಬರಿಯ ಸುಳ್ಳು ಹೇಳುತ್ತಾರೆ ಎಂದರು.