ಬೆಳಗಾವಿ: ಬಿಜೆಪಿ ಸರ್ಕಾರಗಳು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತ ತಮ್ಮ ಪ್ರಚಾರ ಪಡೆಯುತ್ತಿದ್ದು, ಚುನಾವಣಾ ಆಯೋಗ ಕೂಡಲೆ ಚುನಾವಣೆ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ (Lokayukta Raid) ಕುರಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ನರೇಂದ್ರ ಮೋದಿ ರೋಡ್ ಶೋಗೆ 500 ರೂ. ಕೊಟ್ಟು ಕರೆದುಕೊಂಡು ಬಂದಿದ್ದಾರೆ ಎಂದು ನಾನು ಹೇಳಿದೆ. ಆದರೆ ಅದನ್ನು ತಿರುಚಿ, ನಾವು ಹಣ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯ ಪ್ರತಿ ಸಭೆಗೂ ಸರ್ಕಾರದ ಹಣ, ಲಂಚದ ಹಣ ನೀಡಿ ಕರೆದುಕೊಂಡು ಬರುತ್ತಿದ್ದಾರೆ. ಕೂಡಲೆ ಚುನಾವಣೆ ಘೋಷಣೆ ಮಾಡಿ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿ. ಆಗ ಸರ್ಕಾರದ ಹಣದಲ್ಲಿ ಪ್ರಧಾನಿ ಜಾಹೀರಾತು ನೀಡುವುದು ನಿಂತು ಹೋಗುತ್ತದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇನೆ ಎಂದರು.
ಕಾಂಟ್ರಾಕ್ಟರ್‌ಗಳಿಗೆ ಎಚ್ಚರಿಕೆ ನೀಡಿದಸಿದ್ದರಾಮಯ್ಯ, ನೀವು ಯಾವುದೇ ಸರ್ಕಾರದ ಕೆಲಸಗಳನ್ನು ತೆಗೆದುಕೊಳ್ಳಬೇಡಿ. ಹಿಂದಿನ ಟೆಂಡರ್‌ಗಳನ್ನು ನಾವು ಮೌಲ್ಯಮಾಪನ ಮಾಡುತ್ತೇವೆ. ಆಗ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು.
ಇದನ್ನೂ ಓದಿ: Lokayukta Raid: ಮಾಡಾಳ್ ವಿರೂಪಾಕ್ಷಪ್ಪ, ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿರುವವರು: ಮಾಜಿ ಸಿಎಂ ಸಿದ್ದರಾಮಯ್ಯ
ತನ್ನ ಬಗ್ಗೆ ಮರ್ ಜಾ ಮೋದಿ ಎಂದು ಯಾರೋ ಹೇಳಿದರು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಸ್ವತಃ ಪ್ರಧಾನಿಗೇ ರಕ್ಷಣೆ ಕೊಡಲು ಆಗದಿದ್ದರೆ ಇನ್ನಿವರು ಜನಸಾಮಾನ್ಯರಿಗೆ ಹೇಗೆ ರಕ್ಷಣೆ ನೀಡುತ್ತಾರೆ? ಆದರೆ ಅಶ್ವತ್ಥನಾರಾಯಣ ಎಂಬ ಒಬ್ಬ ಮಂತ್ರಿ, ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಮಾಡಬೇಕು ಎಂದು ಹೇಳಿದ್ದಾರೆ. ಇದು ಗೊತ್ತಾದಾಗ ಪ್ರಧಾನಿ ಏನೆನ್ನಬೇಕಿತ್ತು? ಆ ಮಂತ್ರಿಗೆ ತಲೆ ಮೇಲೆ ಹೊಡೆದು, ನೀನೊಬ್ಬ ಮಂತ್ರಿ, ಹೀಗೆಲ್ಲ ಮಾತನಾಡಬಾರದು. ನೀನು ಮಂತ್ರಿ ಆಗೋಕ್ಕೆ ನಾಲಾಯಕ್ಕು, ಹೋಗು ರಾಜೀನಾಮೆ ಕೊಟ್ಟು ಮನೆಗೆ ಹೋಗು ಎಂದು ಹೇಳಬೇಕಿತ್ತು ಅಲ್ಲವ? ಆದರೆ ತಮ್ಮ ಮೇಲೆ ದಾಳಿ ಆಗುತ್ತದೆ ಎಂದು ಮೋದಿ ಹೇಳುತ್ತಿದ್ದಾರೆ ಎಂದರು.