Site icon Vistara News

Love Case : ಹುಡುಗಿ ವಿಚಾರದಲ್ಲಿ ಹಿಂಸಾಚಾರ ನಡೆದ ನಾವೆಗೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ; ಸಾಂತ್ವನ

Love Case Lakshmi Hebbalkar

ಬೆಳಗಾವಿ: ಹುಡುಗಿ ವಿಚಾರದಲ್ಲಿ (Love Case) ಹುಡುಗರ ಎರಡು ಗುಂಪುಗಳ ನಡುವೆ ಗಲಾಟೆ (Clash between two groups) ನಡೆದು, ಬುದ್ಧಿಮಾತು ಹೇಳಿದ ಗ್ರಾಮದ ಪಂಚರ ಮನೆ ಸೇರಿದಂತೆ ನಾಲ್ಕು ಕಡೆ ದಾಳಿ (Attack on village heads house) ನಡೆದ ಬೆಳಗಾವಿ ತಾಲೂಕಿನ ನಾವಗೆ ಗ್ರಾಮಕ್ಕೆ (Navage Village) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಮಂಗಳವಾರ ಭೇಟಿ ನೀಡಿ ಧೈರ್ಯ ತುಂಬಿದರು.

ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಹುಡುಗಿಯೊಬ್ಬಳ ಪ್ರೀತಿಯ ವಿಚಾರಕ್ಕೆ ಗಲಾಟೆ ನಡೆದಿತ್ತು. ಓದುವ ವಯಸ್ಸಲ್ಲಿ ಪ್ರೀತಿ ಗೀತಿ ಎಂದು ಸಮಯ ವ್ಯರ್ಥ ಮಾಡುವುದು ತಪ್ಪು ಎಂದು ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ ಬುದ್ಧಿಮಾತು ಹೇಳಿದ್ದರು. ಇದರಿಂದ ವ್ಯಗ್ರರಾದ ಆರೋಪಿಗಳು ಪಂಚರ ಮನೆಯನ್ನು ಧ್ವಂಸ ಮಾಡಲು ಯತ್ನಿಸಿದ್ದಾರೆ. 30ಕ್ಕೂ ಅಧಿಕ ಯುವಕರ ಗುಂಪಿನಿಂದ ಗ್ರಾಮದ ಹಿರಿಯರ ನಾಲ್ಕು ಮನೆಗಳ ಮೇಲೆ ದಾಳಿಯಾಗಿತ್ತು.

ಗಲಾಟೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಾವಗೆ ಗ್ರಾಮಕ್ಕೆ ತೆರಳಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಗ್ರಾಮಸ್ಥರಲ್ಲಿ ಧೈರ್ಯ ತುಂಬಿದರು.

ಸೋಮವಾರ ರಾತ್ರಿ ಘಟನೆ ನಡೆದಿರುವ ಕುರಿತು ಸುದ್ದಿ ತಿಳಿದ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮದ ಮನೆ ಮನೆಗೆ ತೆರಳಿ ಎಲ್ಲರಿಂದ ಮಾಹಿತಿ ಸಂಗ್ರಹಿಸಿದರಲ್ಲದೆ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಘಟನೆಗೆ ಕಾರಣ ಹಾಗೂ ನಂತರ ತೆಗೆದುಕೊಂಡಿರುವ ಕ್ರಮಗಳ ಕುರಿತು ಪೊಲೀಸರಿಂದ ಸಹ ಸಚಿವರು ಮಾಹಿತಿ ಪಡೆದರು.

ನಂತರ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಶಾಲೆ, ಕಾಲೇಜಿಗೆ ತೆರಳುವ ಅಪ್ರಾಪ್ತ ಮಕ್ಕಳು ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟಿದ್ದರಿಂದ ಈ ಘಟನೆ ನಡೆದಿದೆ. ಎರಡೂ ಗ್ರಾಮಗಳ ಹಿರಿಯರನ್ನು ಕರೆಸಿ ಮಾತುಕತೆ ನಡೆಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : Crime News: ಪ್ರೀತಿ ಗೀತಿ ಬೇಡ, ಓದಿಕೊಳ್ಳಿ ಎಂದದ್ದಕ್ಕೆ ಪಂಚರ ಮನೆ ಮೇಲೆಯೇ ದಾಳಿ, ಧ್ವಂಸ!

ಸುದ್ದಿ ತಿಳಿದ ತಕ್ಷಣ ಎಲ್ಲ ಕಾರ್ಯಕ್ರಮಗಳನ್ನು ಬದಿಗಿಟ್ಟು ಇಲ್ಲಿಗೆ ಬದಿದ್ದೇನೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನೇ ಮುಂದಾಗಿ ನಿಂತು, ಘಟನೆಯ ಸಂಪೂರ್ಣ ಮಾಹಿತಿ ಪಡೆದು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು. ಎರಡೂ ಊರಿನ ಹಿರಿಯರನ್ನು, ಪೊಲೀಸರನ್ನು ಕೂರಿಸಿಕೊಂಡು ಪರಸ್ಪರ ದ್ವೇಷ ಉಳಿಯದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ಕಪಕ್ಕದ ಊರಿನ ಜನರು ಮೊದಲಿನಂತೆ ಪರಸ್ಪರ ನಗು ನಗುತ್ತ ಇರುವಂತೆ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

ಕ್ಷೇತ್ರದಲ್ಲಿ ಎಲ್ಲೂ ಕಾನೂನಿನ ಸಮಸ್ಯೆ ಆಗಿಲ್ಲ. ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮ ತೆಗೆದುಕೊಂಡಿದ್ದಾರೆ. ಡಿ.31ರ ರಾತ್ರಿ ಹೊಸವರ್ಷಾಚರಣೆ ವೇಳೆ ಬಾದರವಾಡಿ ಮತ್ತು ನಾವಗೆ ಗ್ರಾಮದ ಹುಡುಗರ ಮಧ್ಯೆ ಸ್ವಲ್ಪ ಗಲಾಟೆ ಆಗಿದೆ. ಅದರ ಸಿಟ್ಟಿನಿಂದ ಆ್ಯಕ್ಷನ್ ಗೆ ರಿಯಾಕ್ಷನ್ ಆಗಿದೆ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ವಿನಂತಿಸುತ್ತೇನೆ. ಎಲ್ಲರೂ ಸಣ್ಣ ಮಕ್ಕಳು. ಅವರ ಭವಿಷ್ಯದ ದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಸರಿಪಡಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

Exit mobile version