ಬೆಳಗಾವಿ: ಕೋವಿಡ್ ಸೋಂಕು (coronavirus) ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದಲ್ಲಿ ಕ್ರಮ ಕೈಗೊಳ್ಳುವ ಮುನ್ನವೇ ಇಬ್ಬರು ಸಚಿವರ ನಡುವೆ ಭಿನ್ನಾಭಿಪ್ರಾಯದ ಅನುಮಾನಗಳು ವ್ಯಕ್ತವಾಗುತ್ತಿವೆ. ಕಂದಾಯ ಸಚಿವ ಆರ್. ಅಶೋಕ್ ಅವರ ಮಾತಿನಿಂದ ಈ ಅನುಮಾನ ವ್ಯಕ್ತವಾಗಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕುರಿತು ಈ ಮಾತು ಹೇಳಿದ್ದಾರೆಯೇ ಎಂಬ ಚರ್ಚೆಗಳೂ ನಡೆಯುತ್ತಿವೆ.
ಸುವರ್ಣಸೌಧದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಆರ್. ಅಶೋಕ್, ಕೋವಿಡ್ ನಿರ್ವಹಣೆ ಕುರಿತಂತೆ ಸೋಮವಾರ ಮದ್ಯಾಹ್ನ ಸಭೆ ಇದೆ. ನಾನು ಹಾಗೂ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಜನರು ಯಾವುದೇ ಆತಂಕ ಪಡಬೇಕಿಲ್ಲ. ಹೊಸ ವರ್ಷಾಚರಣೆ ಕುರಿತೂ ಎಲ್ಲ ಕ್ರಮ ತೆಗದುಕೊಳ್ಳುತ್ತೇವೆ. ಮಾರ್ಗಸೂಚಿ ಪ್ರತ್ಯೇಕವಾಗಿ ಬಿಡುಗಡೆ ಮಾಡುತ್ತೇವೆ. ಅಂತಿಮವಾಗಿ ಸಿಎಂ ಜತೆ ಚರ್ಚೆ ಮಾಡಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಈ ಸಮಯದಲ್ಲಿ ಇದ್ದಕ್ಕಿದ್ದಂತೆ, ಯಾರೂ ಓವರ್ ಆ್ಯಕ್ಟಿಂಗ್ ಮಾಡಬಾರದು. ಕೋವಿಡ್ ಕುರಿತಂತೆ ಓವರ್ ಆ್ಯಕ್ಟಿಂಗ್ ಮಾಡದೇ ಸಾರ್ವಜನಿಕರ ಸ್ನೇಹಿಯಾದ ನಿರ್ಧಾರ ಕೈಗೊಳ್ಳಬೇಕು ಎಂದರು. ಯಾರು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ? ಡಾ. ಸುಧಾಕರ್ ಅವರೇ? ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉತ್ತರಿಸಲು ತಡವರಿಸಿದ ಅಶೋಕ್, ನಾನೇ ಓವರ್ ಆ್ಯಕ್ಟಿಂಗ್ ಮಾಡುತ್ತಾ ಇರುವುದು ಎನ್ನುತ್ತ ಒಳನಡೆದರು. ಸರ್ಕಾರದ ಸಚಿವರಲ್ಲಿ ಮತ್ತೆ ಕೈ ಮೇಲಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕಿದೆ.
ಇದನ್ನೂ ಓದಿ | Coronavirus | ಚೀನಾದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಬಂದ ವ್ಯಕ್ತಿಗೆ ಕೊರೊನಾ