ಬೆಳಗಾವಿ: ದೇಶದಲ್ಲಿ ಇಷ್ಟು ವರ್ಷದ ಬಂದ ಪ್ರಧಾನಿಗಳಲ್ಲಿ ಯಾರೊಬ್ಬರೂ, ಪ್ರತಿ ಮನೆಗೆ ನೀರು ಕೊಡುತ್ತೇನೆ ಎಂದು ಹೇಳುವ ಧೈರ್ಯ ತೋರಿರಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುಮಾರು 2,240 ಕೋಟಿ ರೂ. ಮೊತ್ತದ ರೈಲ್ವೆ ಮತ್ತು ಜಲಜೀವನ್ ಮಿಷನ್ ಯೋಜನೆಗಳು ಮತ್ತು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ 16 ಸಾವಿರ ಕೋಟಿ ರೂ. ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ (Modi at Belagavi) ಮಾತನಾಡಿದರು.
ಇಂದು ಬೆಳಗಾವಿಯಲ್ಲಿ ಸಿಕ್ಕಂತಹ ಅಭೂತಪೂರ್ವ ಸ್ವಾಗತವು ಮುಂದೆಯೂ ಲಭಿಸುವುದಿಲ್ಲ ಎನ್ನುವಂತಿತ್ತು. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿ ಮಾಡಿದ್ದಾರೆ. ಇದರಿಂದ ಪ್ರೇರಿತರಾಗಿ ರೈತ ವಿದ್ಯಾನಿಧಿ ಯೋಜನೆ ರೂಪಿಸಿದ್ದೇವೆ. ರೈತರ ಪರವಾಗಿ ಡಬಲ್ ಇಂಜಿನ್ ಸರ್ಕಾರ ನಡೆಯುತ್ತಿದೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿದ್ದೇವೆ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಲ್ಲಿ ಈ ವರ್ಷ ಅತಿ ಹೆಚ್ಚು ಹಣ ಬಿಡುಗಡೆಯಾಗಿದೆ. ರೈತರು ಬೆಳೆದ ಪದಾರ್ಥಗಳಿಗೆ 2-3 ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ.
ಹಿಂದಿನ ಸರ್ಕಾರಗಳಲ್ಲಿ ಮಾಡಲು ಆಗದೇ ಇದ್ದಂತಹ ಕೆಲಸಗಳು ಇಂದು ಸಾಧ್ಯವಾಗುತ್ತಿವೆ. ಮನೆಮನೆಗೆ ನೀರು ಕೊಡುತ್ತೇನೆ ಎಂದು ಹೇಳುವ ಧೈರ್ಯ ಇಲ್ಲಿವರೆಗೆ ಯಾವುದೇ ಪ್ರಧಾನಿಗೆ ಇರಲಿಲ್ಲ. ಕಳೆದ ಮೂರು ವರ್ಷದಲ್ಲಿ ಹತ್ತು ಕೋಟಿಗಿಂತಲೂ ಹೆಚ್ಚು ಮನೆಗಳಿಗೆ ನೀರು ಕೊಟ್ಟಿರುವ ಭಗೀರಥ ನರೇಂದ್ರ ಮೋದಿಯವರು.
ಸಂಶಯಗಳನ್ನು ಸಂಕಲ್ಪವನ್ನಾಗಿ, ಅನಿಶ್ಚಿತತೆಯನ್ನು ನಿಶ್ಚಿಯವಾಗಿಸಿದ್ದಾರೆ, ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ಹಿಂದಿನ ಆಲೋಚನೆಯನ್ನು ಬದಿಗೊತ್ತಿ ಹೊಸ ಆಲೋಚನೆಯನ್ನು ಮೂಡಿಸಿದ್ದಾರೆ. ಭಾರತ 100 ನೇ ಸ್ವಾತಂತ್ರೋತ್ಸವ ಆಚರಣೆ ವೇಳೆಗೆ ಭಾರತ ಮುಂಚೂಣಿಯಲ್ಲಿರಲಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪ್ರಧಾನಿಯವರು ನಡೆಸಿದ ರೋಡ್ ಶೋನಲ್ಲಿ ಒಂದಿಂಚೂ ಜಾಗವಿಲ್ಲದಂತೆ ಜನರು ಸೇರಿದ್ದರು. ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದೆ ಸೇರಿದ್ದನ್ನು ನೋಡಿದರೆ, ಪ್ರಧಾನಿಯವರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದರು.