ಬೆಳಗಾವಿ: ಕಾಂಗ್ರೆಸ್ ಕಾಲದಲ್ಲಿ ಕೇಂದ್ರದಿಂದ ಬಿಡುಗಡೆ ಆಗುತ್ತಿದ್ದ 1 ರೂ. ಹಣದಲ್ಲಿ ಕೇವಲ 15 ಪೈಸೆ ಜನರನ್ನು ತಲುಪುತ್ತಿತ್ತು. ಆ ಲೆಕ್ಕದಲ್ಲಿ ಈಗಿನ 16 ಸಾವಿರ ಕೋಟಿ ರೂ. ಪಿಎಂ ಕಿಸಾನ್ ನಿಧಿಯನ್ನು ನೋಡಿದರೆ 11-12 ಸಾವಿರ ಕೋಟಿ ರೂ. ಗುಳುಂ ಆಗುತ್ತಿತ್ತು ಎಂದು ಕಾಂಗ್ರೆಸ್ ಸರ್ಕಾರಗಳ ಕುರಿತು ಪ್ರಧಾನಿ ಮೋದಿ ಟೀಕಿಸಿದರು.
ಬೆಳಗಾವಿಯಲ್ಲಿ ರೈಲ್ವೆ ಯೋಜನೆಗೆ ಚಾಲನೆ, ಜಲಜೀವನ್ ಮಿಷನ್ ಚಾಲನೆ ಜತೆಗೆ ಪಿಎಂ ಕಿಸಾನ್ ಯೋಜನೆಯಲ್ಲಿ ದೇಶದ ಲಕ್ಷಾಂತರ ರೈತರಿಗೆ 13ನೇ ಕಂತಿನ 16 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಮಾತನಾಡಿದರು.
ಬೆಖಳಗಾವಿಯ ಕುರಿತು ಮಾತು ಆರಂಭಿಸಿದ ಮೋದಿ, ಮುಂದಿನ ಭಾರತದ ನವನಿರ್ಮಾಣದಲ್ಲಿ ಬೆಳಗಾವಿ ಪಾತ್ರ ಎಂದಿಗೂ ಇದೆ. ಇಂದು ನಮ್ಮ ದೇಶದಲ್ಲಿ, ಕರ್ನಾಟಕದಲ್ಲಿ ಸ್ಟಾರ್ಟ್ ಅಪ್‌ಗಳ ಚರ್ಚೆ ಆಗುತ್ತದೆ. ಆದರೆ ಒಂದು ರೀತಿ ನೋಡಿದರೆ ನೂರು ವರ್ಷ ಮೊದಲೇ ಸ್ಟಾರ್ಟ್ ಅಪ್ ಆರಂಭವಾಗಿತ್ತು. ಬಾಬು ರಾವ್ ಪುಸಾಲ್ಕರ್ ಅವರು ನೂರು ವರ್ಷ ಮೊದಲು ಇಲ್ಲಿ ಒಂದು ಸಣ್ಣ ಘಟಕ ಆರಂಭಿಸಿದ್ದರು. ಅಂದಿನಿಂದಲೂ ಬೆಳಗಾವಿ ಅನೇಕ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರವು ಇದನ್ನು ಸಶಕ್ತಗೊಳಿಸಲು ಬಯಸುತ್ತದೆ. ಇಂದಿನ ಯೋಜನೆಗಳಿಂದ ಬೆಳಗಾವಿ ವಿಕಾಸಕ್ಕೆ ಹೊಸ ವೇಗ ಲಭಿಸುತ್ತದೆ. ಇಂದಿನ ಅನೇಕ ಯೋಜನೆಗಳು ಸಂಪರ್ಕ, ನೀರು ಸರಬರಾಜಿನೊಂದಿಗೆ ಸೇರಿಕೊಂಡಿದೆ. ಇಂದು 16 ಸಾವಿರ ಕೋಟಿ ರೂ. ನೇರವಾಗಿ ಕೋಟ್ಯಂತರ ರೈತರ ಖಾತೆಗೆ ತಲುಪಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಒಂದು ರೂ. ಕಳಿಸಿದರೆ 15 ಪೈಸೆ ಹೋಗುತ್ತದೆ ಎಂದಿದ್ದರು ಅಂದಿನ ಪ್ರಧಾನಿ. ಇಂದಿನ 16 ಸಾವಿರ ಕೋಟಿ ರೂ. ಲೆಕ್ಕ ಮಾಡಿದರೆ 11-12 ಸಾವಿರ ಕೋಟಿ ರೂ. ಮಾಯ ಆಗಿರುತ್ತಿತ್ತು. ಆದರೆ ಇದು ಮೋದಿ ಸರ್ಕಾರ. ಇದರಲ್ಲಿನ ಪ್ರತಿ ಪೈಸೆಯೂ ನಿಮ್ಮದು, ನಿಮಗೇ ಸೇರಿದ್ದರು. ಹೋಳಿ ಹಬ್ಬಕ್ಕೂ ಮೊದಲು ರೈತರಿಗೆ ಇದು ಶುಭಾಶಯದ ಸಂಕೇತ ಎಂದರು.
ಕೇಂದ್ರ ಸರ್ಕಾರವು ಒಂದರ ನಂತರ ಒಂದು ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ಸಣ್ಣ ರೈತರನ್ನೂ ಕಡೆಗಣಿಸಿಲ್ಲ. ಇದೇ ಸಣ್ಣ ರೈತರು ಬಿಜೆಪಿ ಸರ್ಕಾರದ ಆದ್ಯತೆಯಲ್ಲಿದ್ದಾರೆ. ಪಿಎಂ ಕಿಸಾನ್ ಮೂಲಕ ಸಣ್ಣ ರೈತರ ಖಾತೆಗೆ ಸುಮಾರು 2.5 ಲಕ್ಷ ಕೋಟಿ ರೂ. ಜಮಾ ಮಾಡಲಾಗಿದೆ. ಇದರಲ್ಲೂ 50 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು, ಮಹಿಳೆಯರ ಖಾತೆಗೆ ಹೋಗಿದೆ. ಈ ಹಣವು ರೈತರ ಸಣ್ಣಪುಟ್ಟ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಯಾರೊಂದಿಗೂ ಅವರು ಕೈಯೊಡ್ಡುವ ಅವಶ್ಯಕತೆಯಿಲ್ಲ. ಹೆಚ್ಚಿನ ಬಡ್ಡಿ ಪಾವತಿಸಬೇಕಿಲ್ಲ.
ಇದನ್ನೂ ಓದಿ: Modi at Belagavi: ಬಡ್ಡಿ ಸಮೇತ ಕರ್ನಾಟಕದ ಋಣ ತೀರಿಸುತ್ತೇನೆ; ಅಭಿವೃದ್ಧಿಗೆ ಜತೆಯಾಗಿ ಎಂದು ಕರೆ ನೀಡಿದ ಪ್ರಧಾನಿ ಮೋದಿ
2014ರ ನಂತರ ಕೃಷಿಯಲ್ಲಿ ಸಾರ್ಥಕ ಬದಲಾವಣೆಯತ್ತ ದೇಶ ಸಾಗುತ್ತಿದೆ. ಕೃಷಿಯನ್ನು ಆಧುನಿಕತೆಯೊಂದಿಗೆ ಜೋಡಿಸುತ್ತಿದ್ದೇವೆ. 2014ರಲ್ಲಿ ಭಾರತದ ಕೃಷಿ ಬಜೆಟ್ 25 ಸಾವಿರ ಕೋಟಿ ರೂ. ಇತ್ತು. ಈ ವರ್ಷ ಕೃಷಿ ಬಜೆಟ್ 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಅಂದರೆ ಐದು ಪಟ್ಟು ಹೆಚ್ಚು ನೀಡಲಾಗಿದೆ. ನಮ್ಮ ಸಿರಿಧಾನ್ಯಗಳು ಸೂಪರ್ ಫುಡ್ ಆಗಿದ್ದು, ಹೆಚ್ಚಿನ ಪೌಷ್ಠಿಕಾಂಶ ಲಭಿಸುತ್ತವೆ. ಕರ್ನಾಟಕವಂತೂ ಸಿರಿಧಾನ್ಯಗಳಲ್ಲಿ ವಿಶ್ವದ ಬಹುದೊಡ್ಡ ಕೇಂದ್ರವಾಗಿದೆ. ಇಲ್ಲಿ ಸಿರಿಧಾನ್ಯ ಎಂದೇ ಕರೆಯಲಾಗುತ್ತದೆ. ಇಲ್ಲಿ ಅನೇಕ ರೀತಿಯ ಸಿರಿಧಾನ್ಯಗಳನ್ನು ಇಲ್ಲಿಯ ರೈತರು ಬೆಳೆಯುತ್ತಾರೆ. ಇಲ್ಲಿನ ಬಿಜೆಪಿ ಸರ್ಕಾರ ಬೆಂಬಲವನ್ನೂ ನೀಡುತ್ತಿದೆ. ರೈತ ಬಂಧು ಯಡಿಯೂರಪ್ಪ ಅವರು ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡಲು ಬಹುದೊಡ್ಡ ಅಭಿಯಾನ ಮಾಡಿದ್ದರು. ಸಿರಿಧಾನ್ಯವನ್ನು ಉತ್ಪಾದಿಸಲು ಖರ್ಚು ಕಡಿಮೆ, ಹೆಚ್ಚು ಲಾಭವಾಗುತ್ತದೆ.
ಅತ್ಯಂತ ಸಣ್ಣ ವರ್ಗಗಳನ್ನೂ ಸಶಕ್ತಗೊಳಿಸಲು ನಾವು ಸಿದ್ಧರಾಗಿದ್ದೇವೆ. ಬೆಳಗಾವಿ ಕರಕುಶಲತೆಗೆ ಹೆಸರುವಾಸಿ. ಇಂದು ಬಿದಿರಿನ ವ್ಯಾಪಾರ ಮುಕ್ತವಾಗಿದೆ. ಇಂತಹ ಕರಕುಶಲಕರ್ಮಿಗಳಿಗಾಗಿ ಪಿಎಂ ವಿಶ್ವಕರ್ಮ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.