Site icon Vistara News

Murder case : ಪಕ್ಕದಲ್ಲಿ ನಿಂತು ಮೂತ್ರ ವಿರ್ಸಜನೆ ಮಾಡಿದ್ದಕ್ಕೆ ಸಿಟ್ಟು; ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

Murder Case

ಬೆಳಗಾವಿ: ಮೂತ್ರ ವಿಸರ್ಜನೆ ಮಾಡುವ ವಿಚಾರಕ್ಕೆ ಆರಂಭವಾದ ಜಗಳವು ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ನಶೆಯಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ (Murder case) ಮಾಡಲಾಗಿದೆ. ಮಹಾಂತೇಶ ಕುರಣಿ (48) ಕೊಲೆಯಾದವನು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಕಳೆದ ಜೂನ್ 16 ರಂದು ಈ ಕೊಲೆ ನಡೆದಿತ್ತು. ಕೊಲೆ ಆರೋಪಿ ವಿನಾಯಕ ಎಂಬಾತನನ್ನು ಸದಲಗಾ ಪೊಲೀಸರು ಬಂಧಿಸಿದ್ದಾರೆ.

ಯಕ್ಸಂಬಾದಲ್ಲಿ ಲಕ್ಷ್ಮೀ ಹಾಗೂ ಬೀರದೇವರ ಜಾತ್ರೆ ನಿಮಿತ್ಯ ಆಕ್ರೇಸ್ಟ್ರಾ ಆಯೋಜನೆ ಮಾಡಲಾಗಿತ್ತು. ರಾತ್ರಿ ಆರ್ಕೇಸ್ಟ್ರಾ ವೀಕ್ಷಣೆಗಾಗಿ ಮಹಾಂತೇಶ ಕುರಣಿ ತೆರಳಿದ್ದ. ಅದೇ ಆರ್ಕೇಸ್ಟ್ರಾ ನೋಡಲು ವಿನಾಯಕ ಕೂಡ ಬಂದಿದ್ದ. ಈ ವೇಳೆ ಮೂತ್ರ ವಿಸರ್ಜನೆ ಮಾಡಲು ಹೋದಾಗ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು.

ನನ್ನ ಪಕ್ಕದಲ್ಲಿ ನಿಂತು ಮೂತ್ರ ಮಾಡಬೇಡ ಅಂತ ವಿನಾಯಕ ಕಿರಿಕ್‌ ತೆಗೆದಿದ್ದ. ಆದರೂ ವಿನಾಯಕ ಪಕ್ಕದಲ್ಲಿಯೇ ನಿಂತು ಮಹಾಂತೇಶ ಮೂತ್ರ ಮಾಡಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಸಿಟ್ಟಲ್ಲಿ ವಿನಾಯಕ್‌ ಅಲ್ಲಿದ್ದ ಕಲ್ಲಿನಿಂದ ಹಲ್ಲೆ ಮಾಡಿದ್ದ. ಮಹಾಂತೇಶ್‌ ಕುಸಿದು ಬೀಳುತ್ತಿದ್ದಂತೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಕೃತ್ಯದ ಬಳಿಕ ಆರೋಪಿ ವಿನಾಯಕ ಪರಾರಿ ಆಗಿದ್ದ, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Love Failure : ಅಂತರ್ಜಾತಿ ವಿವಾಹಕ್ಕೆ ಪ್ರಿಯಕರನ ಪೋಷಕರು ಅಡ್ಡಿ; ಕಟ್ಟಡದಿಂದ ಜಿಗಿದು ಯುವತಿ ಸೂಸೈಡ್‌

ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯನ್ನು ಕೊಂದವರು ಅರೆಸ್ಟ್‌

ಕೋಲಾರ: ಆಸ್ತಿ ಮತ್ತು ಅಧಿಕಾರಕ್ಕಾಗಿ ನಡೆಯುತ್ತಿದ್ದ ಗಲಾಟೆಯಲ್ಲಿ ಸ್ವಾಮೀಜಿಯೊಬ್ಬರ ಕೊಲೆಯಾಗಿತ್ತು. (Swamji Murder) ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆನಂದ ಮಾರ್ಗ ಆಶ್ರಮದಲ್ಲಿ ಶನಿವಾರ ಈ ಘಟನೆ ನಡೆದಿತ್ತು. 65 ವರ್ಷದ ಚಿನ್ಮಯಾನಂದ ಸ್ವಾಮೀಜಿ ಮೃತಪಟ್ಟವರು. ಅವರನ್ನು ಸ್ವಾಮೀಜಿಗಳ ಗುಂಪೊಂದು ಬೆನ್ನಟ್ಟಿ ದೊಣ್ಣೆ ಹಾಗೂ ಬಡಿಗೆಗಳಿಂದ ಹೊಡೆದು ಕೊಲೆ ಮಾಡಿತ್ತು.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸಂತೆ ಕ್ರಾಸ್ ಬಳಿ ಇರುವ ಆನಂದ ಮಾರ್ಗ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಕೊಲೆ ನಡೆದಿತ್ತು. ಧರ್ಮಪ್ರಾಣಾನಂದ ಸ್ವಾಮಿ, ಪ್ರಸನ್ನೇಶ್ವರನಂದ ಸ್ವಾಮಿ ಹಾಗೂ ಅರುಣ್ ಕುಮಾರ್ ಕೊಲೆ ಆರೋಪಿಗಳು. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಆಶ್ರಮದ ಆಸ್ತಿ ಹಾಗೂ ಅಧಿಕಾರಕ್ಕಾಗಿ ಕೊಲೆಯಾದ ಸ್ವಾಮೀಜಿ ಹಾಗೂ ಕೊಲೆ ಮಾಡಿರುವ ಗುಂಪಿನ ನಡುವೆ ಸುಮಾರು ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಕಳೆದ ಹತ್ತು ವರ್ಷಗಳ ಹಿಂದೆ ಮೃತ ಸ್ವಾಮೀಜಿಯ ಮೇಲೆ ಗುಂಡಿನ ದಾಳಿಯೂ ನಡೆದಿತ್ತು. ಈ ವೇಳೆ ಅವರು ಪಾರಾಗಿದ್ದರು. ಶನಿವಾರ ಅವರು ಒಬ್ಬರೇ ಇರುವ ಸಮಯದಲ್ಲಿ ದಾಳಿ ಮಾಡಿದ ಆರೋಪಿಗಳು ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತಲೆಮೆರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version