Site icon Vistara News

Murder Case: ಕತ್ತು ಸೀಳಿ ಬಾವಿಗೆ ಎಸೆದು ವ್ಯಕ್ತಿಯ ಹತ್ಯೆ

belagavi murdered

ಬೆಳಗಾವಿ: ಬೆಳಗಾವಿಯಲ್ಲಿ ಕತ್ತು ಸೀಳಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿದೆ. ದುರುಳರು ಚಾಕುವಿನಿಂದ ವ್ಯಕ್ತಿಯ ಕತ್ತು ಕೊಯ್ದು ಬಾವಿಗೆ ಶವವನ್ನು ಎಸೆದು ಪರಾರಿ ಆಗಿದ್ದಾರೆ.

ಬೆಳಗಾವಿ ನಗರದ ತಾನಾಜಿ ಗಲ್ಲಿಯಲ್ಲಿ ಘಟನೆ ನಡೆದಿದೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹನುಮಂತ ಮಾದ್ಯಾಳಿ (37) ‌ಕೊಲೆಯಾದ ವ್ಯಕ್ತಿ. ತಾನಾಜಿ ಗಲ್ಲಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತ ಅವರ ಕೊಲೆಗೆ ನಿಖರ ಕಾರಣ ಶೋಧಿಸಲಾಗುತ್ತಿದೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆಗಾರರ ಶೋಧ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿ ಬೇಡ, ಓದಿಕೊಳ್ಳಿ ಎಂದದ್ದಕ್ಕೆ ಪಂಚರ ಮನೆ ಧ್ವಂಸ ಮಾಡಿದ ಪುಂಡರು

ಬೆಳಗಾವಿ: ಹುಡುಗಿ ವಿಚಾರದಲ್ಲಿ ಹುಡುಗರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಬುದ್ಧಿಮಾತು ಹೇಳಿದ ಗ್ರಾಮದ ಪಂಚರ ಮನೆಗೇ ಹುಡುಗರು ದಾಳಿ ನಡೆಸಿ ಆಸ್ತಿಪಾಸ್ತಿ ಹಾನಿ (Crime News) ಮಾಡಿದ್ದಾರೆ.

ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದ ಘಟನೆಯಿದು. ರಾಯಚೂರಿನ ಒಂದು ಪ್ರೌಢಶಾಲೆಯಲ್ಲಿ ಗ್ಯಾಂಗ್‌ವಾರ್‌ ನಡೆದು ಎರಡು ತರಗತಿಯ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಳ್ಳಲು ಏರ್‌ಗನ್‌, ಬಟನ್‌ ಚಾಕು, ಡ್ಯಾಗರ್‌ ಇತ್ಯಾದಿ ತಂದ ಪ್ರಕರಣ ನಿನ್ನೆ ನಡೆದಿತ್ತು. ಅದು ಇನ್ನೂ ಹಸಿರಾಗಿರುವಾಗಲೇ ಈ ಘಟನೆ ನಡೆದಿದೆ.

ನಾವಗೆ ಗ್ರಾಮದ ನಾಲ್ಕು ಮನೆಗಳ ಮೇಲೆ ದಾಳಿ ನಡೆದಿದೆ. ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ 20ಕ್ಕೂ ಅಧಿಕ ಪುಂಡರು ಮನೆಯ ಮುಂದೆ ನಿಲ್ಲಿದ್ದ ಕಾರು, ಮನೆಯ ಗ್ಲಾಸ್ ಒಡೆದು ಹಾಕಿದ್ದಾರೆ. ಎರಡು ಬೈಕ್, ಕಾರಿನ ಗ್ಲಾಸ್ ಒಡೆದು ಹಾಕಿ ಗಲಾಟೆ ಮಾಡಿ ಹೋಗಿದ್ದಾರೆ.

ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಹುಡುಗಿಯೊಬ್ಬಳ ಪ್ರೀತಿಯ ವಿಚಾರಕ್ಕೆ ಗಲಾಟೆ ನಡೆದಿತ್ತು. ಓದುವ ವಯಸ್ಸಲ್ಲಿ ಪ್ರೀತಿ ಗೀತಿ ಎಂದು ಸಮಯ ವ್ಯರ್ಥ ಮಾಡುವುದು ತಪ್ಪು ಎಂದು ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ ಬುದ್ಧಿಮಾತು ಹೇಳಿದ್ದರು.

ಇದರಿಂದ ವ್ಯಗ್ರರಾದ ಆರೋಪಿಗಳು ಪಂಚರ ಮನೆಯನ್ನು ಧ್ವಂಸ ಮಾಡಲು ಯತ್ನಿಸಿದ್ದಾರೆ. 30ಕ್ಕೂ ಅಧಿಕ ಯುವಕರ ಗುಂಪಿನಿಂದ ಗ್ರಾಮದ ಹಿರಿಯರ ನಾಲ್ಕು ಮನೆಗಳ ಮೇಲೆ ದಾಳಿಯಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಕ್ರಮ ಗೋ ಸಾಗಾಟ ತಡೆ

ಬಳ್ಳಾರಿ: ಅಕ್ರಮವಾಗಿ ಗೋ ಕಳ್ಳ ಸಾಗಾಣಿಕೆ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿ ಪೊಲೀಸರು ಗೋವುಗಳ ರಕ್ಷಣೆ ಮಾಡಿದ್ದಾರೆ. ಗೋಔು ತುಂಬಿದ್ದ ಲಾರಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ನಡೆದಿದೆ.

ಸುಮಾರು 25ಕ್ಕೂ ಹೆಚ್ಚು ದನಗಳನ್ನು ತುಂಬಿಕೊಂಡಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಂದ್ರಪ್ರದೇಶದ ಅಜ್ಘರ್ ಹಾಗೂ ಜಾವೀದ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಆಂಧ್ರಪ್ರದೇಶದ ಅನಂತಪುರಕ್ಕೆ ಗೋ ಸಾಗಾಣಿಕೆ ಮಾಡಲಾಗುತ್ತಿತ್ತು. ಒಂದೇ ಲಾರಿಯಲ್ಲಿ ಸುಮಾರು 25ಕ್ಕೂ ಅಧಿಕ ಗೋವುಗಳನ್ನು ತುಂಬಿಕೊಂಡು ಅಕ್ರಮ ಸಾಗಾಣಿಕೆ ನಡೆಸಲಾಗುತ್ತಿತ್ತು. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Skeletons found : ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆ! ಕೊಲೆನಾ? ಆತ್ಮಹತ್ಯೆನಾ

Exit mobile version