Site icon Vistara News

Murder Case : ಇದೆಂಥಾ ಕ್ರೌರ್ಯ?; ತಂದೆ-ತಾಯಿಯನ್ನು ಕೊಂದ ದುಷ್ಟರು 12 ವರ್ಷಗಳ ಬಳಿಕ ಮಗನನ್ನೂ ಕೊಚ್ಚಿದರು

Murder case at Belagavi

ಬೆಳಗಾವಿ: ಬೆಳಗಾವಿ ಜಿಲ್ಲೆಯ (Belagavi News) ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಭಯಾನಕ ಕೊಲೆಯೊಂದು ನಡೆದಿದೆ. ವಿಜಯ್ ರಾಮಚಂದ್ರಪ್ಪ ಆರೇರ್ (34) ಎಂಬ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ (young man murdered) ಮಾಡಲಾಗಿದೆ. ಈ ಕೊಲೆಗೂ 12 ವರ್ಷದ ಹಿಂದೆ ನಡೆದ ಕೊಲೆಗೂ (Murder Case) ಸಂಬಂಧವಿರುವುದು ಬಯಲಾಗಿದೆ.

ಕಲ್ಲಪ್ಪ ಕ್ಯಾತಣ್ಣವರ್‌ ಎಂಬಾತ ವಿಜಯ್‌ ಮೇಲೆ ಹಲ್ಲೆ ನಡೆಸಲು ಬಂದಿದ್ದು, ಈ ಸಂದರ್ಭದಲ್ಲಿ ಪರಸ್ಪರ ಹೊಡೆದಾಟ ನಡೆದು ಮಚ್ಚಿನಿಂದ ಕೊಚ್ಚಲಾಗಿತ್ತು. ಈ ವೇಳೆ ತೀವ್ರ ಗಾಯಗೊಂಡ ವಿಜಯ್‌ನನ್ನು ಕುಟುಂಬಿಕರು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬಿಮ್ಸ್ ಆಸ್ಪತ್ರೆಯಲ್ಲಿ ವಿಜಯ್ ಮೃತಪಟ್ಟಿದ್ದಾರೆ. ಅತ್ತ ಕಲ್ಲಪ್ಪ ಕ್ಯಾತಣ್ಣವರ್‌ಗೂ ಗಾಯಗಳಾಗಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ಹಳೆ ವೈಷಮ್ಯದಿಂದ ನಡೆಸಿರುವ ಕೊಲೆ ಎಂಬುದು ಈಗ ಬೆಳಕಿಗೆ ಬಂದಿದೆ. 12 ವರ್ಷಗಳ ಹಿಂದೆ ವಿಜಯ್‌ ಹೆತ್ತವರನ್ನು ಕೊಲೆ ಮಾಡಿದವರೇ ಈಗ ವಿಜಯ್‌ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

Murder at Belagavi

ಅದು 12 ವರ್ಷಗಳ ಹಿಂದಿನ ಭೀಕರ ಘಟನೆ

2011ರಲ್ಲಿ ವಿಜಯ್ ಆರೇರಾ ತಂದೆ ರಾಮಚಂದ್ರ ಅಪ್ಪಯ್ಯ ಅರೇರಾ ಮತ್ತು ತಾಯಿ ಪಾರ್ವತಿ ಅರೇರಾ ಅವರನ್ನು ಒಂದು ಗ್ಯಾಂಗ್‌ ಕೊಲೆ ಮಾಡಿತ್ತು. ಆ ಗ್ಯಾಂಗ್‌ಗೆ ಕೋರ್ಟ್‌ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ದುಷ್ಟರು ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಅವರೇ ವಿಜಯ್‌ನನ್ನೂ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವಿಜಯ್‌ ಅವರ ತಂದೆ ತಾಯಿ ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದರು. ಊರಿನ ಅಭಿವೃದ್ಧಿ ಮಾಡಿ ಭಾರಿ ಜನಮನ್ನಣೆ ಪಡೆದಿದ್ದರು. ಅದನ್ನು ಸಹಿಸದೆ, ಜನಪ್ರಿಯತೆಯನ್ನು ತಾಳದೆ ಅವರ ಕೊಲೆ ಮಾಡಲಾಗಿತ್ತು. ಅದೇ ಪ್ರಕರಣದಲ್ಲಿ ಆರೋಪಿಗಳು ಜೈಲುಪಾಲಾಗಿದ್ದರು. ಅವರೀಗ ಜಾಮೀನಿನ ಮೇಲೆ ಹೊರಗೆ ಬಂದಿದೆ.

ನಿಜವೆಂದರೆ ಆವತ್ತು ಹೆತ್ತವರ ಮೇಲೆ ದ್ವೇಷ ಸಾಧಿಸಿದ್ದ ವಿಜಯ ಮಾವ ಶಿವಾಜಿ ಸಂಭೋಜಿ ಮಗನ ಮೇಲೂ ದ್ವೇಷ ಸಾಧನೆ ಮುಂದುವರಿಸಿದ್ದ ಎನ್ನಲಾಗಿದೆ. ಹೀಗಾಗಿ ಆ ಗ್ಯಾಂಗ್‌ ಹೊರಬರುತ್ತಲೇ ಕೊಲೆಗೆ ಸುಪಾರಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Murder Case : ತವರು ಮನೆ ಸೇರಿದ್ದ ಹೆಂಡ್ತಿಗೆ ಗುಂಡು ಹೊಡೆದು ಕೊಂದಿದ್ದ ಪಾಪಿ ಆತ್ಮಹತ್ಯೆಗೆ ಶರಣು!

ಭಾನುವಾರ ತಡರಾತ್ರಿ ಮಚ್ಚು ಲಾಂಗುಗಳೊಂದಿಗೆ ಬಂದ ತಂಡ ಹಲ್ಲೆ ಮಾಡಿ ಪರಾರಿಯಾಗಿದೆ. ಹಲ್ಲೆ ಮಾಡಿದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿರುವ ಕಿತ್ತೂರು ಪೊಲೀಸರು ವಿಚಾರಣೆ ನಡೆಸಿದಾಗ ಹಳೆ ಪ್ರಕರಣಕ್ಕೂ ಇದಕ್ಕೂ ಸಂಬಂಧ ಸಿಕ್ಕಿದೆ.

ಘಟನೆಗೆ ಸಂಬಂಧಿಸಿದಂತೆ ಕಲ್ಲಪ್ಪ ಕ್ಯಾತಣ್ಣವರ್ ಹಾಗೂ ಭರತ್ ಎಂಬ ಆರೋಪಿಗಳು ಪೊಲೀಸರ ವಶವಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.

Exit mobile version