Site icon Vistara News

Murder case : ಬೆಳಗಾವಿಯಲ್ಲಿ ಹರಿದ ನೆತ್ತರು; ಯುವಕನ ಬರ್ಬರ ಹತ್ಯೆ

Murder Case

ಬೆಳಗಾವಿ: ಬೆಳಗಾವಿಯಲ್ಲಿ (Belgavi News) ಬೆಳ್ಳಂ‌ಬೆಳಗ್ಗೆ ನೆತ್ತರಕೋಡಿ ಹರಿದಿದೆ. ಮಾರಕಾಸ್ತ್ರಗಳಿಂದ‌ ಕೊಚ್ಚಿ ಯುವಕನನ್ನು ಬರ್ಬರ ಹತ್ಯೆ (Murder case) ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಬಳಿ ಈ ಕೃತ್ಯ ನಡೆದಿದೆ. ಲಕ್ಷ್ಮೇಶ್ವರ ನಿವಾಸಿ ಮೋಮಿನ್ (28) ಕೊಲೆಯಾದ ದುರ್ದೈವಿ.

ಹಾಡಹಗಲೇ ಮಚ್ಚು ಹಿಡಿದು ಬಂದ ವ್ಯಕ್ತಿಯೊಬ್ಬ ಏಕಾಏಕಿ ಯಾಸಿನ್‌ ಮೋಮಿನ್‌ ಮೇಲೆ ದಾಳಿ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆ ಎಲ್ಲರ ಮುಂದೆಯೇ ಯಾಸಿನ್‌ ಮೋಮಿನ್‌ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಬೀಸಿ ಕೊಂದಿದ್ದಾನೆ.

ಇನ್ನೂ ಯಾಸಿನ್‌ ಮೋಮಿನ್‌ನನ್ನು ಕೊಂದ ಆರೋಪಿ ಅಮೋಘ ಢವಳೇಶ್ವರ ಎಂಬಾತನನ್ನು ಕುಲಗೋಡ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮೋಘನ ಪತ್ನಿ ಶಿಲ್ಪಾಳಾನ್ನು ಈ ಯಾಸಿನ್‌ ಮೋಮಿನ್‌ ಬೈಕ್ ಮೇಲೆ ಕರೆದೊಯ್ದುತ್ತಿದ್ದ. ಇದರಿಂದ ಸಿಟ್ಟಾದ ಅಮೋಘ, ಯಾಸಿನ್ ಮೋಮಿನ್‌ ಹಾಗೂ ಪತ್ನಿ ಶಿಲ್ಪಾ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ.

ಘಟನೆಯಲ್ಲಿ ತೀವ್ರಗಾಯಗೊಂಡ ಶಿಲ್ಪಾ ಢವಳೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಮೋಘ ಹೊಡೆತಕ್ಕೆ ಯಾಸಿನ್‌ ಮೋಮಿನ್‌ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದ ಲಕ್ಷ್ಮೇಶ್ವರ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Fraud Case : ಮಸಾಜ್‌ ಥೆರಪಿಸ್ಟ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷ ಲೂಟಿ ಮಾಡಿದ ನಕಲಿ ಪೊಲೀಸ್‌

ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು; ಚಾಕು ಇರಿದು ದೇಗುಲದ ಪೂಜಾರಿಯ ಕೊಲೆ

ಹುಬ್ಬಳ್ಳಿ: ಯುವತಿ ನೇಹಾ ಹಿರೇಮಠ (Neha Hiremath) ಕೊಲೆಯ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲೀಗ (Hubballi News) ಮತ್ತೆ ನೆತ್ತರು ಹರಿದಿದೆ. ಹುಬ್ಬಳ್ಳಿಯ ಈಶ್ವರ ನಗರದಲ್ಲಿರುವ ದೇವಾಲಯದ ಪೂಜಾರಿ ಆಗಿದ್ದ ದೇವೇಂದ್ರಪ್ಪ ಹೊನ್ನಳ್ಳಿ (Devendrappa Honnalli) ಎಂಬುವರನ್ನು ದುಷ್ಕರ್ಮಿಯೊಬ್ಬ ಭಾನುವಾರ (ಜುಲೈ 21) ಸಂಜೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ನಡೆಸಿದ್ದಾನೆ. ಈಶ್ವರಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ದೇವೇಂದ್ರಪ್ಪ ಹೊನ್ನಳ್ಳಿ ಅವರು ಈಶ್ವರ ನಗರದ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದರು. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. “ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಒಬ್ಬ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

crime Scene Occasional photo

“ಆರೋಪಿಯ ಬಂಧನಕ್ಕೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ. ಚಾಕುವಿನಿಂದ ಇರಿದು ಆರೋಪಿಯು ಪರಾರಿಯಾಗಿದ್ದಾನೆ. ಇದಕ್ಕೂ ಮೊದಲು ಕೂಡ ದೇವೇಂದ್ರಪ್ಪ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ” ಎಂಬುದಾಗಿ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಅವರು ತಿಳಿಸಿದ್ದಾರೆ.

ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ

ಕೆಲ ದಿನಗಳ ಹಿಂದಷ್ಟೇ, ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ‌ ನಡೆಸಿ ಯುವಕನೊಬ್ಬನ ಕೊಲೆ ಮಾಡಲಾಗಿತ್ತು. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ನೇಪಾಳಿ ಮೂಲದ ಬಾಲಾಜಿ ಮೃತ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಾಲಾಜಿ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಅಮಲಿನಲ್ಲಿ ಕ್ಯಾತೆ ತೆಗೆದು ಸ್ನೇಹಿತರೊಟ್ಟಿಗೆ ಜಗಳ ಶುರು ಮಾಡಿದ್ದ. ಜಗಳವು ವಿಕೋಪಕ್ಕೆ ತಿರುಗಿದ್ದು, ಬಾಲಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿತ್ತು.

ಕೋಣನಕುಂಟೆ ಸಮುದಾಯ ಭವನ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version