ಬೆಳಗಾವಿ: ಶೈಕ್ಷಣಿಕ ಕ್ಷೇತ್ರಕ್ಕೆ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವು ಸಾಧಿಸುತ್ತದೆ. ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಹೇಳಿದರು.
ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಭೆ ಅಂತ್ಯದ ಬಳಿಕ ಮಾತನಾಡಿದ ಜೋಶಿ, ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಭಿನ್ನಮತ ಇಲ್ಲ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಮುಖ್ಯಮಂತ್ರಿ, ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವು ಸಾಧಿಸುತ್ತದೆ. ಶೈಕ್ಷಣಿಕ ಕ್ಷೇತ್ರಕ್ಕೆ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಎಂದರು.
ಇದನ್ನೂ ಓದಿ | ಬೆಳಗಾವಿಯಲ್ಲಿ 700 ಎಕರೆ ಜಮೀನು ಹಸ್ತಾಂತರಕ್ಕೆ ಕೇಂದ್ರ ರಕ್ಷಣಾ ಸಚಿವರ ಆಶ್ವಾಸನೆ
ಭಾರತದಲ್ಲಿ ಪ್ರಥಮ ಭಾರಿಗೆ ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಬಿಜೆಪಿ ಪ್ರಾರಂಭ ಮಾಡಿದೆ. ಹಿಂದಿ ಭಾಷೆ ಕುರಿತು ಕೆಲವರು ವಿವಾದ ಮಾಡಿದ್ದಾರೆ. ಆದರೆ ಸ್ಥಳೀಯ ಭಾಷೆಗಳು ಆತ್ಮ ಎಂದು ಸ್ವತಃ ಪ್ರಧಾನಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ವರ್ಷ ಬಜೆಟ್‌ನಲ್ಲಿ ಅತಿ ಹೆಚ್ಚು ಹಣ ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿಗಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನ ಬಂದಿದೆ ಎಂದರು.
ಚುನಾವಣೆ ಕುರಿತು ಮಾತನಾಡಿದ ಪ್ರಲ್ಹಾದ ಜೋಶಿ, ಎಲ್ಲ ಶಾಸಕರು, ಸಂಸದರ ಜತೆಗೆ ಈಗಾಗಲೆ ಚರ್ಚೆ ಮಾಡಿದ್ದೇವೆ. ಚುನಾವಣೆ ತಂತ್ರ ರೂಪಿಸಲಾಗಿದ್ದು, ಎಲ್ಲರೂ ಕೆಲಸ ಆರಂಭ ಮಾಡಲಿದ್ದಾರೆ. ವಿಧಾನಸಭೆ ಕ್ಷೇತ್ರದಲ್ಲಿ ಮತದಾರರು, ಪಕ್ಷದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದು, ಶಾಸಕರಿಗೆ ಹೆಚ್ಚಿನ ಲೀಡ್ ಕೊಡಿಸುವ ಜವಾಬ್ದಾರಿ ನೀಡಲಾಗಿದೆ ಎಂದರು.
ಭಿನ್ನಮತವಿಲ್ಲ ಎಂದ ಬಾಲಚಂದ್ರ
ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ವಿಚಾರ ಕುರಿತಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತೊಂದೆಡೆ ಪ್ರತಿಕ್ರಿಯಿಸಿದ್ದಾರೆ. ಈ ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದಾರೆ.ಮುಂದಿನ ದಿನಗಳಲ್ಲಿ ಬಿಜೆಪಿಗೆ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ, ಸೋಲುವ ಪ್ರಶ್ನೆ ಇಲ್ಲ ಎಂದರು. ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.
ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯ ಬಗ್ಗೆ ಮಾತನಾಡಿ, ಅವರೂ ಬಿಜೆಪಿ ಅಭ್ಯರ್ಥಿಗೆ ಸಪೋರ್ಟ್ ಮಾಡುವುದಾಗಿ ಹೇಳಿದ್ದಾಗಿ ತಿಳಿಸಿದರು.
ಇದನ್ನೂ ಓದಿ | ಶಿಕ್ಷಕರ ನೇಮಕ: ಬಿಗಿ ಭದ್ರತೆಯಲ್ಲಿ ನಾಳೆಯಿಂದ ಲಿಖಿತ ಪರೀಕ್ಷೆ