Site icon Vistara News

ಬೆಳಗಾವಿ ಅಧಿವೇಶನ | ಹೊಸ ಆರ್‌ಟಿಒ ಕಚೇರಿಗಳ ಸ್ಥಾಪನೆ ಇಲ್ಲ ಎಂದ ಸಚಿವ ಬಿ. ಶ್ರೀರಾಮುಲು

no-new-rto-offices-says-transport-minister

ವಿಧಾನಸಭೆ: ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯು ಬಹುತೇಕ ಕಡೆಗಳಲ್ಲಿ ಸಾರಿಗೆ ಶಿಬಿರಗಳನ್ನು ನಡೆಸುತ್ತಿದೆ. ಸುಮಾರು 30 ಸೇವೆಗಳನ್ನು ಆನ್‌ಲೈನ್ ಮೂಲಕವೇ ಒದಗಿಸಲಾಗುತ್ತಿದೆ. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡದೇ ಸಂಪರ್ಕ ರಹಿತವಾಗಿ ಸೇವೆಗಳನ್ನು ಪಡೆಯುವ ಸೌಲಭ್ಯಗಳಿರುವುದರಿಂದ ರಾಜ್ಯದಲ್ಲಿ ಹೊಸದಾಗಿ ಪ್ರಾದೇಶಿಕ ಸಾರಿಗೆ (ಆರ್‌ಟಿ‌ಒ)ಕಚೇರಿಗಳನ್ನು ಸ್ಥಾಪಿಸುವುದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು‌.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬೈಂದೂರು ಶಾಸಕ ಸುಕುಮಾರಶೆಟ್ಟಿ ಪ್ರಶ್ನೆಗೆ ಉತ್ತರಿಸುತ್ತ ಈ ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ತಾಲೂಕುಗಳು ಮತ್ತು ಸುತ್ತಮುತ್ತಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಕುಂದಾಪುರದಲ್ಲಿ ಪ್ರತಿ ಮಂಗಳವಾರ ಸಾರಿಗೆ ಶಿಬಿರ ನಡೆಯುತ್ತಿದೆ. ರಾಜ್ಯದ ಇತರೆಡೆಗಳಲ್ಲಿಯೂ ಅವಶ್ಯಕತೆಗೆ ಅನುಗುಣವಾಗಿ ನಿಯಮಿತವಾಗಿ ಸಾರಿಗೆ ಶಿಬಿರಗಳು ನಡೆಯುತ್ತಿವೆ.

ಕುಂದಾಪುರದಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪಿಸಬೇಕೆಂಬ ಪ್ರಸ್ತಾವ ಸರ್ಕಾರದ ಗಮನಕ್ಕೆ ಬಂದಿದ್ದು, ಅಲ್ಲಿ ಕಚೇರಿ ಸ್ಥಾಪನೆಗೆ ಮಾನದಂಡಗಳು ಪೂರೈಕೆಯಾಗಿಲ್ಲ ಎಂಬ ಎಂದು ಉಡುಪಿ ಆರ್‌ಟಿಒ ವರದಿ ಸಲ್ಲಿಸಿದ್ದಾರೆ.

ಹೊಸ ಆರ್‌ಟಿಒ ಅಥವಾ ಎಆರ್‌ಟಿಒ ಕಚೇರಿಗಳನ್ನು ತೆರೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸುವ ಕುರಿತು ಪರಿಶೀಲಿಸಿ ವರದಿ ನೀಡಲು ಅಪರ ಸಾರಿಗೆ ಆಯುಕ್ತರು ಹಾಗೂ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು, ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಶಿಬಿರಗಳನ್ನು ನಡೆಸುತ್ತಿದೆ, ಸುಮಾರು 30 ಸೇವೆಗಳನ್ನು ಆನ್‌ಲೈನ್ ಸೇವೆಗಳನ್ನಾಗಿ ಮಾರ್ಪಡಿಸಲಾಗಿದೆ. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡದೇ ಸಂಪರ್ಕರಹಿತವಾಗಿ ಸೇವೆಗಳನ್ನು ಪಡೆಯಲು ಅವಕಾಶಗಳಿರುವದರಿಂದ ಹೊಸ ಆರ್‌ಟಿಒ ಕಚೇರಿಗಳ ಸ್ಥಾಪನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬ ಅಭಿಪ್ರಾಯ ನೀಡಿದೆ.

ಸಾರ್ವಜನಿಕರಿಗೆ ವಾಹನ ಅನುಜ್ಞಾ ಪತ್ರ, ವಾಹನ ನೋಂದಣಿಯ ಸ್ಮಾರ್ಟ್ ಕಾರ್ಡ್‌ಗಳನ್ನು ಅವರ ಮನೆಯ ವಿಳಾಸಗಳಿಗೆ ಅಂಚೆ ಮೂಲಕ ತಲುಪಿಸಲಾಗುತ್ತಿದೆ. ವಾಹನ-4, ಸಾರಥಿ-4 ಮತ್ತು ಇ-ಪೇಮೆಂಟ್ ಆಫ್ ಟ್ಯಾಕ್ಸ್‌ನಂತಹ ಆನ್‌ಲೈನ್ ಸೇವೆಗಳನ್ನು ರಾಜ್ಯದ ಎಲ್ಲಾ ಕಚೇರಿಗಳಲ್ಲಿ ಜಾರಿಗೊಳಿಸಲಾಗಿದೆ.

ಕರ್ನಾಟಕ -ಒನ್‌, ಬೆಂಗಳೂರು -ಒನ್‌ ಮತ್ತು ಮೊಬೈಲ್-ಒನ್‌ ಆ್ಯಪ್‌ಗಳ ಮೂಲಕವೂ ವಾಹನಗಳ ಮಾಹಿತಿ, ವಿವರಗಳನ್ನು ಪಡೆಯಬಹುದಾಗಿದೆ. ಇ-ಆಡಳಿತ ಇಲಾಖೆಯ ಗ್ರಾಮ ಒನ್ ಮತ್ತು ಜನಸೇವಕ ಯೋಜನೆಗಳಡಿಯೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಸಾರಿಗೆ ಇಲಾಖೆಯಲ್ಲಿ ಯಾವುದೇ ಹೊಸ ಕಚೇರಿಗಳನ್ನು ಪ್ರಾರಂಭಿಸುವ ಅವಶ್ಯಕತೆ ಉದ್ಭವಿಸುವುದಿಲ್ಲ ಎಂದು ಸಚಿವ ಬಿ. ಶ್ರೀರಾಮುಲು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ | Transport Workers Protest | ಸಚಿವರ ಭರವಸೆಗೆ ಸಾರಿಗೆ ನೌಕರರ ಡೋಂಟ್ ಕೇರ್; ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ

Exit mobile version