ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪುರ ತಾಂಡಾದಲ್ಲಿರುವ (Obalapura Tanda) ಅಂಗನವಾಡಿ ಶಿಕ್ಷಕಿ (Anganavadi Teacher) ಮತಾಂತರಕ್ಕೆ ಪ್ರಯತ್ನ (Conversion Attempt) ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಎದುರಾಗಿದೆ. ತಾಂಡಾದ ಅಂಗನವಾಡಿ ಶಿಕ್ಷಕಿ ಸುಮಿತ್ರಾ ಲಮಾಣಿ ಅವರು ತಾವು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಈಗ ಉಳಿದವರನ್ನು ಸೇರಿಸಲು ಯತ್ನಿಸುತ್ತಿದ್ದಾರೆ. ಅವರು ಅಂಗನವಾಡಿಯ ಪುಟ್ಟ ಮಕ್ಕಳಲ್ಲಿ ಕ್ರೈಸ್ತ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹಣದ ಆಮಿಷ, ಅನಾರೋಗ್ಯ, ಬಡತನಗಳನ್ನೇ ದಾಳವಾಗಿಸಿಕೊಂಡು ಮತಾಂತರ ಮಾಡುತ್ತಿದ್ದು ಅಂಗನವಾಡಿಯಲ್ಲಿ ಮಕ್ಕಳಿಗೆ ಪ್ರಾಥನೆ ಹೇಳುವ ಬದಲು ಕ್ರಿಸ್ತ ಗೀತೆ ಕಲಿಸುತ್ತಿದ್ದಾರೆ ಎಂದು ದೂರಲಾಗಿದೆ. ಇದರಿಂದ ಸಿಟ್ಟಾಗಿರುವ ತಾಂಡಾದ ಜನರು ಕುಟುಂಬವನ್ನು ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಶಾಲೆಯಿಂದಲೂ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಊರಿನ ಮುಖ್ಯ ಬೀದಿಯಲ್ಲಿ ಸೇರಿ ಧಿಕ್ಕಾರ ಕೂಗುತ್ತಿದ್ದಾರೆ.
ʻʻತಾಂಡಾದಲ್ಲಿ ಮತಾಂತರ ಮಾಡ್ತಿದ್ದಾರೆ ಎಂದು ನನಗೆ ಬಹಳ ಹಿಂದಿನಿಂದ ಮಾಹಿತಿ ಇತ್ತು, ಆದರೆ ಇತ್ತೀಚೆಗೆ ಅದು ಜಾಸ್ತಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯ ಮುಖಾಂತರ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸುಮಾರು 25 ಕುಟುಂಬಗಳು ಮತಾಂತರ ಆಗಿರುವ ಮಾಹಿತಿ ಇದೆ, ನಾವು ಈಗಾಗಲೇ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರಿಗೆ ಮಾಹಿತಿ ನೀಡಿದ್ದೇವೆʼʼ ಎಂದು ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಹೇಳಿದ್ದಾರೆ.
ʻʻಒಂದೇ ತಾಂಡಾ ಅಲ್ಲ 18 ತಾಂಡಾಗಳಲ್ಲೂ ಮತಾಂತರ ಮಾಡುವ ಯತ್ನ ಆಗಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಕಾನೂನು ಹೋರಾಟ ಮಾಡುತ್ತೇವೆ. ಮತಾಂತರಕ್ಕೆ ಯತ್ನಿಸಿದವರ ಮೇಲೆ ಎಫ್ಐಆರ್ ಕೂಡ ದಾಖಲಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ.
ಸುಮಿತ್ರಾ ಲಮಾಣಿಯನ್ನು ಕರೆದು ಮತಾಂತರ ಮಾಡದಂತೆ ಗ್ರಾಮಸ್ಥರು ವಾರ್ನಿಂಗ್ ಮಾಡಿದ್ದರು. ಹಲವು ಬಾರಿ ವಾರ್ನಿಂಗ್ ಕೊಟ್ಟರೂ ಸುಮಿತ್ರಾ ತಮ್ಮ ಕೆಲಸವನ್ನು ಬಿಟ್ಟಿರಲಿಲ್ಲ ಎನ್ನುವುದು ಜನರ ಆರೋಪ.
ನನ್ನನ್ನು ಮತಾಂತರ ಮಾಡಲು ಪ್ರಯತ್ನಿಸಿದ್ದಳು ಎಂದ ಸಹಾಯಕಿ
ಓಬಳಾಪುರದ ಅಂಗನವಾಡಿಯಲ್ಲಿ ನಡೆಯುತ್ತಿದೆ ಎನ್ನಲಾದ ಮತಾಂತರ ಆರೋಪದ ಬಗ್ಗೆ ಅಂಗನವಾಡಿ ಸಹಾಯಕಿ ರೇಣುಕಾ ಕೂಡಾ ಆರೋಪ ಮಾಡಿದ್ದಾರೆ.
ʻʻಶಾಲೆಯಲ್ಲಿ ಕೆಳಗೆ ತಲೆ ಹಾಕಿ ಅಲೂಲಿಯಾ ಎಂದು ಹೇಳಿಕೊಡುತ್ತಾರೆ. ಹುಟ್ಟೂರು, ತಂದೆ ತಾಯಿ, ಎಲ್ಲರನ್ನೂ ಬಿಡ್ತೀನಿ. ಆದರೆ ಏಸುವನ್ನು ಬಿಡಲ್ಲ ಎಂದು ಟೀಚರ್ ಹೇಳಿಕೊಡುತ್ತಾರೆ. ನನ್ನನ್ನೂ ಸಹ ಅವರ ಪ್ರಾರ್ಥನೆಗೆ ಕರೆದುಕೊಂಡು ಹೋಗಿದ್ದರು, ಅಲ್ಲಿ ಎಲ್ಲರೂ ವಿಚಿತ್ರ ರೀತಿಯಲ್ಲಿ ನಡ್ಕೊಳ್ತಿದ್ರು. ನಾನದನ್ನು ನೋಡಿ ಇದೇನು ಅಂತ ಕೇಳಿದೆ ಹೀಗೆ ಮಾಡಿದ್ರೆ ದೇವರು ಪ್ರತ್ಯಕ್ಷ ಆಗುತ್ತಾನೆ ಎಂದಳು, ನನ್ನನ್ನು ಸಹ ಅವರು ಕರೆದುಕೊಂಡು ಹೋಗಿ ಮತಾಂತರ ಮಾಡಲು ಯತ್ನ ಮಾಡಿದಳು, ಆದರೆ ನಾನು ಮತಾಂತರವಾಗಲಿಲ್ಲ ಎಂದು ಸಹಾಯಕಿ ರೇಣುಕಾ ಆರೋಪ ಮಾಡಿದ್ದಾರೆ.
ಶಿಕ್ಷಕಿ ಅಮಾನತಿಗೆ ಪ್ರಮೋದ್ ಮುತಾಲಿಕ್ ಆಗ್ರಹ
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಮತಾಂತರ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ ಎಂದು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಒತ್ತಾಯಪೂರ್ವಕವಾಗಿ ಮತಾಂತರ ಆದವರನ್ನು ಹಿಂದೂ ಧರ್ಮಕ್ಕೆ ತರಬೇಕು, ಇಲ್ಲದಿದ್ದರೆ ದೊಡ್ಡ ಪ್ರಮಾಣದ ಹೋರಾಟ ಮಾಡುವುದಾಗಿ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯನ್ನು ಸಸ್ಪೆಂಟ್ ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ ಮುತಾಲಿಕ್.