ಚಿಕ್ಕೋಡಿ: ನಟ ಪ್ರಕಾಶ್ ರಾಜ್ (Actor Prakash raj) ಮತ್ತಿತರ ಬುದ್ಧಿಜೀವಿಗಳು (Intellectuals) ಭಾರತ ದೇಶದಲ್ಲೇ ಹುಟ್ಟಿದ್ದೇ ಒಂದು ದೊಡ್ಡ ಕಳಂಕ. ಅವರೆಲ್ಲ ಚೀನಾದಲ್ಲಿ ಹುಟ್ಟಬೇಕಿತ್ತು. ಅವರಿಗೆ ಚೀನಾವೇ ಬೆಸ್ಟ್. ಅಲ್ಲಿ ನಾಸ್ತಿಕರಿದ್ದಾರೆ: ಹೀಗೆಂದು ಕಾಲೆಳೆದಿದ್ದಾರೆ ಶ್ರೀ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ (Pramod Mutalik).
ಹುಕ್ಕೇರಿಯಲ್ಲಿ ಮಾತನಾಡಿದ ಅವರು ಚಂದ್ರಯಾನ 3 (Chandrayaana 3) ವಿಚಾರದಲ್ಲಿ ಅಡ್ಡ ಮಾತನಾಡಿದ ಬುದ್ಧಿಜೀವಿಗಳು ಮತ್ತು ನಟ ಪ್ರಕಾಶ್ ರೈ ವಿರುದ್ಧ ಹರಿಹಾಯ್ದರು. ವಿಜ್ಞಾನಿಗಳು ಚಂದ್ರಯಾನ 3 ಪ್ರತಿಕೃತಿಯನ್ನು ತಿರುಪತಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿದ್ದನ್ನು ಬುದ್ಧಿ ಜೀವಿಗಳು ಲೇವಡಿ ಮಾಡಿದ್ದರು. ನಟ ಪ್ರಕಾಶ್ ರೈ ಅವರು ಚಂದ್ರಯಾನ ಯಶಸ್ವಿಯಾಗಲು ಇನ್ನೇನು ಎರಡು ದಿನ ಇರುವಾಗ ಒಂದು ಕಾರ್ಟೂನು ಹಂಚಿಕೊಂಡು ಲೇವಡಿ ಮಾಡಿದ್ದರು. ಚಂದ್ರಲೋಕದಲ್ಲಿ ಕೇರಳಿಗರು ಚಹಾ ಮಾರುವ ಹಳೆ ಜೋಕನ್ನು ವಿಜ್ಞಾನಿಗಳ ಮುಖ ಬಳಸಿ ವಿಕೃತವಾಗಿ ತೋರಿಸಿದ್ದು ಭಾರಿ ಆಕ್ಷೇಪಕ್ಕೆ ಕಾರಣವಾಗಿತ್ತು.
ಕೆಲವು ಬುದ್ಧಿಜೀವಿಗಳು ವಿಜ್ಞಾನಿಗಳು ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಕ್ಕೆ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದರು. ನಟ ಪ್ರಕಾಶ ರಾಜ್ ಕೆಟ್ಟದಾಗಿ ಚಿತ್ರ ಹಾಕಿದ್ದರು. ಈಗ ವಿಜ್ಞಾನಿಗಳು ಸಾಧನೆ ಮಾಡಿದ್ದು ಪ್ರಕಾಶ ರಾಜ್ ಮುಖದ ಮೇಲೆ ಉಗುಳಿದ ಹಾಗೆ ಆಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ʻʻಭಾರತ ಆಸ್ತಿಕರ ನಂಬಿಕೆ ಇರುವ ಧಾರ್ಮಿಕ ಸಂಪ್ರದಾಯದ ದೇಶ. ನಿಮ್ಮಂಥವರು ಇಲ್ಲಿ ಹುಟ್ಟುಬಾರದಿತ್ತು ಚೀನಾದಲ್ಲಿ ಹುಟ್ಟಬೇಕಿತ್ತು ಅಲ್ಲಿ ನಾಸ್ತಿಕರಿದ್ದಾರೆʼʼ ಎಂದು ಹೇಳಿದ ಅವರು, ʻʻವಿಜ್ಞಾನ, ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು, ದೇಹ ಮತ್ತು ಹೃದಯ ಇದ್ದ ಹಾಗೆ. ಇಂಥ ದೇಶದಲ್ಲಿ ನಿಮ್ಮಂಥ ಬುದ್ದಿ ಜೀವಿಗಳು ಹುಟ್ಟಿದ್ದು ದೊಡ್ಡ ಕಳಂಕʼʼ ಎಂದರು.
ತಿರುಪತಿಗೆ ಹೋಗಿ ಬಂದಿದ್ದರಿಂದಲೇ ಇಡೀ ಜಗತ್ತೇ ಹೆಮ್ಮೆಪಡುವಂತೆ ವಿಜ್ಞಾನಿಗಳು ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ ಮುತಾಲಿಕ್, ವಿಜ್ಞಾನಿಗಳು ಮಾಡುವ ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ ಎನ್ನುವುದನ್ನು ಬುದ್ಧಿಜೀವಿಗಳು ತಿಳಿದುಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ : Prakash Raj: ಚಂದ್ರಯಾನ-3 ಬಗ್ಗೆ ವ್ಯಂಗ್ಯಭರಿತ ಟ್ವೀಟ್ ಮಾಡಿದ ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ಪ್ರಕಾಶ್ ರಾಜ್ ಟ್ವೀಟ್‌ನಲ್ಲಿ ಏನಿತ್ತು?
ಪ್ರಕಾಶ್ ರಾಜ್ ಅವರು ಚಂದ್ರಯಾನ 3 (Chandrayaan 3) ಮಿಷನ್ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ (K Sivan) ಅವರನ್ನು ಅಣಕ ಮಾಡಲು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಫೋಟೊ ಹಂಚಿಕೊಂಡಿದ್ದರು. ಪ್ರಕಾಶ್ ರಾಜ್ ಹಂಚಿಕೊಂಡ ಚಿತ್ರದಲ್ಲಿ ಚಾಯ್‌ವಾಲಾ ಎಂಬುದಾಗಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವ್ಯಂಗ್ಯ ಮಾಡಿದಂತಿದೆ. “ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಅವರು ಬರೆದುಕೊಂಡಿದ್ದಾರೆ. ಚಂದ್ರಯಾನ 3 ಮಿಷನ್ ಯಶಸ್ಸಿಗೆ ದೇಶವೇ ಪ್ರಾರ್ಥಿಸುವ ಹೊತ್ತಿನಲ್ಲಿ ಪ್ರಕಾಶ್ ರಾಜ್ ಅವರು ಇಂತಹ ಫೋಟೊ ಶೇರ್ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.