ಬೆಳಗಾವಿ/ಜಮಖಂಡಿ/ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಲವು ಸೇತುವೆಗಳು ಮುಳುಗಿವೆ. ಗೋಕಾಕ ಫಾಲ್ಸ್ ಮೈದುಂಬಿಕೊಂಡಿದ್ದು, ಪ್ರವಾಸಿಗರು ಹರ್ಷಿತರಾಗಿದ್ದಾರೆ.
ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ಮತ್ತೆರಡು ಕೆಳ ಹಂತದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿರುವ ಜತ್ರಾಟ- ಭೀವಶಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ- ಬಾವನಸೌದತ್ತಿ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿವೆ. ಬ್ರಿಡ್ಜ್ ಮೇಲೆ ಓಡಾಡದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಇದಕ್ಕೂ ಮುನ್ನ ನಾಲ್ಕು ಕೆಳ ಹಂತದ ಸೇತುವೆ ಮುಳುಗಿವೆ. ಕಲ್ಲೋಳ- ಯಡೂರ, ಮಲಿಕವಾಡ- ದತ್ತವಾಡ, ಕಾರದಗಾ- ಭೋಜ, ಭೋಜವಾಡಿ- ಕೂನ್ನುರ ಗ್ರಾಮದ ಕೆಳ ಹಂತದ ನಾಲ್ಕು ಸೇತುವೆಗಳು ಮುಳುಗಿದ್ದವು. ಕೃಷ್ಣಾ, ದೂದ್‌ಗಂಗಾ, ವೇದಗಂಗಾ ನದಿಯಲ್ಲಿ ಹೆಚ್ಚಿನ ನೀರು ಬಂದಿದೆ. ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಬಹುದಾದ ತುಬಚಿ, ಶೂರ್ಪಾಲಿ ಗ್ರಾಮಗಳಿಗೆ ತಹಶೀಲ್ದಾರ ಸದಾಶಿವ ಅವರು ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಸ್ಥಳಾಂತರಕ್ಕೆ ಸಿದ್ದತೆ ಮಾಡಿಕೊಳ್ಳಲು ಜನರಿಗೆ ಸಲಹೆ ನೀಡಿದ್ದಾರೆ.
ಹಿಪ್ಪರಗಿ ಬ್ಯಾರೇಜ್‌ನಿಂದ 73 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ಸದ್ಯಕ್ಕೆ ಅಪಾಯ ಇಲ್ಲ. ಆದರೆ ಎರಡು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದಲ್ಲಿ ಹತ್ತಾರು ಗ್ರಾಮಗಳು ಪ್ರವಾಹಕ್ಕೆ ಸಿಲುಕಲಿವೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸನ್ನದ್ದರಾಗಬೇಕು ಎಂದಿದ್ದಾರೆ. ಪ್ರತಿ ವರ್ಷ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದಾಗ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತವೆ.
ಮೈದುಂಬಿದ ಗೋಕಾಕ ಜಲಪಾತ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಮುಂದುವರರಿದಿದ್ದು, ಬೆಳಗಾವಿಯಲ್ಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಗೋಕಾಕ್ ಜಲಪಾತ ಮೈದುಂಬಿಕೊಂಡಿದ್ದು, ನಯಾಗರ ಫಾಲ್ಸ್ ಅನ್ನು ಹೋಲುತ್ತಿದೆ. ಜಲಪಾತ ವೀಕ್ಷಿಸಲು ಗೋಕಾಕ ಫಾಲ್ಸಿಗೆ ಪ್ರವಾಸಿಗರ ದಂಡು ಬರುತ್ತಿದೆ. ಮಳೆಯಿಂದ ಘಟಪ್ರಭಾ ನದಿಯ ಒಳ ಹರಿವು ಹೆಚ್ಚಳವಾಗಿದ್ದು, ಗೋಕಾಕ ಜಲಪಾತದಲ್ಲೂ ನೀರಿನ ಪ್ರಮಾಣ ಏರಿದೆ.
ಇದನ್ನೂ ಓದಿ: Rain news | ಭೂಕುಸಿತ, ಪ್ರವಾಹ: ಆಗುಂಬೆ ಘಾಟಿ, ಸಂಪಾಜೆ ರಸ್ತೆ ಭಾಗಶಃ ಬಂದ್