ಬೆಳಗಾವಿ: ಯುವತಿಯ ಜತೆಗೆ ತಮ್ಮ ಸಿಡಿ ಪ್ರಕರಣದ ಕುರಿತು ಮಹತ್ವದ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾರಕಿಹೊಳಿ, ಒಬ್ಬ ಗ್ರಾಮೀಣ ಶಾಸಕಿಯ ಸಲುವಾಗಿ ಇಡೀ ರಾಜ್ಯವನ್ನು ಡಿ.ಕೆ. ಶಿವಕುಮಾರ್ ಹಾಳುಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಇದೊಂದು ಕ್ರಿಮಿನಲ್ ಕೇಸ್. ಕಳೆದ 2 ವರ್ಷಗಳಿಂದ ತೇಜೋವದೆ ಮಾಡಿ, ರಾಜಕೀಯ ಜೀವನ ಹಾಳು ಮಾಡಿದ್ದಾರೆ. ಈ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ನನ್ನ ಧರ್ಮಪತ್ನಿ, ಸಹೋದರರಿಗೆ ನಾನು ಋಣಿ. 2020 ಮಾರ್ಚ್ ತಿಂಗಳಲ್ಲಿ ಸಿಡಿ ರಿಲೀಸ್ ಆಗಿತ್ತು. ಒಂದು ಹೆಣ್ಣನ್ನು ಬಿಟ್ಟು ಷಡ್ಯಂತ್ರ ಮಾಡಿದ್ದಾರೆ. 1990 ರಿಂದ ರಾಜಕೀಯ ಜೀವನ ನಡೆಸುತ್ತಿದ್ದೇನೆ. ಅದೇ ಸಮಯದಲ್ಲಿ ಡಿಕೆಶಿ ಸ್ಪರ್ಧಿಸಿದ್ರು. ಇಬ್ಬರು ಮೊದಲ ಚುನಾವಣೆಯಲ್ಲಿ ಸೋತಿದ್ದೇವೆ.
ಆಗ ಡಿಕೆಶಿ ಹರಕ ಚಪ್ಪಳಿ ಧರಿಸುತ್ತಿದ್ದ, ಇಂದು ಅಗರ್ಭ ಶ್ರೀಮಂತ.
ಇಬ್ಬರೂ ಕಾಂಗ್ರೆಸ್‌ನಲ್ಲಿ ಇದ್ದಾಗ ಬಹಳ ಒಳ್ಳೆಯ ಸ್ನೇಹಿತರಾಗಿದ್ದೆವು. ಡಿ.ಕೆ. ಶಿವಕುಮಾರ್‌ಗೆ ಅನಾರೋಗ್ಯವಾಗಿದ್ದಾಗ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದೆ. ಆಗ ಡಿ.ಕೆ. ಶಿವಕುಮಾರ್ ಧರ್ಮ ಪತ್ನಿ ಉಷಾ ಡಿ.ಕೆ. ಶಿವಕುಮಾರ್ ಅವರು ಬಂದು ಮಾತನಾಡಿಸಿದರು. ಅಣ್ಣಾ ನೀವಿಬ್ಬರೂ ಒಳ್ಳೆಯ ಸ್ನೇಹಿತರು, ಮೂರನೆಯವರ ಕಾರಣಕ್ಕೆ ದಯವಿಟ್ಟು ಪಕ್ಷವನ್ನು ಬಿಡಬೇಡಿ ಎಂದು ಮನವಿ ಮಾಡಿದರು. ಆದರೆ, ನಿನ್ನ ಗಂಡ ಬಹಳ ಕೆಟ್ಟವನಿದ್ದಾನೆ. ನಾನು ಪಕ್ಷ ಬಿಡುತ್ತೇನೆ ಎಂದು ಹೇಳಿದೆ. ಗ್ರಾಮೀಣ ಶಾಸಕಿ ಸಂಬಂಧ ಇಡೀ ರಾಜ್ಯ ಹಾಳಾಗಿದೆ. ವಿಷಕನ್ಯೆಗಾಗಿ ಡಿ.ಕೆ. ಶಿವಕುಮಾರ್ ಇಡೀ ರಾಜ್ಯಕ್ಕೆ ಮೋಸ ಮಾಡಿದ್ದಾರೆ ಎಂದರು.
ಹೆಬ್ಬಾಳ್ಕರ್‌ಗೆ ಟಿಕೆಟ್ ಕೊಡಲ್ಲ ಎಂದು ಡಿಕೆಶಿ ಹೇಳಿದ್ರು. ನಾನೇ ಒತ್ತಾಯ ಮಾಡಿ ಟಿಕೆಟ್ ಕೊಡಿಸಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಿಂದ ರಾಜ್ಯ ಹಾಳಾಗಿದೆ. ಮುಂದೆಯೂ ಹಾಳು ಆಗುತ್ತದೆ. ಜಾತಿ ಸಂಘರ್ಷ ಆದ್ರೆ ಡಿಕೆಶಿ- ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ.
ಮೊದಲಿಗೆ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಡಿ,ಕೆ. ಶಿವಕುಮಾರ್ ಅವರನ್ನು ಬಂಧಿಸಬೇಕು. ಜತೆಗೆ ಸಿಡಿಯಲ್ಲಿದ್ದ ಯುವತಿ, ನರೇಶ್ ಮತ್ತು ಶ್ರವಣ್, ಪರಶಿವಮೂರ್ತಿ ಮತ್ತು ಆತನ ಡ್ರೈವರ್, ಮಂಡ್ಯದ ಇಬ್ಬರು ರಾಜಕಾರಣಿಗಳನ್ನು ಬಂಧಿಸಬೇಕು. ಈ ಬಗ್ಗೆ ಇನ್ನೂ 20 ಸಾಕ್ಷ್ಯಗಳಿದ್ದು, ಸಿಬಿಐಗೆ ವಹಿಸಿದ ನಂತರ ಮಾಹಿತಿ ನೀಡುತ್ತೇನೆ.
ಇದನ್ನೂ ಓದಿ : Ramesh Jarakiholi: ಡಿಕೆಶಿ ಆಪ್ತನ ಬಳಿ 110 ಸಿಡಿ ಸಿಕ್ಕಿವೆ; ಸಿಬಿಐ ತನಿಖೆಯಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂದ ಜಾರಕಿಹೊಳಿ
ರಮೇಶ್ ಜಾರಕಿಹೊಳಿಯನ್ನು ಮುಗಿಸಬೇಕು ಎನ್ನುವ ಸ್ಪಷ್ಟ ಮಾತುಗಳು ಅದರಲ್ಲಿವೆ. ಅದೆಲ್ಲವನ್ನೂ ಸಿಬಿಐಗೆ ಒದಗಿಸುತ್ತೇನೆ. ಸಿಡಿ ಹಗರಣದಲ್ಲಿ ರಾಜ್ಯದ ಐಎಎಸ್ ಅಧಿಕಾರಿಗಳು ವಿಲವಿಲನೇ ಒದ್ದಾಡುತ್ತಿದ್ದಾರೆ. 2002 ರಿಂದ ಸಿಡಿ ತಯಾರು ಮಾಡಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಡಿಕೆಶಿಯ ಬಂಧನವಾಗಬೇಕು. ಸಿಡಿ ಹಗರಣ ಸಿಬಿಐಗೆ ಕೊಡಬೇಕು. ಸಿಡಿ ಲೇಡಿ ಇದೀಗ, ಕಾಂಗ್ರೆಸ್ ಮಹಿಳಾ ಪದಾಧಿಕಾರಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರ ಬಂಧನವಾಗಬೇಕು. ನಾನು ಸಹಕಾರ ಸಚಿವ ಇದ್ದಾಗ ಶಾಂತಿನಿಕೇತನ ಸೊಸೈಟಿಯಿಂದ 10 ಸಾವಿರ ಕೋಟಿ ರೂ. ಹಗರಣ ಡಿಕೆಶಿಯಿಂದ ಆಗಿದೆ.
ವ್ಯಕ್ತಿಯೊಬ್ಬನ ಜೀವನವನ್ನು ಹಾಳುಮಾಡುವ ಕೆಟ್ಟ ರಾಜಕಾರಣವನ್ನು ಡಿ.ಕೆ. ಶಿವಕುಮಾರ್ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಶಿವಕುಮಾರ್ ಜೈಲಿಗೆ ಹೋಗುವುದು ಖಚಿತ. ಇಂಥ ಕೆಟ್ಟ ರಾಜಕಾರಣದಲ್ಲಿ ಇದೇ ಕೊನೆಯ ಚುನಾವಣೆ ಎದುರಿಸುತ್ತೇನೆ. ನನ್ನದೂ ಮುಂದಿನದು ಕೊನೆಯ ಚುನಾವಣೆ ಎಂದರು.
ಈ ಹಿಂದೆ ಆಕೆಯು ತಾನೇ ಕಿತ್ತೂರು ಚೆನ್ನಮ್ಮ ಎಂದು ಹೇಳಿಕೊಳ್ಳುತ್ತಿದ್ದಳು. ಆಕೆಯನ್ನು ಕುರಿತು ನಾನು ಕೆಟ್ಟ ಶಬ್ದ ಬಳಕೆ ಮಾಡಿದ್ದೆ. ಆ ಧ್ವನಿಯನ್ನು ಕತ್ತರಿಸಿ, ನಾನು ಕಿತ್ತೂರು ಚೆನ್ನಮ್ಮನಿಗೆ ಕೆಟ್ಟ ಶಬ್ದ ಬಳಕೆ ಮಾಡಿದೆ ಎಂದು ಸುಳ್ಳು ಹೇಳಿದರು. ಡಿ.ಕೆ. ಶಿವಕುಮಾರ್ ಆಗ ಹರಕಲು ಚಪ್ಪಳಿ ಹಾಕುತ್ತಿದ್ದ. ಈಗ ಸಾವಿರಾರು ಕೋಟಿ ರೂ. ಒಡೆಯ. ನಾನು ಆಗಲೂ ಇದೇ ಶರ್ಟ್ ಹಾಕುತ್ತಿದ್ದೆ, ರ‍್ಯಾಡೊ ವಾಚ್ ಕಟ್ಟುತ್ತಿದೆ. ನಾನು ಕಷ್ಟ ಪಟ್ಟು ಉದ್ಯಮ ಮಾಡಿ ಈ ಹಂತಕ್ಕೆ ಬಂದಿದ್ದೇನೆ ಎಂದರು.