ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ಮಾಡಿದ್ದ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಇದೀಗ 18 ಸೆಕೆಂಡ್‌ನ ಒಂದು ಆಡಿಯೊ ಬಿಡುಗಡೆ ಮಾಡಿದ್ದಾರೆ. ಇದು ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದು ಎನ್ನಲಾಗುತ್ತಿದೆ.
“ನನಗೆ ದುಬೈಯಲ್ಲಿ ಮನೆ ಇದೆ, ಲಂಡನ್‌ನಲ್ಲಿ ಮನೆ ಇದೆ, ಮುಂಬೈಯಲ್ಲಿ ಫ್ಲಾಟ್ ಇದೆ. ನನ್ನ ಮನೆ ಮೇಲೆ ರೈಡ್ ಆದಾಗ 45 ಕೋಟಿ ರೂ. ಸಿಕ್ಕಿತ್ತು” ಎಂದು ಈ ಆಡಿಯೋದಲ್ಲಿ ಹೇಳಲಾಗಿದೆ.
ಇದು ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದು ಎನ್ನಲಾಗಿದ್ದು, ಮೇಲ್ನೋಟಕ್ಕೆ ಕೇಳಲು ಅವರದ್ದೇ ಧ್ವನಿಯಂತೆ ಇದೆ. ಆದರೆ ಈ ಆಡಿಯೊದ ಸತ್ಯಾಸತ್ಯತೆಯನ್ನು ಯಾರೂ ಖಚಿತಪಡಿಸಲಾಗುತ್ತಿಲ್ಲ.
ಈ ಆಡಿಯೋ ಕೇವಲ ಒಂದು ಟ್ರೈಲರ್ ಎನ್ನಲಾಗುತ್ತಿದ್ದು, ಇನ್ನೂ 20 ಸಿಡಿಗಳಿವೆ ಎಂದು ರಮೇಶ್ ಜಾರಕಿಹೊಳಿ ಹೇಳಿರುವುದು ಕುತೂಹಲ ಮೂಡಿಸಿದೆ. ತಮ್ಮ ಹೆಸರನ್ನೇ ಹೇಳಿ, ರಾಜಕೀಯವಾಗಿ ನಿರ್ನಾಮ ಮಾಡಲು ಡಿ.ಕೆ. ಶಿವಕುಮಾರ್ ಹೇಳಿರುವ ಆಡಿಯೊ ಸಹ ಇದೆ ಎಂದು ಜಾರಕಿಹೊಳಿ ಹೇಳಿದ್ದರು. ಆದರೆ ಆ ಆಡಿಯೊವನ್ನು ಜಾರಕಿಹೊಳಿ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ : ಗೋಕಾಕ್ ಕ್ಷೇತ್ರದಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳಿದ್ದಾರೆ: ರಮೇಶ್ ಜಾರಕಿಹೊಳಿ ಸೋಲಿಸುತ್ತೇವೆ ಎಂದ ಚನ್ನರಾಜ್
ಈ ಬಗ್ಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ವಿಸಿಆರ್, ವಿಸಿಪಿ ಇದ್ದಾಗ ಸಮಯದಲ್ಲಿ 100 ರೂ. ಟಿಕೆಟ್ ನೀಡಿ ಬ್ಲೂ ಫಿಲಂ ತೋರಿಸುತ್ತಿದ್ದ. 78-80ರಲ್ಲಿ ಕನಕಪುರದಲ್ಲಿ ಇದೇ ಉದ್ಯೋಗ ಮಾಡುತ್ತಿದ್ದ, ಇದು ಪೇಪರ್‌ನಲ್ಲಿ ಸುದ್ದಿಯಾಗಿ ಬಂದಿದೆ ಎಂದು ಆರೋಪ ಮಾಡಿದ್ದಾರೆ.