ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ (Road Accident) ರೈತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಟ್ರಾಕ್ಟರ್‌ನಲ್ಲಿ ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದಾಗ, ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರಾಕ್ಟರ್ ಸಂಪೂರ್ಣ ಪುಡಿ ಪುಡಿಯಾಗಿದ್ದು, ಚಕ್ರಗಳೆಲ್ಲ ದೂರಕ್ಕೆ ಹಾರಿದೆ. ಬೆಳಗಾವಿ ತಾಲೂಕಿನ ಸುವರ್ಣಸೌಧದ ಬಳಿ ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.
ಬಸ್ತವಾಡ ಗ್ರಾಮದ ಮಲ್ಲಪ್ಪ ದೊಡ್ಡಕಲ್ಲನ್ನವರ (41) ಮೃತ ದುರ್ದೈವಿ. ಬೆಳಗಾವಿ ಮಾರ್ಕೆಟ್‌ಗೆ ಕೊತ್ತಂಬರಿ ಸೊಪ್ಪು ಸಾಗಿಸಲು ಟ್ರಾಕ್ಟರ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಗುದ್ದಿದೆ. ಗುದ್ದಿದ ರಭಸಕ್ಕೆ ಟ್ರಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗೂಡ್ಸ್ ಲಾರಿ ಮುಂಭಾಗವು ಜಖಂಗೊಂಡಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದಲ್ಲಿ ಕಣಿವೆಗೆ ಬಸ್ ಉರುಳಿ ನಾಲ್ವರ ಸಾವು, 10 ಮಂದಿಗೆ ಗಾಯ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ (Holalkere) ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೊಳಲ್ಕೆರೆ ಪಟ್ಟಣದ ಬಳಿಯ ಕಣಿವೆಗೆ ಸೀಬರ್ಡ್ ಎಂಬ ಖಾಸಗಿ ಬಸ್ ಪಲ್ಟಿಯಾಗಿ (Road Accident) ನಾಲ್ವರು ಮೃತಪಟ್ಟಿದ್ದಾರೆ. ಭಾನುವಾರ (ಏಪ್ರಿಲ್ 7) ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವೇಗವಾಗಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಕಣಿವೆಗೆ ಪಲ್ಟಿಯಾಗಿದೆ. ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುಗಳಿಗೆ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸುರೇಶ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಸ್ ಬೆಂಗಳೂರಿನಿಂದ ಗೋಕರ್ಣದ ಕಡೆಗೆ ಹೊರಟಿತ್ತು. ಬಸ್‌ನಲ್ಲಿ ಸುಮಾರು 38 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಿದ್ದೆಯ ಮಂಪರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಹೊಳಲ್ಕೆರೆ ಮಾತ್ರವಲ್ಲ ಚಿತ್ರದುರ್ಗ, ಶಿವಮೊಗ್ಗದ ಆಸ್ಪತ್ರೆಗಳಿಗೂ ರವಾನಿಸಲಾಗಿದೆ.
ಬೆಂಗಳೂರಿನಲ್ಲಿ ಗೋಡೌನ್‌ಗೆ ಬೆಂಕಿ
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಟಯರ್ ಗೋದಾಮಿನಲ್ಲಿ ಭಾನುವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ಚಾಮರಾಜಪೇಟೆಯ ಗವಿಪುರ ಬಳಿಯ ಟಿ.ಆರ್.ಮಿಲ್ ಕಾಂಪೌಂಡ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಸುಮಾರು ಮೂರು ಗೋಡೌನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಚೆರ‍್ರಿ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ಎಂಬ ಗೋದಾಮಿನಲ್ಲಿ ಬೆಂಕಿ ತಲುಗಿದೆ. ಅದೃಷ್ಟವಶಾತ್ ಗೋದಾಮಿನಲ್ಲಿ ಯಾರೂ ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ. ಅಗ್ನಿ ದುರಂತ ಸಂಭವಿಸುತ್ತಲೇ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಸ್ಥಳೀಯರು ಕೂಡ ಬೆಂಕಿ ನಂದಿಸಲು ನೆರವು ನೀಡುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ