ಬೆಳಗಾವಿ: ಕಾರೊಂದು ಹರಿದ ಪರಿಣಾಮ (Road Accident) ಬಾಲಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವಿನಯ್ ಲಕ್ಷ್ಮಣ ಕೆಂಚನ್ನವರ್(8) ಮೃತ ದುರ್ದೈವಿ.
ಅಂದಹಾಗೇ ವಿನಯ್ ನಾಗನೂರು ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವಿನಯ್ ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ. ಇತ್ತ ಅಪಘಾತವಾಗುತ್ತಿದ್ದಂತೆ ಕಾರು ಚಾಲಕನೇ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿದ್ದಾಗಿ ಖಚಿತ ಪಡಿಸಿದ್ದಾರೆ. ಬಳಿಕ ಆಸ್ಪತ್ರೆಯಿಂದ ಚಾಲಕ ನೇರ ಠಾಣೆಗೆ ಹಾಜರಾಗಿದ್ದಾನೆ. ಸದ್ಯ ಬಾಲಕನ ಮೃತದೇಹವು ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿಜಯನಗರದಲ್ಲಿ ಲಾರಿ ಪಲ್ಟಿ
ಮೊಟ್ಟೆ ಹೊತ್ತು ಹೊರಟಿದ್ದ ಲಾರಿಯೊಂದು ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 50ರ ಶಿವಪುರ ಗ್ರಾಮದ ಬಳಿ ಘಟನೆ ನಡೆದಿದೆ. ವಿಜಯನಗರದ ಕೂಡ್ಲಿಗಿ ತಾಲೂಕಿನ ಹಾರುವನಹಳ್ಳಿ ಗ್ರಾಮದ ಬಳಿಯ ಕೋಳಿ ಫಾರಂನಿಂದ ಲೋಡ್ ಆಗಿ ಲಾರಿ ಹೊರಟಿತ್ತು. ನಿದ್ರೆ ಮಂಪರಿನಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಮೊಟ್ಟೆಗಳು ಒಡೆದು ಹೋಗಿತ್ತು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hunters Arrest : ಶಿವಮೊಗ್ಗದಲ್ಲಿ ಕಾಡುಕೋಣಗಳು ಬಲಿ; ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಬೇಟೆಗಾರರು ಸೆರೆ
ಹಿಟ್ ಆ್ಯಂಡ್ ರನ್ ಕೇಸ್‌ಗೆ ಬೈಕ್ ಸವಾರ ಸಾವು
ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರಕನ್ನಡದ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಬಳಿ ಘಟನೆ ನಡೆದಿದೆ. ರಾಮಚಂದ್ರ ನಾಗೇಶ್ ಮೊಗೇರ (42) ಮೃತ ದುರ್ದೈವಿ.
ರಾಮಚಂದ್ರ ಭಟ್ಕಳ ತಾಲೂಕಿನ ಅಳ್ವೆಕೋಡಿ ನಿವಾಸಿಯಾಗಿದ್ದು, ಕೈಕಿಣಿಯಿಂದ ಅಳ್ವೆಕೋಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಾಘತದ ಬಳಿಕ ವೆಂಕಟಾಪುರ ಬಳಿ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ.
ಗಂಭೀರ ಗಾಯಗೊಂಡಿದ್ದ ರಾಮಚಂದ್ರರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.
ನಿಂತಿದ್ದ ಟ್ಯಾಂಕರ್ ಟ್ಯಾಲಿಗೆ ಬೈಕ್ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ
ನಿಂತಿದ್ದ ಟ್ಯಾಂಕರ್ ಟ್ಯಾಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟರೆ, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ಅಪಘಾತ ನಡೆದಿದೆ. ಯಮನಪ್ಪ (40) ಮೃತ ದುರ್ದೈವಿ.
ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ಯಮನಪ್ಪ ಲಿಂಗಸೂಗೂರು ಕಡೆಯಿಂದ ಮಸ್ಕಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ನಿಂತಿದ್ದ ಟ್ಯಾಂಕರ್ ಟ್ಯಾಲಿ ಕಾಣದೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಯಮನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಗೆ ಇದ್ದ ಗಂಗಣ್ಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಸ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಜ್ಜು-ಗುಜ್ಜಾಗಿದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ