ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಬುಧವಾರ (ಡಿ. 6) ಮುಸ್ಲಿಂ ಸಮುದಾಯಕ್ಕೆ (Muslim community) 10 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನೀಡಿದ ಹೇಳಿಕೆಯು ಪ್ರತಿಧ್ವನಿಸಿದೆ. ಪ್ರತಿಪಕ್ಷ ಬಿಜೆಪಿ (BJP Karnataka) ಈ ಕುರಿತು ಸಮರ್ಪಕ ಉತ್ತರ ಕೊಡುವಂತೆ ಪಟ್ಟುಹಿಡಿದು ಗದ್ದಲ ಮಾಡಿದೆ. ಅಲ್ಲದೆ, ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದೆ. ಅಲ್ಲದೆ, ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ರೂಪಾಯಿ ಕೊಡುತ್ತೀರಿ. ಅದೇ ಬರಗಾಲಕ್ಕೆ ತುತ್ತಾಗಿರುವ ನಮ್ಮ ರೈತರಿಗೆ ಕೇವಲ 2 ಸಾವಿರ ರೂಪಾಯಿ ಪರಿಹಾರವೇ? ಎಂದು ಪ್ರಶ್ನೆ ಮಾಡಿದೆ.
ಕಲಾಪದ ವೇಳೆ ಶಾಸಕ ಸುನಿಲ್ ಕುಮಾರ್, ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಮುಸಲ್ಮಾನರ ಸಮಾವೇಶದಲ್ಲಿ ಹತ್ತು ಸಾವಿರ ಕೋಟಿ ರೂ. ಅನುದಾನ ಕೊಡ್ತೀವಿ ಅಂತ ಹೇಳಿದ್ದಾರೆ. ಸದನ ನಡೆಯುವಾಗ ನಮಗೆ ಸದಸ್ಯರಾಗಿ ಈ ಬಗ್ಗೆ ಕೇಳುವ ಹಕ್ಕಿದೆ. ಯಾವ ಅನುದಾನವನ್ನು ಅವರಿಗೆ ಕೊಡುತ್ತಿದ್ದೀರಿ? ಎಲ್ಲಿಂದ ಈ ಅನುದಾನದ ಹೊಂದಾಣಿಕೆ ಮಾಡಲಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Health Card: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ಗೆ ಹೊಸ ರೂಪ; ಸಿಎಂ ಚಾಲನೆ
ಉತ್ತರ ಕೊಡೋಕೆ ಪ್ರಿಯಾಂಕ್ ಖರ್ಗೆ ಯಾರು?
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ಕೊಡಲು ಎದ್ದು ನಿಂತರು. ಈ ವೇಳೆ ಆಡಳಿತ, ವಿಪಕ್ಷ ಶಾಸಕರ ನಡುವೆ ವಾಗ್ದಾಳಿ ನಡೆದಿದೆ. ಆಗ ನೀವ್ಯಾರು ಉತ್ತರ ಕೊಡೋಕೆ ಎಂದು ಬಿಜೆಪಿ ಶಾಸಕರು ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಆ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಯು.ಟಿ. ಖಾದರ್, ನೀವು ಕುಳಿತುಕೊಳ್ಳಿ ಸಿಎಂ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಆದರೆ, ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸುನೀಲ್ ಕುಮಾರ್ ನಡುವೆ ವಾಗ್ವಾದ ನಡೆದಿದೆ.
ಅನುದಾನ ಕೋಡೋಕೆ ಇದು ನಿಮ್ಮ ಮನೆ ಆಸ್ತಿ ಅಲ್ಲ
ಪ್ರಿಯಾಂಕ್ ಖರ್ಗೆ ಮಾತನಾಡಿ, ನಾನು ಏಕೆ ಉತ್ತರ ಕೊಡಬಾರದು? ಎಂದು ಪ್ರಶ್ನೆ ಮಾಡಿದರು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಿಯಾಂಕ್ ಖರ್ಗೆ ಅವರನ್ನು ಸಮಾಧಾನಪಡಿಸಿ ಕೂರಿಸಿದರು. ಆದರೆ, ಪುನಃ ಪ್ರಿಯಾಂಕ್ ಎದ್ದು ನಿಂತು ಆಕ್ರೋಶ ಹೊರಹಾಕುತ್ತಿದ್ದಂತೆ, ಗುಡುಗಿದ ಸುನಿಲ್ ಕುಮಾರ್, ಅನುದಾನ ಕೋಡೋಕೆ ಇದು ನಿಮ್ಮ ಮನೆ ಆಸ್ತಿ ಅಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಶಾಸಕ ಬಸನಗೌಡ ಯತ್ನಾಳ್ ಸಾಥ್ ನೀಡಿದರು. ಎಸ್ಸಿ, ಎಸ್ಟಿ ಅನುದಾನಗಳನ್ನೆಲ್ಲ ಡೈವರ್ಟ್ ಮಾಡಿದ್ದೀರಾ ಎಂದು ಇದೇ ವೇಳೆ ಶಾಸಕ ಹೊಳಲ್ಕೆರೆ ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದು ನಿಮ್ಮ ತಪ್ಪು ಕಲ್ಪನೆ ಎಂದ ಎಚ್.ಕೆ. ಪಾಟೀಲ್
ಈ ವೇಳೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಸುನೀಲ್ ಕುಮಾರ್ ಸಂಪೂರ್ಣ ಮಾಹಿತಿ ಕೊರತೆಯಿಂದ ಮಾತನಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತನಾಡಿದಾಗ ನಾನು ಸಭೆ ಹೋಗಿದ್ದೆ. ಮುಂದಿನ ಬಜೆಟ್ ಅನುದಾನದಲ್ಲಿ ಹೆಚ್ಚು ಮಾಡಲಾಗುವುದು. ಆಗ ಮುಸ್ಲಿಂ ಸಮುದಾಯದವರಿಗೆ 10 ಸಾವಿರ ಕೋಟಿ ರೂಪಾಯಿಯನ್ನು ಮುಟ್ಟಿಸುತ್ತೇವೆ ಅಂತ ಸಿಎಂ ಹೇಳಿದ್ದಾರೆ. 10 ಸಾವಿರ ಕೋಟಿ ಕೊಡುತ್ತೇನೆ ಅಂತ ಹೇಳಿದ್ರಾ.? ಅಥವಾ ಈ ವರ್ಷ ಅನುದಾನವನ್ನು ಹೆಚ್ಚು ಮಾಡುತ್ತೇವೆ ಅಂತ ಹೇಳಿದ್ರಾ? ನಿಮಗೆ ಮಾಹಿತಿ ಕೊರತೆ ಉಂಟಾಗಿದೆ. 10 ಸಾವಿರ ಕೋಟಿ ಕೊಟ್ಟರು ಅಂತ ತಪ್ಪು ಕಲ್ಪನೆ ಇದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್, ಪತ್ರಿಕೆಗಳಲ್ಲಿ ಬಂದಿದೆ ಎಂದು ತಿಳಿಸಿದರು. ಅಲ್ಲದೆ, ಎಚ್.ಕೆ ಪಾಟೀಲ್ ಹೇಳಿಕೆಗೆ ವಿರೋಧ ಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.
ನಿಮ್ಮದು ಕ್ರಿಯಾ ಲೋಪ ಎಂದ ಬಸವರಾಜ ರಾಯರೆಡ್ಡಿ
ಈ ವೇಳೆ ಕ್ರಿಯಾ ಲೋಪ ಎತ್ತಿದ ಬಸವರಾಜ ರಾಯರೆಡ್ಡಿ, ಸಿಎಂ ಸದನದ ಹೊರಗೆ ಹತ್ತು ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿರುವ ಬಗ್ಗೆ ಇಲ್ಲಿ ನಿಯಮ ಉಲ್ಲಂಘನೆ ಅಂತ ಚರ್ಚೆ ಮಾಡಕ್ಕಾಗಲ್ಲ. ಸಿಎಂ ಘೋಷಣೆ ಮಾಡಿರೋದರಲ್ಲಿ ತಪ್ಪೇನಿದೆ? ಈ ವಿಚಾರವನ್ನು ಅನಾವಶ್ಯಕ ಆಗಿ ಸದನದಲ್ಲಿ ಎತ್ತಲು ಆಗಲ್ಲ. ಬಿಜೆಪಿಯವರು ಈ ವಿಚಾರವನ್ನು ಚರ್ಚೆ ಮಾಡಲು ಬರಲ್ಲ, ಅದು ಸದನದ ನಿಯಮದಲ್ಲಿ ಇಲ್ಲ. ನೀವು ಹೊರಗೆ ಮಾಧ್ಯಮಗಳಲ್ಲಿ ಮಾತನಾಡಿ, ಇಲ್ಲಿ ನಿಯಮಾವಕಾಶ ಇಲ್ಲ ಎಂದು ಹೇಳಿದರು.
ಬಸವರಾಜ ರಾಯರೆಡ್ಡಿ ಅವರಿಗೆ ಯೋಗ ಕಲಿಸಿ!
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಬಸವರಾಜ ರಾಯರೆಡ್ಡಿ ಅವರಿಗೆ ಯೋಗ ಏನಾದರೂ ಕಲಿಸಿ. ನಿನ್ನೆಯೂ ನಿಮ್ಮ ಪೇಪರ್ ಬಿಸಾಕಿ ಸೀದಾ ಎದ್ದು ಹೋದರು. ನಂತರ ಪ್ರಿಯಾಂಕ್ ಖರ್ಗೆ ಸಮಾಧಾನ ಮಾಡಿದ್ದರು. ಸುನೀಲ್ ಕುಮಾರ್ ಪ್ರಸ್ತಾಪ ಮಾಡಿದ್ದು ಸರಿ ಇದೆ. ನಾವು ಕೂಡ ಸಚಿವರು ಆಗಿದ್ದೆವು. ನಾನು ಕೂಡ ಸದನ ನಡೆಯುವ ಆಚೆ ಕಡೆ ಎಲ್ಲೂ ಘೋಷಣೆ ಮಾಡಿಲ್ಲ. ನಾವು ಮಾಡಲು ಹೋದರೂ ಅಧಿಕಾರಿಗಳು ಬೇಡ ಎಂದು ಹೇಳುತ್ತಿದ್ದರು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ 14 ಬಾರಿ ಬಜೆಟ್ ಮಂಡಿಸಿದವರು ಈ ಬಾರಿ ಮಂಡಿಸಲ್ಲ ಅನ್ನುವ ಡೌಟ್ ನನಗೂ ಇತ್ತು. ಅಲ್ಲದೆ, ರಾತ್ರಿ ಒಂದು ಸುದ್ದಿ ಚಾನೆಲ್ನಲ್ಲಿ ಮುಸ್ಲಿಮರಿಗೆ ಅನುದಾನ ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿರುವುದನ್ನು ನೋಡಿದ್ದೇನೆ. ಅದರಲ್ಲಿ ಸಿಎಂ ಏನ್ ಹೇಳಿದ್ದಾರೆ ಅಂದರೆ, “ಈಗ 2-3 ಸಾವಿರ ಕೋಟಿ ಕೊಡುತ್ತಿದ್ದೇನೆ. ಈಗಲೇ 10 ಸಾವಿರ ಕೋಟಿ ಕೊಡುತ್ತೇನೆ” ಅಂತ ಹೇಳಿದ್ದಾರೆ. ಅಂದರೆ, ಈ ಬಜೆಟ್ನಲ್ಲಿ ಕೊಡುತ್ತೇನೆ ಅಂದಿದ್ದಾರೆ. ಅಧಿವೇಶನ ನಡೆಯುವಾಗ ಇಂತಹ ಹೇಳಿಕೆ ಕೊಟ್ಟೆ ಏನು ಅರ್ಥ? ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದರು.
ಸದನದಲ್ಲಿ ತೋಳಿನ ಪ್ರದರ್ಶನ
ಸದನದಲ್ಲಿ ತೋಳಿನ ಪ್ರದರ್ಶನದ ಫೈಟ್ ನಡೆದ ಪ್ರಸಂಗ ಕಂಡುಬಂತು. ಮುಸ್ಲಿಂ ಸಮುದಾಯಕ್ಕೆ ಸಿಎಂ ಅನುದಾನ ಘೋಷಣೆ ಕುರಿತು ಚರ್ಚೆ ಮಾಡಲಾಗಿದೆ. ಈ ವೇಳೆ ವಿಪಕ್ಷ ನಾಯಕ ಅಶೋಕ್ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಅಡ್ಡಪಡಿಸಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಆರ್. ಅಶೋಕ್, ನಿಮ್ಮ ಸಿಎಂ ಮಾತನಾಡುವಾಗಲೂ ನಾವು ಅಡ್ಡಿ ಪಡಿಸುವ ತಾಕತ್ತು ಇದೆ ಎಂದು ಕಿಡಿಕಾರಿದರು. ಅಶೋಕ್ ಅವರ ಈ ಮಾತಿನಿಂದ ಆಡಳಿತ ಪಕ್ಷದ ಸದಸ್ಯರು ಕೆರಳಿ ಕೆಂಡವಾಗಿದ್ದಾರೆ. ಆಡಳಿತ ಪಕ್ಷ ಸದಸ್ಯರು, ತೋಳು ತಟ್ಟಿ ತಾಕತ್ತು ತೋರಿಸ್ತೀವಿ ಬನ್ನಿ ಎಂದು ಹೇಳಿದ್ದಾರೆ. ನರೇಂದ್ರ ಸ್ವಾಮಿ ಬೆಂಬಲಕ್ಕೆ ಸಚಿವ ಪ್ರಿಯಾಂಕಾ ಖರ್ಗೆ ಈ ವೇಳೆ ನಿಂತರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ತೋಳಿನ ಪ್ರದರ್ಶನದ ಫೈಟ್ ಜೋರಾಯಿತು.
ಇಲ್ಲಿ ವಿರೋಧ; ಹೊರಗೆ ಒಟ್ಟಿಗೆ ಚಾ ಕುಡೀತೀರಿ ಎಂದ ಸ್ಪೀಕರ್!
ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಯು.ಟಿ. ಖಾದರ್ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಉತ್ತರ ಕೊಡುತ್ತಾರೆ. ಈಗ ಸದನ ನಡೆಯಲು ಅವಕಾಶ ಕೊಡಿ. ಪ್ರತಿಪಕ್ಷದವರು ವಿರೋಧ ಮಾಡುವುದಕ್ಕೇ ಇರೋದು. ಅವರ ಆಕ್ಷೇಪಕ್ಕೆ ಉತ್ತರ ಕೊಡಿ ಎಂದು ಆಡಳಿತ ಪಕ್ಷದವರಿಗೆ ಹೇಳಿದರು. ಅಲ್ಲದೆ, ಇಲ್ಲಿ ವಿರೋಧ ಮಾಡುತ್ತೀರಿ, ಹೊರಗೆ ಹೋಗಿ ಒಟ್ಟಿಗೆ ಚಹಾ ಕುಡಿಯುತ್ತೀರಿ ಎಂದು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರನ್ನು ಕುಟುಕಿದರು.
ಇದನ್ನೂ ಓದಿ: CM Siddaramaiah: ಸಿಎಂ ಪಕ್ಕ ಐಸಿಸ್ ಸಂಪರ್ಕಿತ ತನ್ವೀರ್; NIA ತನಿಖೆಗೆ ವಹಿಸಲು ಶಾಗೆ ಯತ್ನಾಳ್ ಪತ್ರ!
ರೈತರ ಶಾಪ ತಟ್ಟಿದರೆ ಈ ಸರ್ಕಾರ ಒಂದು ನಿಮಿಷವೂ ಉಳಿಯಲ್ಲ
ಆಗ ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಘೋಷಣೆ ಸರಿಯಿಲ್ಲ, ಸ್ಪಷ್ಟವಾಗಿ ಹತ್ತು ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿ ಘೋಷಣೆ ಮಾಡಿ, ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಹೊರಗೆ ಘೋಷಣೆ ಮಾಡೋದು ರಾಜಕೀಯ ಆಗುತ್ತದೆ. ಬರ ಹೆಚ್ಚಾಗಿದೆ ಹೀಗಾಗಿ ರೈತರಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಿ ಅಂದ್ರೆ ಕೊಡಲ್ಲ. ಅಲ್ಲಿ ಹೋಗಿ ಹತ್ತು ಸಾವಿರ ಕೋಟಿ ರೂಪಾಯಿ ಕೊಡ್ತೀವಿ ಅಂತಾರೆ. ರೈತರಿಗೆ ಎರಡು ಮೂರು ಸಾವಿರ ಕೋಟಿ ರೂ.ವನ್ನು ತಕ್ಷಣ ಬಿಡುಗಡೆ ಮಾಡಿ ಅಂತ ನಿನ್ನೆಯೇ (ಮಂಗಳವಾರ – ಡಿ.5) ಆಗ್ರಹಿಸಿದ್ದೆ. ಹೀಗಾದರೆ ರೈತರ ಗತಿ ಏನು? ರೈತರನ್ನು ಮರೆಯಬೇಡಿ, ರೈತರ ಶಾಪ ತಟ್ಟಿದರೆ ಈ ಸರ್ಕಾರ ಒಂದು ನಿಮಿಷವೂ ಉಳಿಯಲ್ಲ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಅಶೋಕ್, ಹಾಗಾದರೆ, ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.