Site icon Vistara News

Satish Jarakiholi : ಡಿಕೆಶಿ ಜತೆ ಹೊಂದಾಣಿಕೆ ಮಾತೇ ಇಲ್ಲ; ಸತೀಶ್‌ ಜಾರಕಿಹೊಳಿ ಸ್ಪಷ್ಟೋಕ್ತಿ

DK Shivakumar Satish Jarakiholi

ಬೆಂಗಳೂರು: ಬೆಳಗಾವಿ ರಾಜಕಾರಣದಲ್ಲಿ (Belagavi politics) ಹೊರಗಿನವರ ಹಸ್ತಕ್ಷೇಪದ ವಿಚಾರದಲ್ಲಿ ಬುಸುಗುಡುತ್ತಿರುವ ಸಚಿವ ಸತೀಶ್‌ ಜಾರಕಿಹೊಳಿ (Satish Jarakiholi) ಅವರು ಇದೀಗ ಮತ್ತೊಮ್ಮೆ ತಮ್ಮ ಆಕ್ಷೇಪವನ್ನು ಹೊರಹಾಕಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ನಡುವೆ ಮುನಿಸು ಮಡುಗಟ್ಟಿದೆ ಎಂಬ ಮಾತುಗಳು ಉತ್ತುಂಗದಲ್ಲಿರುವಾಗಲೇ ಡಿ.ಕೆ. ಶಿವಕುಮಾರ್‌ ಅವರು ಇತ್ತೀಚೆಗೆ ಸತೀಶ್‌ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದು ಅವರಿಬ್ಬರ ನಡುವೆ ಹೊಂದಾಣಿಕೆ ಆಗಿದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಿತ್ತು. ಆದರೆ, ಇದು ಹೊಂದಾಣಿಕೆಯಲ್ಲ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ʻʻಡಿ.ಕೆ ಶಿವಕುಮಾರ್ ಅವರು ನಮ್ಮ ಮನೆಗೆ ಸುಮಾರು ಬಾರಿ ಬಂದಿದ್ದಾರೆ. ಈ ವೇಳೆ ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಆಗಿದೆʼʼ ಎಂದು ಹೇಳಿದ ಅವರು, ನಾವು ಮೈಸೂರಿಗೆ ಭೇಟಿ ನೀಡುವ ವಿಚಾರವೇ ಬೇರೆ, ಅವರನ್ನು ಭೇಟಿಯಾದ ಉದ್ದೇಶವೇ ಬೇರೆ ಎಂದರು. ಈ ಎಲ್ಲ ವಿಚಾರಗಳು ಚುನಾವಣೆ ಆದ ಬಳಿಕ ಚರ್ಚೆಗೆ ಬರಬಹುದು. ಚುನಾವಣೆ ಬಳಿಕ ಯಾವ ಹೊಸ ವಿಚಾರ ಬರುತ್ತದೆ ಎಂದು ಕಾದು ನೋಡೋಣ ಎಂದು ಹೇಳಿದರು. ಆದರೆ, ಅಡ್ಜಸ್ಟ್‌ಮೆಂಟ್‌ ಎನ್ನುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ನಿಂಬಾಳ್ಕರ್‌ಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಲು ಬೆಂಬಲ

ಅಂಜಲಿ ನಿಂಬಾಳ್ಕರ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಿಸುವ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಅಂಜಲಿ ನಿಂಬಾಳ್ಕರ್ ಕ್ಲೈಮ್ ಮಾಡಿದ್ದಾರೆ. ಅವರಿಗೆ ಕೊಟ್ಟರೆ ಬಹಳ ಒಳ್ಳೆಯದಾಗುತ್ತದೆ. ನಮ್ಮ ಭಾಗದಲ್ಲಿ‌ ಮಹಿಳೆಗೆ ಕೊಡುವುದರಿಂದ ಅನುಕೂಲವಿದೆ. ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂದು ನಾನು ಕೂಡಾ ಮನವಿ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸತೀಶ್ ಜಾರಕಿಹೊಳಿ‌ ಹೇಳಿದರು.

ಸತೀಶ್‌ ಜಾರಕಿಹೊಳಿ ಡಿಸಿಎಂ ಆಗ್ತಾರಾ?

ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ, ಡಿಸಿಎಂ ಆಗ್ತಾರೆ ಎಂಬ ಸುದ್ದಿಗಳ ಬಗ್ಗೆ ಕೇಳಿದಾಗ, ಸದ್ಯಕ್ಕೆ ಯಾವ ಚರ್ಚೆಯೂ ಇಲ್ಲ. ಎಲ್ಲರೂ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಅದೇನೆ ಇದ್ರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಅಂತಹ ಚರ್ಚೆ ಈಗ ಸದ್ಯಕ್ಕೆ ನಡೆಯುತ್ತಿಲ್ಲ. ಚುನಾವಣೆ ಮುಗಿದ ಮೇಲೆ ಏನಾಗುತ್ತದೆ, ಮುಗಿದ ಮೇಲೆ ಏನು ಮಾಡ್ತಾರೆ ಕಾದುನೋಡಬೇಕಿದೆ ಎಂದು ಹೇಳಿದರು.

ಸಿಎಂ ಪೋಸ್ಟ್‌ ಸಮುದಾಯದ ಬೇಡಿಕೆ, ನನ್ನದಲ್ಲ

ಸಿಎಂ ಬದಲಾವಣೆ ಆದರೆ ವಾಲ್ಮೀಕಿ ಸಮುದಾಯದವರಿಗೆ ಕೊಡಬೇಕು ಎಂಬ ಬೇಡಿಕೆಯ ಬಗ್ಗೆ ಕೇಳಿದಾಗ, ಅಂಥ ಬೇಡಿಕೆ ಇಲ್ಲ ಎಂದು ನಾನು ಸ್ಪಷ್ಟಪಡಿಸಿದ್ದೇನೆ. ಸಮುದಾಯದಿಂದ ಕ್ಲೈಂ ಮಾಡ್ತಾರೆ ಅನ್ನೋದು ನಿಜ. ಆದರೆ, ಪಕ್ಷದ ತೀರ್ಮಾನ ಬೇರೆ ಎಂದು ಹೇಳಿದರು. ಇದೆಲ್ಲವೂ ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು, ನಮ್ಮ ಹಂತದಲ್ಲಿ ಏನೂ ಇಲ್ಲ. ನಾವು ಯಾವುದನ್ನೂ ಕ್ಲೈಮ್ ಮಾಡಿಲ್ಲ. ಮತ್ತು ಡಿಮ್ಯಾಂಡ್ ಮಾಡಿಲ್ಲ ಎಂದರು ಸತೀಶ್‌ ಜಾರಕಿಹೊಳಿ.

ವಿಜಯೇಂದ್ರಗೆ ಯಡಿಯೂರಪ್ಪ ರೀತಿ ಆಕರ್ಷಣೆ ಇಲ್ಲ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ ಅವರು, ಅವರ ಪಕ್ಷಕ್ಕೆ ಅನುಕೂಲ ಆಗಲಿ ಅಂತಾ ಮಾಡಿದ್ದಾರೆ. ಯಡಿಯೂರಪ್ಪ ಮಾತ್ರ ಅವರಲ್ಲಿ ಪ್ರಬಲ ನಾಯಕ. ಅವರನ್ನು ಬಿಟ್ಟು ಯಾರನ್ನೇ ಮಾಡಿದ್ರೂ ಅವರಿಗಿದ್ದ ಆಕರ್ಷಣೆ ಯಾರಿಗೂ ಬರಲ್ಲ. ನಮ್ಮಲ್ಲಿ ಸಿದ್ದರಾಮಯ್ಯನವರು ಆ ರೀತಿ ಆಕರ್ಷಣೆ ಹೊಂದಿದ್ದಾರೆ. ಒಂದೊಂದು ಪಕ್ಷದಲ್ಲಿ ಒಬ್ಬೊಬ್ಬರು ಆಕರ್ಷಣೆ ಇರ್ತಾರೆ. ಆದರೆ, ಯಡಿಯೂರಪ್ಪ ರೀತಿ ವಿಜಯೇಂದ್ರ ಅವರಿಗೆ ಆಕರ್ಷಣೆ ಇಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರ ಮಗ ಅಂದ ಕೂಡಲೇ ಎಲ್ಲಾ ಅವರೊಂದಿಗೆ ಬರುವುದಿಲ್ಲ. ವಿಜಯೇಂದ್ರ ಅವರು ಯಡಿಯೂರಪ್ಪ ರೀತಿ ಬೆಳೆಸಿಕೊಳ್ಳಬೇಕು. ವಿಜಯೇಂದ್ರ ಬಹಳಷ್ಟು ಕಲಿಯಬೇಕಿದೆ, ಇನ್ನೂ ಗುರುತಿಸಿಕೊಳ್ಳಬೇಕಿದೆ ಎಂದು ಹೇಳಿದ ಜಾರಕಿಹೊಳಿ, ಪಕ್ಷ ಇನ್ನೂ ಅವರಿಗೆ ಸಹಕಾರ ಮಾಡಬೇಕಿದೆ ಎಂದರು.

ಪಕ್ಷ ಅಂದ ಮೇಲೆ ಗುಂಪುಗಳು ಇದ್ದೇ ಇರುತ್ತವೆ

ಬಿಜೆಪಿಯಲ್ಲಿ ಅಸಮಾಧಾನ ಏಳುವ ಸಾಧ್ಯತೆ ಬಗ್ಗೆ ಕೇಳಿದಾಗ, ʻʻಪಕ್ಷ ಅಂದ ಮೇಲೆ ಮೂರು ಗುಂಪುಗಳು ಇದ್ದೇ ಇರ್ತವೆ. ಒಂದನ್ನು ಸಮಾಧಾನ ಮಾಡಿದರೆ ಎರಡು ದೂರ ಹೋಗುತ್ತವೆ. ಅದನ್ನ ಬ್ಯಾಲೆನ್ಸ್ ಮಾಡುವ ಶಕ್ತಿ ಅವರಿಗೆ ಇರಬೇಕು. ಲಿಂಗಾಯತ ಸಮುದಾಯದ ವೋಟ್ ಬ್ಯಾಂಕ್ ನೋಡಿಕೊಂಡು ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ ಮಾಡಿರಬಹುದುʼʼ ಎಂದರು.

ʻʻಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲಲು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದದ್ದು ಒಂದು ಕಾರಣʼʼ ಎಂದು ವಿಶ್ಲೇಷಿಸಿದರು.

ʻʻಬಿಜೆಪಿಯಲ್ಲೂ ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೊಡುವ ಪರಿಪಾಠ ಶುರುವಾಗಿದೆ. ನಮ್ಮಲ್ಲಿ ಇದು ಮುಂಚೆಯಿಂದನೂ ಇದೆ. ಈಗ ಬಿಜೆಪಿಯಲ್ಲಿ ಶುರುವಾಗಿದೆ. ನಮ್ಮನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದ್ರೆ ಹತ್ತು ವರ್ಷದಿಂದ ಅವರಿಂದ ಜಾರಿ ಬಂದಿದೆʼʼ ಎಂದು ರಮೇಶ್‌ ಜಾರಕಿಹೊಳಿ ಹೇಳಿದರು.

ಐದರಲ್ಲಿ ಎರಡು ರಾಜ್ಯದಲ್ಲಿ ಗೆಲುವು ಖಚಿತ

ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಗೆಲ್ಲುವುದು ಖಚಿತ. ರಾಜಸ್ಥಾನದಲ್ಲಿ ನಮಗೆ ಅವಕಾಶ ಇದೆ. ತೆಲಂಗಾಣದಲ್ಲಿ ಕೆಸಿಆರ್‌ ಪಾರ್ಟಿ ಮತ್ತು ಕಾಂಗ್ರೆಸ್‌ ನಡುವೆ ಫೈಟ್‌ ಇದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಕಳೆದ ಬಾರಿ ಮಧ್ಯಪ್ರದೇಶದಲ್ಲಿ‌ ಗೆದ್ದರೂ ಆಪರೇಷನ್ ಕಮಲದಿಂದಾಗಿ ಸೋಲಬೇಕಾಯಿತು. ಅಲ್ಲಿ ಈಗ ವಿರೋಧಿ ಅಲೆ ಮತ್ತೆ ಜಾಸ್ತಿ ಆಗಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಗೆಲ್ಲುತ್ತೇವೆ. ಎಲ್ಲಾ ಕಡೆ ಗೆದ್ದರೆ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತದೆ. ಈ ಚುನಾವಣೆ ಲೋಕಸಭಾ ಚುನಾವಣೆ ಮೇಲೆ‌ ಪರಿಣಾಮ ಬೀರುತ್ತದೆ ಎಂದು ಸತೀಶ್‌ ಜಾರಕಿಹೊಳಿ ವಿಶ್ಲೇಷಿಸಿದರು.

Exit mobile version