ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು (Shivaji Statue) ಮತ್ತೊಮ್ಮೆ ಭಾನುವಾರ ಲೋಕಾರ್ಪಣೆ ಮಾಡಲಾಯಿತು. ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇರಿಂದ ಅದ್ಧೂರಿಯಾಗಿ ಲೋಕಾರ್ಪಣೆ ನೆರವೇರಿತು.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಿ ಪುಷ್ಟನಮನ ಸಲ್ಲಿಕೆ ಮಾಡಲಾಯಿತು. ಡೋಲ್ ತಾಷಾ ಬಾರಿಸುವ ಮೂಲಕ ಸಂಭ್ರಮಪಡಲಾಯಿತು. ಮರಾಠಿ ಘೋಷಣೆಯೊಂದಿಗೆ ಡೋಲ್ ತಾಷಾ ಮೂಲಕ ಭವ್ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಲಾತೂರ್ ಗ್ರಾಮೀಣ ಕಾಂಗ್ರೆಸ್ ಶಾಸಕ ಧೀರಜ್ ದೇಶಮುಖ್, ಮಹಾರಾಷ್ಟ್ರದ ಎಂಎಲ್‌ಸಿ, ಮಾಜಿ ಗೃಹಸಚಿವ ಸತೇಜ್ ಪಾಟೀಲ್, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಸೇರಿ ಹಲವರು ಉಪಸ್ಥಿತರಿದ್ದರು.
ಯುವರಾಜ ಸಂಭಾಜಿರಾಜೇ ಛತ್ರಪತಿ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯದ ಸಾಮ್ರಾಟ್. ಶಿವಾಜಿ ಮಹಾರಾಜರು ಕೇವಲ ಮಹಾರಾಷ್ಟ್ರದ ಆಸ್ತಿಯಲ್ಲ. ಇಡೀ ಭಾರತ ದೇಶದ ಆಸ್ತಿ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರು ಒಂದು ಭಾಷೆ, ಜಾತಿ, ಪ್ರಾಂತ್ಯಕ್ಕೆ ಸೀಮಿತವಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ. ಶಿವಾಜಿ ಮಹಾರಾಜರ ವಂಶಸ್ಥನಾಗಿ ಲೋಕಾರ್ಪಣೆ ಮಾಡಿರುವೆ. ಹೆಬ್ಬಾಳಕರ ಅವರ ಪರಿಶ್ರಮಕ್ಕೆ ಅಭಿನಂದನೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಇದು ಪುರಾತತ್ವ ಇಲಾಖೆಗೆ ಸಂಬಂಧಿಸಿದ ಕೋಟೆ. ಪುರಾತತ್ವ ಇಲಾಖೆಯ ಜಮೀನು ಇರೋದ್ರಿಂದ ನಾಲ್ಕು ಬಾರಿ ನೋಟಿಸ್ ನೀಡಿದ್ದಾರೆ. ಎರಡು ಕೇಸ್ ದಾಖಲಿಸಿದ್ದಾರೆ, ಅದನ್ನ ಮುಂದಿನ ದಿನಗಳಲ್ಲಿ ನೋಡೋಣ ಎಂದರು.
ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಸಿಎಂ 5 ಕೋಟಿ ಅನುದಾನ ಘೋಷಣೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ನನ್ನ ಕಣ್ಣು ಹಳದಿ ಆಗಿಲ್ಲ, ನಾನು ಕಾಮಾಲೆ ಕಣ್ಣಿನಿಂದ ಏನೂ ನೋಡೋದಿಲ್ಲ. ಬಹಳ ಪಾಸಿಟಿವ್ ಆಗಿ ವಿಚಾರ ಮಾಡ್ತೀನಿ. ಮಾನ್ಯ ಮುಖ್ಯಮಂತ್ರಿಗಳು ಐದು ಕೋಟಿ ಘೋಷಣೆ ಮಾಡಿದ್ದಾರೆ. ಅದನ್ನು ನಾನು ಸ್ವಾಗತ ಮಾಡ್ತೀನಿ. ನಾನು ನನ್ನ ಭಾಷಣದಲ್ಲಿ ಏನೆಲ್ಲ ಹೇಳಬೇಕಾಗಿತ್ತು ಅದನ್ನೆಲ್ಲ ಹೇಳಿದೀನಿ.
ನಾನು ಯಾರಿಗೂ ಢೋಂಗಿ ಅನ್ನೋದಿಲ್ಲ ಯಾರಿಗೂ ಏನು ಅನ್ನೋದಿಲ್ಲ. ಆದ್ರೆ ಶಿವ ಭಕ್ತರಿಗೆ ಅವಮರ್ಯಾದೆ ಮಾಡಿದ್ದಾರೆ. ಅಪೂರ್ಣವಾದಂತಹ ಮೂರ್ತಿ ಉದ್ಘಾಟನೆ ಮಾಡಿ ಶಿವಾಜಿ ಮಹಾರಾಜರ ಭಕ್ತರಿಗೆ ಅವಮಾನ ಮಾಡಿದ್ದಾರೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಬಳಿ 50 ಸಾವಿರ ಸಾಲ ಮಾಡಿ ವಾಪಸ್ ನೀಡಿಲ್ಲ ಎಂಬ ಸಂಜಯ್ ಪಾಟೀಲ್ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಬಹಳಷ್ಟು ಸಂತೋಷ. ಅಭಿಮಾನದಿಂದ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಿದೀನಿ. ಅದಕ್ಕೆ ಇನ್ನೊಂದು ದಿನ ನಿಮ್ಮನ್ನ ಕರೆದು ಉತ್ತರ ಕೊಡ್ತೀನಿ. ತಮ್ಮನ್ನು ಸಂಜಯ್ ಪಾಟೀಲ್ ಕೈಕೇಯಿಗೆ ಹೋಲಿಸಿದ ವಿಚಾರಕ್ಕೆ ಪ್ರಕ್ರಿಯಿಸಿ, ಶಿವಭಕ್ತರು ಅಂತಾ ಹೇಳ್ತಾರೆ, ಮಹಿಳೆಯರಿಗೆ ಶಿವಾಜಿ ಮಹಾರಾಜರು ಮರ್ಯಾದೆ ಕೊಡ್ತಾರೆ. ಇವರು ಯಾರು ಅಂತಾ ಈಗಾಗಲೇ ಭಾಷಣದಲ್ಲಿ ಹೇಳಿದೀನಿ.
ಅವರಿಗೆ ಹೆಂಡತಿ ಇದ್ದಾಳೆ ಮಗಳಿದ್ದಾಳೆ. ನಾನು ಕೈಕೇಯಿ ಆದ್ರೆ ಅವರ ಮಗಳನ್ನ ಹೆಂಡತಿಯನ್ನು ಏನ್ ಅನ್ನಬೇಕು?ಅವರು ಶ್ರೀರಾಮಚಂದ್ರರ? ಬೇಡ ಏನೂ ಮಾತನಾಡಲ್ಲ ಎಲೆಕ್ಷನ್ ಆದ್ಮೇಲೆ ಉತ್ತರ ಕೊಡ್ತೀನಿ. ನಾಳೆಯಿಂದಲೇ ಎಲೆಕ್ಷನ್ ತಯಾರಿ. ನಾನು ಒಂದು ದಿನನೂ ನಿಂತಿಲ್ಲ. ನಾಳೆಯಿಂದ ಪ್ರತಿಯೊಬ್ಬ ಮತದಾರರ ಮನೆಗೆ ಹೋಗಿ ಅವರ ಮಗಳಾಗಿ ಮತಭಿಕ್ಷೆ ಬೇಡ್ತೀನಿ ಎಂದರು.