ಚಿಕ್ಕೋಡಿ: ಇಡೀ ರಾಜ್ಯದ ರೈತರು ಬರದಿಂದ (Drought Situation) ಕಂಗೆಟ್ಟು ಆಕಾಶ ನೋಡುತ್ತಿದ್ದಾರೆ. ಸರ್ಕಾರವೂ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದೆ. ಅದರ ನಡುವೆ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ (Agriculture Marketing Minister) ಶಿವಾನಂದ ಪಾಟೀಲ್ (Shivananda pateel) ಉಡಾಫೆ ಮಾತೊಂದನ್ನು ಆಡಿದ್ದಾರೆ. ʻʻಬರಗಾಲ ಬರಲೆಂದು ರೈತರು ದಾರಿ ಕಾಯ್ತಾರೆʼʼ ಎಂದು ಹೇಳುವ ಮೂಲಕ ಅವರು ರೈತರನ್ನು ಅಪಮಾನಿಸಿದ್ದಾರೆ. ಈ ಹಿಂದೆಯೂ ಅವರು ರೈತರ ಆತ್ಮಹತ್ಯೆ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು. ಲವ್ ಕೇಸಲ್ಲಿ ಸತ್ತೋರನ್ನೆಲ್ಲ ರೈತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದಿದ್ದರು.
ರೈತರ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್, ಬರಗಾಲ ಬರಲೆಂದು ರೈತರಿಗೆ ಅದೊಂದೇ ಆಸೆ ಇರುತ್ತೆ. ಬರಗಾಲ ಬಂದ್ರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆʼʼ ಎಂದು ಅವರು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಈ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ʻʻರೈತರಿಗೆ ಸಾಲ ಮನ್ನಾದ ನಿರೀಕ್ಷೆ ಇದೆ. ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯʼʼ ಎಂದಿದ್ದಾರೆ. ಅದರ ಜತೆಗೆ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು ಎಂದಿದ್ದಾರೆ ಸಚಿವರು.
ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರಾಗಿದ್ದುಕೊಂಡು ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದ್ದ ಶಿವಾನಂದ ಪಾಟೀಲ್ ಅವರು ಅನ್ನದಾತರನ್ನು ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರೈತರು ಯಾರೂ ನಿಮ್ಮ ಸಾಲಮನ್ನಾವನ್ನು ಕಾದುಕೊಂಡು ಕುಳಿತಿಲ್ಲ. ನಿಮ್ಮ ಸರ್ಕಾರಕ್ಕೆ ಸರಿಯಾದ ಬರ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಜನರ ಸಂಕಷ್ಟ ಪರಿಹರಿಸುವ ಮನಸ್ಸಿಲ್ಲ. ಹೀಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲವ್ ಕೇಸ್ಗಳೆಲ್ಲ ರೈತರ ಆತ್ಮಹತ್ಯೆಗಳಾಗುತ್ತಿವೆ ಎಂದಿದ್ದ ಪಾಟೀಲ್
ಕೆಲವು ತಿಂಗಳ ಹಿಂದೆ ಹಾವೇರಿಯಲ್ಲಿ ಮಾತನಾಡಿದ್ದ ಶಿವಾನಂದ ಪಾಟೀಲ್ ಅವರು ಐದು ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ, ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರನ್ನು ಕೂಡಾ ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಹೇಳಿದ್ದರು.
ಯಾರಾದರೂ ಸತ್ತ ಕೂಡಲೇ ರೈತರ ಆತ್ಮಹತ್ಯೆ ಎಂದು ಷರಾ ಬರೆಯಬೇಡಿ. ಸಾವಿಗೆ ಅವರ ಕೃಷಿ ಹಾನಿ, ಸಾಲಗಳಷ್ಟೇ ಕಾರಣವಾಗಿರುವುದಿಲ್ಲ. ವೈಯಕ್ತಿಕವಾದ ಸಂಗತಿಗಳೂ ಇರುತ್ತವೆ ಎಂದು ಮಾಧ್ಯಮಗಳಿಗೆ ಕೃಷಿ ಸಚಿವರು ಕಿವಿಮಾತು ಹೇಳಿದ್ದರು.
ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಇಂದು ನಿನ್ನೆಯದೇನಲ್ಲ. 2020ರಲ್ಲಿ 500 ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. 2021ರಲ್ಲಿ 595 ಜನ, 2022ರಲ್ಲಿ 651 ಜನ, 2023ರಲ್ಲಿ 412 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇದು ಈ ಜಿಲ್ಲೆಯ ಸ್ವಾಭಾವಿಕ ಆತ್ಮಹತ್ಯೆಗಳು. ನೀವು ಲವ್ ಕೇಸ್ ನಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನೂ ರೈತ ಆತ್ಮಹತ್ಯೆ ಎಂದು ವರದಿ ಮಾಡಿದ್ದೀರಿ ಎಂದು ಶಿವಾನಂದ ಪಾಟೀಲ್ ಹೇಳಿದ್ದರು.
ಎಫ್ಐಆರ್ ಆದ ತಕ್ಷಣ ನೀವು ರೈತ ಆತ್ಮಹತ್ಯೆ ಎಂದು ವರದಿ ಮಾಡೋದು ತಪ್ಪು. ಹೃದಯಾಘಾತವಾಗಿದ್ದು, ಹಾವು ಕಡಿದು ಸತ್ತಿದ್ದು ರೈತ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿದೆ. ಎಫ್ಎಸ್ಎಲ್ ವರದಿ ಬರುವವರೆಗೂ ಕಾಯಿರಿ. ಜನರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ವರದಿ ಮಾಡಿದರೆ ಕಷ್ಟ ಎಂದು ಶಿವಾನಂದ ಪಾಟೀಲ್ ಹೇಳಿದ್ದರು.
ಆ ಸಂದರ್ಭದಲ್ಲಿ ಸಿಡಿದೆದ್ದಿದ್ದ ರೈತರು, ನಾವೇ ರೈತ ಸಂಘದಿಂದ 50 ಲಕ್ಷ ರೂ. ಪರಿಹಾರ ಕೊಡಲು ನಿರ್ಧಾರ ಮಾಡಿದ್ದೇವೆ. ಈಗ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿʼʼ ಎಂದು ಸವಾಲು ಹಾಕಿದ್ದರು.