Site icon Vistara News

Murder | ತಾಯಿ ಚಿಕಿತ್ಸೆಗೆ ಹಣ ನೀಡದ ಆಕ್ರೋಶ: ಮಗನಿಂದ ತಂದೆಯ ಕೊಲೆ

Murder

ಬೆಳಗಾವಿ : ತಾಯಿ ಚಿಕಿತ್ಸೆಗೆ ತಂದೆ ಹಣ ನೀಡದೇ ಇದ್ದುದಕ್ಕೆ ಮಗನೇ ತಂದೆಯ ಕೊಲೆ (Murder) ಮಾಡಿದ ಪ್ರಕರಣ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಮಂಗಳವಾರ (ಸೆ.6) ರಾತ್ರಿ ಮಗ ತಂದೆಯನ್ನು ಕೊಲೆ ಮಾಡಿದ್ದಾನೆ.

ಕೊಲೆಯಾದ ರುದ್ರಪ್ಪ ತಳವಾರ (55) ಹಾಗೂ ಪತ್ನಿ ಮಹಾದೇವಿ (50) ದಂಪತಿ ಯಾವಾಗಲೂ ಜಗಳವಾಡುತ್ತಿದ್ದರು ಎನ್ನಲಾಗಿದೆ. ಜಗಳವಾಡುತ್ತಿದ್ದಾಗ ರುದ್ರಪ್ಪ ತಳವಾರ ಪತ್ನಿಯನ್ನು ಗಾಯಗೊಳಿಸಿದ್ದ. ಮಗ ಸಂತೋಷ ರುದ್ರಪ್ಪ ತಳವಾರ (30) ಆ ಸಮಯದಲ್ಲಿ ಹೊರಗಡೆ ಹೋಗಿದ್ದ. ಮನೆಗೆ ಬಂದು ತಂದೆ, ತಾಯಿ ಜಗಳ ಬಿಡಿಸಿ ಗಾಯಗೊಂಡಿದ್ದ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾನೆ. ಆಸ್ಪತ್ರೆಯ ಬಿಲ್‌ 1500 ರೂ. ಆಗಿದ್ದ ಕಾರಣ ಸಂತೋಷ್‌ ತನ್ನಲ್ಲಿ ಇದ್ದ 500 ರೂ. ಹಣವನ್ನು ವೈದ್ಯರಿಗೆ ಕೊಟ್ಟು, ಬಾಕಿ 1000 ರೂ. ಹಣವನ್ನು ತಂದೆಯ ಬಳಿ ಕೇಳಲು ಮನೆಗೆ ಬಂದಿದ್ದಾನೆ. ಈ ವಿಚಾರವಾಗಿ ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ. ತಂದೆ ಹಣ ನೀಡದೇ ಇದ್ದ ಕಾರಣ ಸಂತೋಷ್‌ ತಂದೆಗೆ ಮಚ್ಚಿನಿಂದ ಕಣ್ಣು, ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ರುದ್ರಪ್ಪ ತಳವಾರ ಸ್ಥಳದಲ್ಲಿಯೇ ಕೊನೆಯುಸಿರು ಎಳೆದಿದ್ದಾನೆ.

ಇದನ್ನೂ ಓದಿ | ಮಗನಿಂದಲೇ ತಂದೆಯ ಕೊಲೆ: ಮಲಗಿದ್ದಲ್ಲಿಗೆ ಹೋಗಿ ಕೊಡಲಿಯಿಂದ ಕೊಚ್ಚಿದ!

ರುದ್ರಪ್ಪ ಬೆಂಗಳೂರಿನ ಬಿಎಂಟಿಸಿ ಚಾಲಕನಾಗಿದ್ದು, ತಾಯಿ ಮಹಾದೇವಿ ಮಲ್ಲೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ ಎಂದು ತಿಳಿದು ಬಂದಿದೆ. ಇಬ್ಬರದ್ದು ಅಂತರ್ಜಾತೀಯ ಪ್ರೇಮ ವಿವಾಹವಾಗಿದ್ದು, ದಂಪತಿಗೆ ಇನ್ನೊಬ್ಬ ಮಗಳೂ ಇದ್ದಾಳೆ. ಇಬ್ಬರೂ ಮಕ್ಕಳದ್ದೂ ವಿವಾಹವಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಮಗಳನ್ನು ಬಲಿಪಡೆದ ಅಪ್ಪನ ಸಿಟ್ಟು; ಊಟದ ವಿಷಯಕ್ಕೆ ನಡೆಯಿತು ಹತ್ಯೆ

Exit mobile version