ವಿಧಾನಸಭೆ (ಬೆಳಗಾವಿ): ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಪೂರಕ್ ಬಜೆಟ್ ಅಂದಾಜಿನ ಮೇಲೆ ಸುದೀರ್ಘ ಭಾಷಣ ಮಾಡುತ್ತಿದ್ದ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡರ ಕುರಿತು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.
2022-23 ನೇ ಸಾಲಿನ ಪೂರಕ ಬಜೆಟನ್ನು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದರು. 8001.13 ಕೋಟಿ ರೂ. ಪೂರಕ ಅಂದಾಜು ಅಗತ್ಯವಿದೆ ಎಂದರು. ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ ೧,೩೯೬ ಕೋಟಿ ರೂ., ಮನರೇಗ ೭೫೦ ಕೋಟಿ ರೂ., ಇಂಧನ ಕ್ಷೇತ್ರದಲ್ಲಿ ಈಕ್ವಿಟಿ ಖರೀದಿಗೆ ೫೦೦ ಕೋಟಿ ರೂ., ಸಾರ್ವತ್ರಿಕ ಚುನಾವಣೆಗೆ ೩೦೦ ಕೋಟಿ ರೂ., ರಾಜೀಔ ಗಾಂಧಿ ಹೌಸಿಂಗ್ ಸೊಸೈಟಿ ಸ್ಕೀಂಗೆ ೨೫೬ ಕೋಟಿ ರೂ., ರೈಲ್ವೇ ಯೋಜನೆಗಳಿಗೆ ೨೫೦ ಕೋಟಿ ರೂ., ಜಲಧಾರೆ ನೀರಾವರಿ ಯೋಜನೆಗೆ ೨೦೦ ಕೋಟಿ ರೂ., ಐದು ಮೆಗಾ ಹಾಸ್ಟೆಲ್ ಗಳ ನಿರ್ಮಾಣಕ್ಕೆ ೨೦೦ ಕೋಟಿ ರೂ., ಬಿಬಿಎಂಪಿ ಗೆ ೨,೦೦೦ ಕೋಟಿ ರೂ. ಇದರಲ್ಲಿ ಸೇರಿದೆ ಎಂದರು.
ಈ ಕುರಿತು ಕೃಷ್ಣ ಬೈರೇಗೌಡ ಮಾತು ಆರಂಭಿಸಿದರು. ಹಣಕಾಸು ನಿರ್ವಹಣೆ ವರದಿ ಡಿಸೆಂಬರ್‌ನಲ್ಲಿ ಬಂದಿದೆ. ವರದಿಯಲ್ಲಿ ಸಾಲ ಮಾಡಿ ಅದನ್ನು ಬಡ್ಡಿ ಕಟ್ಟಲು ಉಪಯೋಗ ಮಾಡುತ್ತಿದ್ದೇವೆ ಎಂಬ ಅರ್ಥದಲ್ಲಿ ಉಲ್ಲೇಖ ಮಾಡಿದ್ದಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ ಎಂದಿದ್ದಾರೆ. ಆರ್‌ಬಿಐ ಕೂಡ ಜೂನ್ ನಲ್ಲಿ ಕೊಟ್ಟ ವರದಿಯಲ್ಲಿ ರಾಜ್ಯಗಳ ಹಣಕಾಸು ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದಿದೆ. ಕರ್ನಾಟಕದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಆದರೆ ಅವರ ಅಂಕಿ ಅಂಶಗಳಿಗೂ ನಮ್ಮ ಅಂಕಿ ಅಂಶಗಳಿಗೂ ಟ್ಯಾಲಿ ಆಗುತ್ತಿಲ್ಲ.
ನಮಗೆ ಬರುವ ಒಟ್ಟು ಆದಾಯದಲ್ಲಿ 14% ಬಡ್ಡಿ ಪಾವತಿಗೆ ಹೋಗುತ್ತಿವೆ ಎಂದಿದೆ. ಆದರೆ ಛತ್ತೀಸ್ಗಢದಲ್ಲಿ ಕೇವಲ 8% ಬಡ್ಡಿ ಪಾವತಿಗೆ ಹೋಗುತ್ತಿದೆ. ಕರ್ನಾಟಕದಲ್ಲಿ ಈ ವರ್ಷ 14,178 ಕೋಟಿ ರೂ. ಸಾಲ ಅಸಲು ಮರುಪಾವತಿ ಇದೆ. ಬಡ್ಡಿ ಮರುಪಾವತಿ 29,397 ಕೋಟಿ ರೂ. ಇದೆ. ಎರಡೂ ಸೇರಿಸಿದರೆ ಈ ವರ್ಷ 43,570 ಕೋಟಿ ರೂ. ಸಾಲ ಮತ್ತು ಬಡ್ಡಿ ಮರು ಪಾವತಿಗೆ ಖರ್ಚು ಮಾಡುತ್ತಿದ್ದೇವೆ.
2023-24ಕ್ಕೆ ಬಡ್ಡಿ ಪಾವತಿ 35,091 ಕೋಟಿ ರೂ., 2024-25 ಕ್ಕೆ 38,629 ಕೋಟಿ ರೂ. ಆಗಲಿದೆ. ಅಸಲಿ ಮರುಪಾವತಿ ಸಿಎಜಿ ಕೊಟ್ಟಿರುವ ಮಾಹಿತಿ ಪ್ರಕಾರ 30,000 ಕೋಟಿ ರೂ. ಆಗಲಿದೆ. ಎರಡು ವರ್ಷದಲ್ಲಿ ರಾಜ್ಯದ ಆದಾಯದಲ್ಲಿ ಸಾಲ ಮರುಪಾವತಿ ಹಾಗೂ ಬಡ್ಡಿಗೆ ನಾವು 75 ರಿಂದ 80 ಸಾವಿರ ಕೋಟಿ ರೂ. ಹೋಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ 1 ಲಕ್ಷ 16 ಕೋಟಿ ರೂ. ಸಾಲ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ 2 ಲಕ್ಷ 40 ಸಾವಿರ ಕೋಟಿ ರೂ. ಇದ್ದ ಸಾಲ ಬರುವ ಮಾರ್ಚ್ ನಲ್ಲಿ 5 ಲಕ್ಷ 40 ಸಾವಿರ ಕೋಟಿ ರೂ. ಆಗುತ್ತದೆ ಎಂದರು.
ಸದನ ಆರಂಭವಾಗಿ ಇಷ್ಟು ದಿನವಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆಗೆ ಅವಕಾಶ ಸಿಕ್ಕಿಲ್ಲದಿರುವ ಕುರಿತು ಉತ್ತರ ಕರ್ನಾಟಕ ಭಾಗದ ಸದಸ್ಯರು ಅದಾಗಲೆ ಅಸಮಾಧಾನ ಹೊರಹಾಕಿದ್ದರು. ಈ ನಡುವೆ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ನಿಗದಿ ಮಾಡಿರುವ ಸಮಯವನ್ನೂ ಸೇರಿಸಿಕೊಂಡು ಕೃಷ್ಣ ಬೈರೇಗೌಡ ಮಾತಾಡುತ್ತಿದ್ದಾರೆ ಎಂದು ಶಾಸಕರು ಹೇಳಿದರು.
ಎಷ್ಟು ಮಾತಾಡುತ್ತೀರಿ? ಸಮಯ ನಿಗದಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಬಿಡಿ ಎಂದರು. ಇಂದು ಭೋಜನ ವಿರಾಮ ಇಲ್ಲ, ಚರ್ಚೆ ಮಾಡೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾಧಾನ ಮಾಡಿದರು.
ಈ ನಡುವೆ ಮಾತನಾಡಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಈ ಚರ್ಚೆ ಮುಗಿಸ್ರೀ ಬೇಗ. ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ಮಾಡ್ರಿ. ಇಷ್ಟೆಲ್ಲ ಬುದ್ಧಿವಂತರಿದ್ದೀರಿ, ನೀವಿದ್ದಾಗ 4 ಲಕ್ಷ ಕೋಟಿ ರೂ. ಸಾಲ ಹೇಗೆ ಮಾಡಿದ್ರಿ? ಸುಮ್ನೆ ಬಜೆಟ್ ಮಂಡ್ಸೋದು, ಹೋಗೋದು ಅಷ್ಟೇನಾ? ಮುಗ್ಸಿ ಎಂದರು.
ನಂತರ ಧ್ವನಿಮತದ ಮೂಲಕ ಪೂರಕ ಬಜೆಟ್‌ಗೆ ಅಂಗೀಕಾರ ನೀಡಲಾಯಿತು.
ಸ್ವಪಕ್ಷದವರಿಗೇ ಯತ್ನಾಳ್ ಟೀಕೆ
ಉತ್ತರ ಕರ್ನಾಟಕದ ಕುರಿತು ಚರ್ಚೆಗೆ ಅವಕಾಶ ನೀಡದೇ ಇದ್ದದ್ದಕ್ಕೆ ಸ್ವಪಕ್ಷೀಯರ ಕುರಿತೇ ಯತ್ನಾಳ್ ಟೀಕೆ ಮಾಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಚಿಂತನ ಮಂಥನ ಎಂದು ದೊಡ್ಡ ದೊಡ್ಡ ಭಾಷಣ ಹೊಡೀತೀರ. ಬೆಳಗಾವಿ ಅಧಿವೇಶನ ಕರೆದಾಗ ಆರಂಭದಲ್ಲೇ ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡಿ. ಸುಮ್ಮನೆ ಕೊನೆಯಲ್ಲಿ ಚರ್ಚೆ ಇಟ್ಟುಕೊಳ್ಳುತ್ತೀರ. ಸಚಿವರು ಯಾರೂ ಇರಲ್ಲ, ಯಾರಿಗೂ ಆಸಕ್ತಿನೂ ಇರಲ್ಲ. ಉತ್ತರ ಕರ್ನಾಟಕದ ಚರ್ಚೆ ಎಂದು ಒಂದು ನೆಪ ಅಷ್ಟೇ.
ಉತ್ತರ ಕರ್ನಾಟಕದಲ್ಲಿ ಯಾವ ಪಕ್ಷದ ಹೆಚ್ಚು ಶಾಸಕರಿರುತ್ತಾರೋ ಅವರದ್ದೇ ಪಕ್ಷ ಅಧಿಕಾರದಲ್ಲಿ ಇರುತ್ತದೆ. ಆದರೆ ಉತ್ತರ ಕರ್ನಾಕದ ಸಚಿವರಿಗೆ ಸಣ್ಣ ಸಣ್ಣ ಖಾತೆ ಕೊಡುತ್ತಾರೆ. ದೊಡ್ಡ ಖಾತೆಗಳನ್ನು ದಕ್ಷಿಣದವರು ಹೊಡೆದುಕೊಳ್ಳುತ್ತಾರೆ. ಇಷ್ಟೇ ನಡೆದಿರೋದು. ಕೊನೇ ದಿನ ಇವತ್ತು.
ಬೆಳಗಾವಿ ಅಧಿವೇಶನದಲ್ಲಿ ಮೊದಲ ದಿನದಿಂದಲೇ ಉತ್ತರ ಕರ್ನಾಟಕದ ಚರ್ಚೆ ಮಾಡುವ ನಿಯಮ ಮಾಡಿ ಎಂದು ಸ್ಪೀಕರ್‌ಗೆ ಸಲಹೆ ನೀಡಿದರು. ನಿಮ್ಮ ಸಲಹೆ ಸರಿ ಇದೆ ಎಂದು ಸ್ಪೀಕರ್ ತಿಳಿಸಿದರು.
ಇದನ್ನೂ ಓದಿ | Seperate state | ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಮೊಳಗಿಸಿದ ಆನಂದ್ ಸಿಂಗ್: ತೀವ್ರ ಪ್ರತಿರೋಧ