Site icon Vistara News

Factory Fire Tragedy: ಟೇಪ್‌ ನಿರ್ಮಾಣ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ; ಹತ್ತಾರು ಜೀವಹಾನಿ ಆತಂಕ

belagavi factory fire tragedy

ಬೆಳಗಾವಿ: ಶಾರ್ಟ್ ಸರ್ಕ್ಯೂಟ್ (Short Circuit) ಆದ ಪರಿಣಾಮ ಟೇಪ್ ನಿರ್ಮಾಣ ಕಾರ್ಖಾನೆಗೆ ಬೆಂಕಿ (Factory Fire Tragedy) ಹೊತ್ತಿಕೊಂಡಿದ್ದು, ಇಡೀ ಕಾರ್ಖಾನೆ ಬೆಂಕಿಗಾಹುತಿಯಾಗಿದೆ. ಜೀವಹಾನಿ, ಗಾಯದ ಪ್ರಮಾಣ ಇನ್ನು ಗೊತ್ತಾಗಬೇಕಿದೆ. ಬೆಳಗಾವಿ (Belagavi news) ‌ತಾಲೂಕಿನ‌ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆ ಬೆಂಕಿಗಾಹುತಿಯಾದ ಫ್ಯಾಕ್ಟರಿ.

ಸ್ನೇಹಂ ಟೇಪ್ ಮ್ಯಾನ್ಯುಫ್ಯಾಕ್ಚರ್ ಕಾರ್ಖಾನೆಯ ಲಿಫ್ಟ್‌‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ‌ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಒಳಗೆ ಹಲವು ಜನ ಕಾರ್ಮಿಕರು ಸಿಲುಕಿರುವ ಶಂಕೆ ಇದೆ.

ಇನ್ಸುಲೇಶನ್‌ ಟೇಪ್ ರೆಡಿ ಮಾಡುವ ಕಾರ್ಖಾನೆಯಲ್ಲಿ ಎರಡನೇ ಶಿಫ್ಟ್‌ ಬಿಡುವ ವೇಳೆಗೆ ಬೆಂಕಿ ಏಕಾಏಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ. ಲಿಫ್ಟ್‌ನಲ್ಲಿ ಒಬ್ಬ ಸಿಲುಕಿ ಹಾಕಿಕೊಂಡಿದ್ದಾನೆ ಎಂಬ ಮಾಹಿತಿ ಇದೆ. ಹೊರಗೆ ಬಂದವರೆಷ್ಟು, ಒಳಗೆ ಉಳಿದವರೆಷ್ಟು ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಹೊರ ಹೋದವರ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸಂಪರ್ಕಿಸುತ್ತಿದ್ದಾರೆ. ಆರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಸ್ಥಳಕ್ಕೆ ‌ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ರಕ್ಷಣೆ ಕಾರ್ಯಾಚರಣೆಯ ಬಂದೋಬಸ್ತ್‌ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಆಗಮಿಸಿ ಮೊಕ್ಕಾಂ ಹೂಡಿದ್ದಾರೆ. ಸ್ಥಳದಲ್ಲಿ ಐದು ಆ್ಯಂಬುಲೆನ್ಸ್‌ಗಳು ರೆಡಿಯಾಗಿವೆ.

ಐದು ಎಕರೆ ಜಾಗದಲ್ಲಿ ನಿರ್ಮಿಸಲಾಗಿರುವ ಕಾರ್ಖಾನೆ ಬೆಳಗಾವಿಯ ಅನೀಶ್ ಮೈತ್ರಾಣಿ ಎಂಬವರಿಗೆ ಸೇರಿದೆ. ಸದ್ಯಕ್ಕೆ ಕಾರ್ಖಾನೆ ಮಾಲೀಕ ನಮ್ಮ ಕಸ್ಟಡಿಯಲ್ಲಿದ್ದಾರೆ, ಅವರಿಂದ ಮಾಹಿತಿ ಸಂಗ್ರಹ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ. ಮುಂಜಾಗೃತಾ ಕ್ರಮವಾಗಿ ಹೆಸ್ಕಾಂ ವಿದ್ಯುತ್ ಕಡಿತ ಮಾಡಿದೆ.

ಬೆಂಕಿ ಅವಘಡ ಸಂಭವಿಸಿದ ಕಾರ್ಖಾನೆಗೆ ಡಿಸಿ ಮೊಹ್ಮದ್ ರೋಷನ್ ಭೇಟಿ ನೀಡಿದ್ದು, ಕಾರ್ಖಾನೆಯ ಸ್ಥಿತಿ ಗತಿಯನ್ನು ಪರಿಶೀಲನೆ ನಡೆಸಿದ್ದಾರೆ. ಇಡೀ‌ ಜಿಲ್ಲಾಡಳಿತ ಸ್ಥಳದಲ್ಲಿ ಇದೆ. ಅಗ್ನಿಶಾಮಕ, ಪೊಲೀಸರು ಸ್ಪಾಟ್‌ನಲ್ಲಿದ್ದೇವೆ. ಆಸ್ಪತ್ರೆಯಲ್ಲಿ ಇನ್ನೂರು ಬೆಡ್ ರೆಡಿ ಇಟ್ಟುಕೊಳ್ಳಲು ಹೇಳಿದ್ದೇವೆ‌. ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದೇವೆ. ಗ್ಯಾಸ್ ಲೀಕ್ ಆಗುವ ಚಾನ್ಸ್ ಇಲ್ಲ. ಅಕ್ಕಪಕ್ಕದ ಜನ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಡಿಸಿ ತಿಳಿಸಿದ್ದಾರೆ.

ಕಾಳಿ ನದಿಗೆ ಕಟ್ಟಿದ ಸೇತುವೆ ಕುಸಿತ

ಕಾರವಾರ: ಕಾಳಿ ನದಿಗೆ (Kali River) ಅಡ್ಡಲಾಗಿ ಕಟ್ಟಿದ್ದ ಹಳೆಯ ಸೇತುವೆ (Kali Bridge Collapse) ಕುಸಿದುಬಿದ್ದಿದ್ದು, ಅದರ ಮೇಲೆ ಚಲಿಸುತ್ತಿದ್ದ ಟ್ರಕ್‌ ಕೆಳಗೆ ಬಿದ್ದು ಚಾಲಕನಿಗೆ (truck driver injury) ಗಾಯವಾಗಿದೆ. ಹೊಸ ಸೇತುವೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದುದರಿಂದ ಭಾರಿ ಅನಾಹುತ ಆಗಿಲ್ಲ.

ಉತ್ತರಕನ್ನಡ ಜಿಲ್ಲೆಯ (Uttara kannada news) ಕಾರವಾರ ನಗರದ ಕೋಡಿಭಾಗ್‌ನಲ್ಲಿರುವ ಈ ಸೇತುವೆಯನ್ನು ಕಾರವಾರ- ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 60 ವರ್ಷ ಹಳೆಯದಾದ ಸೇತುವೆ. ಇತ್ತೀಚೆಗೆ ನಿರ್ಮಿಸಲಾದ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಹಳೆಯ ಸೇತುವೆಯನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.

ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿ ಸೇತುವೆ ಕುಸಿದು ಕೆಳಗೆ ಬಿದ್ದಿದ್ದು, ಅದರ ಮೇಲಿದ್ದ ಟ್ರಕ್‌ ಕೆಳಗೆ ಬಿದ್ದು ಚಾಲಕನಿಗೆ ಗಾಯವಾಗಿದೆ. ಚಾಲಕನನ್ನು ಅಗ್ನಿಶಾಮಕ‌ ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ(37) ರಕ್ಷಣೆಗೊಳಗಾದವರು. ಟ್ರಕ್‌ ಸಂಪೂರ್ಣ ನೀರಿನಲ್ಲಿ ಮುಳುಗಿದೆ.

ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಎಸ್.ಪಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಲಾರಿ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಡಿಸಿ ಲಕ್ಷ್ಮಿಪ್ರಿಯಾ ಮಧ್ಯರಾತ್ರಿ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದರು.

ಇದನ್ನೂ ಓದಿ: Karnataka Weather : ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ; ಉಳಿದೆಡೆ ಹೇಗಿರಲಿದೆ?

Exit mobile version