Site icon Vistara News

Tiger Nail : ಲಕ್ಷ್ಮೀ ಹೆಬ್ಬಾಳ್ಕರ್‌ ಮನೆಗೂ ಅಧಿಕಾರಿಗಳ ಲಗ್ಗೆ; ಮಗ ಮೃಣಾಲ್‌ ಪೆಂಡೆಂಟ್‌ ವಶಕ್ಕೆ

Mrunal Hebbalkar

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ (Mrunal Hebbalkar) ಅವರಿಗೂ ಹುಲಿ ಉಗುರಿನ (Tiger nail) ಸಂಕಷ್ಟ ಎದುರಾಗಿದೆ. ಅವರ ಕೊರಳಲ್ಲೂ ಹುಲಿಯುಗುರು ಇರುವ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು (Forest officers) ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ನಿವಾಸಕ್ಕೆ ಲಗ್ಗೆ ಇಟ್ಟು ವಿಚಾರಣೆ ನಡೆಸಿದರು.

ಬೆಳಗಾವಿಯ ಡಿಸಿಎಫ್ ಶಂಕರ್ ಕಲ್ಲೋಳಿಕರ್ ನೇತೃತ್ವದಲ್ಲಿ ಸುಮಾರು 15 ಮಂದಿ ಅಧಿಕಾರಿಗಳ ತಂಡ ಬೆಳಗಾವಿಯ ಕುವೆಂಪು ನಗರಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮನೆಗೆ ಭೇಟಿ ನೀಡಿದೆ. ಅಧಿಕಾರಿಗಳು ಭೇಟಿ ನೀಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮನೆಗೆ ಬಂದ ಅತಿಥಿಗಳನ್ನು ಬೀಳ್ಕೊಡಲು ಸಿದ್ಧರಾಗುತ್ತಿದ್ದರು.

ಅದಕ್ಕಿಂತ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ನನ್ನ ಮಗನಿಗೆ ಮದುವೆ ಸಮಯದಲ್ಲಿ ಯಾರೋ ಗಿಫ್ಟ್‌ ಕೊಟ್ಟಿದ್ದರು. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್ ನದ್ದು, ಅದು ಒರಿಜಿನಲ್ ಪೆಂಡೆಂಟ್ ಅಲ್ಲ ಎಂದು ಹೇಳಿದ್ದರು.

Forest officials recieve pendent from Mrunal Hebbalkar

ʻʻನಾನೂ ಸಸ್ಯಾಹಾರಿ. ಹುಲಿ, ಜಿಂಕೆ, ಕೋಳಿ, ಇನ್ಯಾವುದೇ ಬಲಿಯನ್ನು ನಾನು ಇಷ್ಟ ಪಡಲ್ಲ, ಸದ್ಯ ನಮ್ಮ ಸಂಬಂಧಿಕರು ಬಂದಿದ್ದಾರೆ. ಅವರನ್ನು ಬೀಳ್ಕೊಟ್ಟು ಬರ್ತೀನಿ. ನಂತರ ಅಧಿಕಾರಿಗಳು ಕೇಳುವ ಎಲ್ಲದಕ್ಕೂ ಉತ್ತರ ಕೊಡ್ತೀನಿʼʼ ಎಂದು ಹೆಬ್ಬಾಳ್ಕರ್‌ ಹೇಳಿದ್ದರು.

ಅಧಿಕಾರಿಗಳಿಂದ ವಿಚಾರಣೆ, ಪೆಂಡೆಂಟ್‌ ವಶಕ್ಕೆ

ಮನೆಗೆ ಆಗಮಿಸಿದ ಅಧಿಕಾರಿಗಳು ಲಕ್ಷ್ಮೀ ಹೆಬ್ಬಾಳ್ಕರ್‌ ಸಮ್ಮುಖದಲ್ಲೇ ಮೃಣಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದರು. ಹುಲಿ ಉಗುರಿನ ಮೂಲದ ಬಗ್ಗೆ ಪ್ರಶ್ನೆ ಮಾಡಿದರು. ಪೆಂಡೆಂಟ್ ಹೇಗೆ ಬಂತು? ಯಾರು ನೀಡಿದರು? ಯಾವಾಗ ನೀಡಿದರು ಎಂದು ಪ್ರಶ್ನೆ ಮಾಡಿದರು.

ಸುಮಾರು ಒಂದು ಗಂಟೆ ವಿಚಾರಣೆ ನಡೆಸುವ ವೇಳೆ ಪಶು ವೈದ್ಯಾಧಿಕಾರಿಗಳು ಉಗುರಿನ ಪ್ರಾಥಮಿಕ ಪರೀಕ್ಷೆ ನಡೆಸಿದರು. ಪೆಂಡೆಂಟ್ ತೂಕ ಕೂಡ ಪರಿಶೀಲನೆ ನಡೆಸಿದರು. ಬಳಿಕ ಅದನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸುವುದಾಗಿ ಹೇಳಿದರು.

ವಿಚಾರಣೆಯ ಬಳಿಕ ಹೇಳಿಕೆ ನೀಡಿದ ಡಿಸಿಎಫ್ ಶಂಕರ್ ಕಲ್ಲೋಳಕರ್ ಅವರು, ನಾವು ಇಲ್ಲಿ ವಶಪಡಿಸಿಕೊಂಡ ಉಗುರನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸುತ್ತೇವೆ. ಇದು ಅಸಲಿಯಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹೇಳಿದ್ದಾರೆ. ಪರೀಕ್ಷೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಪೆಂಡೆಂಟ್ ಸೈಜ್ ಎಷ್ಟಿದೆ ಅನ್ನೋದನ್ನ ನೋಡಿದ್ದೇವೆ. ಮೃಣಾಲ್‌ ಅವರ ಕಡೆಯಿಂದ ಹೇಳಿಕೆಯನ್ನು ಪಡೆದಿದ್ದೇವೆ. ಕಾನೂನಿನಡಿಯಲ್ಲಿ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು.

ಮೃಣಾಲ್‌ ಹೆಬ್ಬಾಳ್ಕರ್‌ ಅವರು ಹುಲಿಯುಗುರಿನದ್ದೆಂದು ಹೇಳಲಾದ ಪೆಂಡೆಂಟ್‌ನ್ನು ಒಪ್ಪಿಸಿದರು

ಪುಟಾಣಿ ಮಗು ಮನೆಗೆ ಬಂದರೂ ಸಮಯ ಕಳೆಯಲಾಗದ ಮೃಣಾಲ್‌

ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಅವರಿಗೆ ಕಳೆದ ಮೇ ತಿಂಗಳಲ್ಲಿ ಮಗು ಹುಟ್ಟಿತ್ತು. ಇಷ್ಟೂ ದಿನ ಭದ್ರಾವತಿಯ ತಾಯಿ ಮನೆಯಲ್ಲಿದ್ದ ಮೃಣಾಲ್‌ ಪತ್ನಿಯನ್ನು ಗುರುವಾರವಷ್ಟೇ ಮಗು ಸಮೇತ ಮನೆಗೆ ಕರೆ ತರಲಾಗಿತ್ತು. ಆದರೆ, ನಿನ್ನೆಯಿಂದಲೇ ಹುಲಿಯುಗುರಿನ ವಿಚಾರ ಚರ್ಚೆಗೆ ಬಂದಿತ್ತು. ಶುಕ್ರವಾರ ಅರಣ್ಯಾಧಿಕಾರಿಗಳ ಭೇಟಿಯ ಕಿರಿಕಿರಿಯಿಂದ ಮೃಣಾಲ್‌ಗೆ ಮಗುವಿನ ಜತೆ ಸಮಯ ಕಳೆಯುವುದಕ್ಕೇ ಅವಕಾಶ ಸಿಕ್ಕಿಲ್ಲ.

Exit mobile version