ಬೆಳಗಾವಿ: ಮಲಪ್ರಭಾ ನದಿ ದಡದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಈ ಬ್ಗಗೆ ಅಧಿಕಾರಿಗಳ ಗಮನಕ್ಕೆ ತಂದ ಯುವಕನಿಗೆ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ನೊಂದ ಯುವಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾನೆ. ಬೆಳಗಾವಿ ಜಿಲ್ಲೆಯ ತೆಗ್ಗೆಹಳ್ಳಿ ಗ್ರಾಮದಲ್ಲಿ ಜುಲೈ 6ರಂದು ಈ ಪ್ರಕರಣ ನಡೆದಿದೆ.
ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಮಾಡುತ್ತಿದ್ದ ಪ್ರಕರಣ ಕಂಡುಬಂದಿತ್ತು. ಈ ವಿಷಯವನ್ನು ತೆಗ್ಗೆಹಳ್ಳಿ ಗ್ರಾಮದ ಸಿದ್ದಪ್ಪ ಹಿರೂರು ಎಂಬ ವಿದ್ಯಾರ್ಥಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸವದತ್ತಿ ತಹಸೀಲ್ದಾರ್, ಸಿಪಿಐ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ದುರಂತ ಎಂದರೆ ತಹಸೀಲ್ದಾರ್ ಪ್ರಶಾಂತ ಪಾಟೀಲ ವಿದ್ಯಾರ್ಥಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ತಹಸೀಲ್ದಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಸಿದ್ದಪ್ಪ ದೂರು ದಾಖಲಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ತಹಸೀಲ್ದಾರ್ ಪ್ರಶಾಂತ ಪಾಟೀಲ್ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ ಎನ್ನಲಾಗಿದೆ.
ಸಿದ್ದಪ್ಪ ಅವರಿಗೆ ಪೊಲೀಸರಿಂದ ಚಿತ್ರಹಿಂಸೆ:
ತಹಸೀಲ್ದಾರ್ ನೀಡಿದ ದೂರಿನ ಆಧಾರದ ಮೇಲೆ ಸಿದ್ದಪ್ಪ ಅವರನ್ನು ಸವದತ್ತಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ಬಂಧಿಸಿದ್ದರು. ಅಲ್ಲದೆ, ಚಿತ್ರಹಿಂಸೆ ನೀಡಿದ್ದರು. ಅಲ್ಲದೆ, ಜೀವ ಬೆದರಿಕೆಯನ್ನು ಹಾಕಲಾಗಿತ್ತು. ಆ ಬಳಿಕ ಮೂರು ದಿನಗಳ ಕಾಲ ಬೈಲಹೊಂಗಲ ಸಬ್ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಸಿದ್ದಪ್ಪ ಹಿರೂರು ಆರೋಪಿಸಿದ್ದಾರೆ.
ಜಾಮೀನು ಪಡೆದು ಹೊರಬಂದಿರುವ ಸಿದ್ದಪ್ಪ ಈ ಬಗ್ಗೆ ಮಾತನಾಡಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗೆ ಸಿದ್ದಪ್ಪ ಹಿರೂರು ದೂರು ನೀಡಿದ್ದಾರೆ. ಅಲ್ಲದೆ, ತನ್ನ ಮೇಲೆ ಸುಳ್ಳು ದೂರು ನೀಡಿದ ಹಿಂದಿನ ಸವದತ್ತಿ ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಹಾಗೂ ಚಿತ್ರಹಿಂಸೆ ನೀಡಿದ ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ ಸೇರಿ ಇತರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಗಿ ಮಾಧ್ಯಮದವರಿಗೆ ಸಿದ್ದಪ್ಪ ಹೇಳಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಆರ್‌ಎಸ್ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಯಸಿದ ಡಿಸಿ ನಿತೇಶ ಪಾಟೀಲ, ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: PSI Scam | ರಾಜಕಾರಣಿಗಳ ಬೆಂಬಲವಿಲ್ಲದೆ ಪಿಎಸ್‌ಐ ಅಕ್ರಮ ಸಾಧ್ಯವೇ?; ಪ್ರಿಯಾಂಕ್ ಖರ್ಗೆ ಪ್ರಶ್ನೆ