Site icon Vistara News

Veer Savarkar | ಹಿಂಡಲಗಾ ಜೈಲಿನಲ್ಲಿ ಸಾವರ್ಕರ್‌ ಫೋಟೊ ಮರು ಅಳವಡಿಕೆ: ಗೃಹ ಸಚಿವ, ಶಿಕ್ಷಣ ಸಚಿವರ ನೇತೃತ್ವ

veer-savarkar-unvieled in hindalaga jail

ಬೆಳಗಾವಿ: ಸ್ವಾತಂತ್ರ್ಯ ವೀರ ಸಾವರ್ಕರ್‌ (Veer Savarkar) ಭಾವಚಿತ್ರವನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮತ್ತೆ ಅಳವಡಿಸಲಾಗಿದೆ.

ವಿಧಾನಸಭೆ ಸಭಾಂಗಣದಲ್ಲಿ ಕೆಲ ದಿನಗಳ ಹಿಂದಷ್ಟೇ ವೀರ ಸಾವರ್ಕರ್ ಸೇರಿ ಮಹನೀಯರ ಫೋಟೊ ಅಳವಡಿಸಲಾಗಿತ್ತು. ಇದೀಗ ಹಿಂಡಲಗಾ ಜೈಲಿನಲ್ಲೂ ವೀರ ಸಾವರ್ಕರ್ ಫೋಟೊವನ್ನೂ ಅಳವಡಿಸಲಾಯಿತು.

ವೀರಸಾವರ್ಕರ್‌ಗೂ ಹಿಂಡಲಗಾ ಜೈಲಿಗೂ ನಂಟಿದೆ. ವೀರಸಾವರ್ಕರ್ 1950ರ ಏಪ್ರಿಲ್ 4ರಂದು ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದರು. ವೀಚಾರಣಾಧೀನ ಕೈದಿಯಾಗಿ ಸಾವರ್ಕರ್ 100 ದಿನ ಜೈಲಿನಲ್ಲಿ ಕಳೆದಿದ್ದಾರೆ. ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ‌ಯನ್ನು ಸಾವರ್ಕರ್ ವಿರೋಧಿಸಿದ್ದರು. ಈ ವೇಳೆ ಸಾವರ್ಕರ್ ಅವರನ್ನು ಬಂಧಿಸಿ ಪೊಲೀಸರು ಬೆಳಗಾವಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಬಳಿಕ ಜುಲೈ 13, 1950ರಂದು ಸಾವರ್ಕರ್ ಬಿಡುಗಡೆಯಾಗಿದ್ದರು.

ಈ ಕಾರಣಕ್ಕೆ ಈ ಮೊದಲು ಹಿಂಡಲಗಾ ಜೈಲಿನ ದ್ವಾರದ ಬಳಿ ಸಾವರ್ಕರ್ ಫೋಟೊ ಅಳವಡಿಸಲಾಗಿತ್ತು. ಸಾವರ್ಕರ್ ಜಯಂತಿ ದಿನದಂದು ಜೈಲಿಗೆ ಭೇಟಿ ನೀಡುತ್ತಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೂಜೆ ಸಲ್ಲಿಸುತ್ತಿದ್ದರು. ಆದರೆ ಮುಖ್ಯದ್ವಾರದ ಬಳಿಯಿದ್ದ ಸಾವರ್ಕರ್ ಫೋಟೊವನ್ನು ಕೆಲ ವರ್ಷಗಳ ಹಿಂದೆ ತೆರವು ಮಾಡಲಾಗಿತ್ತು.

ಹಿಂಡಲಗಾ ಜೈಲಿನಲ್ಲಿ ವೀರ್ ಸಾವರ್ಕರ್ ಸೆರೆವಾಸ ಅನುಭವಿಸಿದ್ದ ಸೆಲ್‌ನಲ್ಲಿ ಫೋಟೋ ಅನಾವರಣ ಮಾಡಲಾಯಿತು. ಪುಷ್ಪನಮನ ಸಲ್ಲಿಸಿ ಭಾರತ ಮಾತಾ ಕೀ ಜೈ, ಸ್ವಾತಂತ್ರ್ಯ ವೀರ ಸಾವರ್ಕರ್‌ಗೆ ಜಯವಾಗಲಿ ಎಂದು ಘೋಷಣೆ ಕೂಗಲಾಯಿತು. ಮೊದಲು ಜೈಲು ಅಧಿಕಾರಿಗೆ ಸಚಿವ ಬಿ.ಸಿ.ನಾಗೇಶ್, ಎಂಎಲ್ ಸಿ ರವಿಕುಮಾರ್ ಸೇರಿ ಇತರರು ಫೋಟೋ ನೀಡಿದರು. ಬಳಿಕ ಸೆಲ್‌ನಲ್ಲಿ ಫೋಟೋ ಅನಾವರಣ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.

ಸಾವರ್ಕರ್‌ರನ್ನು ಇರಿಸಲಾಗಿದ್ದ ಕೋಣೆಯ ಫಲಕ

ಈ ವೇಳೆ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ, ಹಿಂಡಲಗಾ ಜೈಲಿನಲ್ಲಿ ಸಾರ್ವಕರ್ ಇದ್ದರು. ಆ ಕಾರಣಕ್ಕೆ ಜೈಲಿನಲ್ಲಿ ಸಾವರ್ಕರ್ ಫೋಟೋವನ್ನು ಇಟ್ಟಿದ್ದೇವೆ. ಇದೊಂದು ಅತ್ಯಂತ ಹೆಮ್ಮೆಯ ಸಮಯ ಎಂದರು.

ಬಳಿಕ ಮಾತನಾಡಿದ ಬಿ.ಸಿ.ನಾಗೇಶ್‌, ವೀರ ಸಾವರ್ಕರ್ ಫೋಟೊ ಅಳವಡಿಕೆ ತುಂಬಾ ಸಂತೋಷ, ಸಮಾಧಾನ ಕೊಟ್ಟಿದೆ. ನಾವಿಂದು ಯಾವ ಸೌಧದಲ್ಲಿ ಕುಳಿತಿದ್ದೇವೆ ಇದಕ್ಕೆ ಸಾವರ್ಕರ್‌ರಂಥ ಅನೇಕ ಹೋರಾಟಗಾರರು ಕಾರಣ. ಪುಟ್ಟ ಕೊಠಡಿಯಲ್ಲಿ 100 ದಿನ ಸಾರ್ವಕರ್ ಕಳೆದಿದ್ದಾರೆ. ಪಾಕಿಸ್ತಾನ ಪ್ರಧಾನಿ ಭಾರತ ಭೇಟಿಗೆ ವಿರೋಧಿಸುವ ಮೂಲಕ ಸಾವರ್ಕರ್ ದೇಶಕ್ಕೆ ಆಗ್ತಿದ್ದ ಅವಮಾನ ತಡೆದಯಲು ಮುಂದಾದರು. ಸಾವರ್ಕರ್ ಸ್ವಾಭಿಮಾನಿ, ಶ್ರೇಷ್ಠ ರಾಷ್ಟ್ರಭಕ್ತ. ಅವರು ಇದ್ದಂತಹ ಜಾಗ ನೋಡಿ, ಅವರ ತ್ಯಾಗ ನಮಗೆ ನೆನಪಿಗೆ ಬಂತು. ಅವರಿದ್ದ ಸೆಲ್ ಗೆ ಹೋಗಿ ಸಾವರ್ಕರ್ ಪೋಟೋಗೆ ಹೂವು ಹಾಕಿ ಬಂದಿದ್ದೇವೆ ಎಂದರು.

ಸಚಿವರಾದ ಬಿ.ಸಿ. ನಾಗೇಶ್‌, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಶಾಸಕ ಮಸಾಲೆ ಜಯರಾಮ್ ಇದ್ದರು.

ಇದನ್ನೂ ಓದಿ | ವೀರ ಸಾವರ್ಕರ್​ಗೆ ಅಪಮಾನ ಮಾಡಿದ ಆರೋಪ; ರಾಹುಲ್ ಗಾಂಧಿ ವಿರುದ್ಧ ಲಖನೌ ಕೋರ್ಟ್​​ನಲ್ಲಿ ದೂರು ದಾಖಲು

Exit mobile version