ಬೆಳಗಾವಿ: ಜಗತ್ತಿನಲ್ಲಿ ಹಲವು ಕಾರಣಗಳಿಗೆ ಕೊಲೆಗಳು ಆಗುತ್ತಲೇ ಇರುತ್ತವೆ. ಆದರೆ, ಶಾಸಕ ಸತೀಶ್ ಜಾರಕಿಹೊಳಿ ಆಪ್ತನ ಮೇಲೆ ಫೈರಿಂಗ್ ಮಾಡಿದ್ದ ಯುವಕ ವಿನಾಯಕ ಹರಕೇರಿ ಕೊಲೆ ಪ್ರಕರಣದ ಕಾರಣ ವಿಚಿತ್ರವಾಗಿದೆ. ಇನ್ನೂ ಸರಿಯಾಗಿ ಮೀಸೆ ಚಿಗುರದ ಯುವಕರ ಗುಂಪು, ಹಳೇ ವೈಷಮ್ಯಕ್ಕೆ ಹಾಗೂ ರೌಡಿಸಂನಲ್ಲಿ ಹವಾ ಮೇಂಟೇನ್ ಮಾಡಬೇಕು ಎಂದು ಕೊಲೆ ಮಾಡಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ.
ಕಳೆದ ವರ್ಷ ಶಾಸಕ ಸತೀಶ್ ಜಾರಕಿಹೊಳಿ ಆಪ್ತನ ಮೇಲೆ ಫೈರಿಂಗ್ ಮಾಡಿದ್ದರಿಂದ ಯುವಕ ವಿನಾಯಕನ ಬಂಧನವಾಗಿತ್ತು. ಅದಾದ ಮೇಲೆ ವಿನಾಯಕ ಜಾಮೀನು ಪಡೆದು ಹೊರಗೆ ಬಂದಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸರ್ವೀಸ್ ರೋಡ್‌ನಲ್ಲಿ ಸೆ. ೪ರ ರಾತ್ರಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವಿನಾಯಕ ಹರಕೇರಿ (೨೮) ಎಂಬ ಯುವಕನನ್ನು ಅಡ್ಡಗಟ್ಟಿದ್ದ ಐವರ ತಂಡ, ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಯಮಕನಮರಡಿ ಪೊಲೀಸರು ಸ್ಥಳ ಮಹಜರು ಹಾಗೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೃತ್ಯ ನಡೆದು ಕೇವಲ ಐದು ದಿನಗಳಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಗುರವ್, ಈರಣ್ಣ ಹಿನ್ನಕ್ಕನವರ್, ಆದಿತ್ಯ ಗಣಾಚಾರಿ, ಮಹಾಂತೇಶ ಕರಗುಪ್ಪಿ, ಶಾನೂರ ನದಾಫ್ ಎಂಬ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ವೈಷಮ್ಯ ಹಾಗೂ ರೌಡೀಸಂನಲ್ಲಿ ಹವಾ ಮೇಂಟೇನ್ ಮಾಡಲು ಯುವಕರ ತಂಡದಿಂದ ಕೊಲೆ ನಡೆದಿದೆ ಎಂಬುವುದು ತಿಳಿದುಬಂದಿದೆ.
ಇದನ್ನೂ ಓದಿ | Murder | ಆಸ್ತಿ ವಿಚಾರಕ್ಕೆ ಮೊಮ್ಮಗನಿಂದಲೇ ತಾತನ ಕೊಲೆ: ಎಂಟು ತಿಂಗಳ ಬಳಿಕ ಕೊಲೆ ರಹಸ್ಯ ಬೆಳಕಿಗೆ