Site icon Vistara News

Nijagunananda swameeji : ಈ ಸಾರಿ ಮಿಸ್ಸಾಗಲ್ಲ, 2023ರಲ್ಲೇ ನಿನ್ನ ತಿಥಿ: ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಬೆದರಿಕೆ ಪತ್ರ

Nijagunananda Swameeji

ಬೆಳಗಾವಿ: ಸಮಾಜದಲ್ಲಿ ಮೌಢ್ಯಗಳನ್ನು ನಿವಾರಿಸಬೇಕು ಎಂದು ಪ್ರತಿಪಾದಿಸುವ, ತಮ್ಮ ಖಡಕ್‌ ಮಾತುಗಳಿಂದ ಅಭಿಮಾನಿಗಳು ಅಂತೆಯೇ ವಿರೋಧಿಗಳನ್ನೂ ಹೊಂದಿರುವ ಶ್ರೀ ನಿಜಗುಣಾನಂದ ಸ್ವಾಮೀಜಿ (Nijagunananda swameeji) ಅವರಿಗೆ ಮತ್ತೆ ಬೆದರಿಕೆ ಪತ್ರ ಬಂದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ (Bailuru Nishkala Mata) ಬಸವಣ್ಣನವರ ವಿಚಾರಗಳ ಪ್ರಚಾರಕರಾಗಿರುವ ಅವರಿಗೆ ಆಗಸ್ಟ್‌ 2ರಂದೇ ಈ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ (Will be killed in 2023) ಎಂದು ಬೆದರಿಕೆ ಹಾಕಲಾಗಿದೆ.

ʻʻನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನು ಎಣಿಸುʼʼ ಎಂದು ಬರೆದಿರುವ ಪತ್ರ ಮಠಕ್ಕೆ ತಲುಪಿದೆ.

2020ರಲ್ಲಿ ಕೂಡಾ ಇಂತಹುದೇ ಒಂದು ಪತ್ರ ಬಂದಿತ್ತು. ಇದುವರೆಗೆ ಐದಕ್ಕೂ ಹೆಚ್ಚು ಬಾರಿ ಅವರಿಗೆ ಬೆದರಿಕೆ ಪತ್ರ ಬಂದಿದೆ. ಇದು 2020ರಲ್ಲಿ ಪತ್ರ ಬರೆದವರೇ ಮತ್ತೆ ಬರೆದಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಅಂದು ಬೆದರಿಕೆ ಪತ್ರ ಬರೆದಿದ್ದರೂ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಖಂಡಿತಾ ಕೊಲ್ಲುತ್ತೇವೆ ಎನ್ನುವ ಸಂದೇಶವನ್ನು ಇದರಲ್ಲಿ ನೀಡಲಾಗಿದೆ. ಇಷ್ಟೆಲ್ಲ ಆದರೂ ಕಿತ್ತೂರು ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆದರಿಕೆ ಪತ್ರದಲ್ಲಿ ಏನಿದೆ?

ಓಂ‌ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ನಿಜಗುಣನಂದಾ ನಿನ್ನ ಸಾವು 2020ರಲ್ಲಿ ತಪ್ಪಿರಬಹುದು. 2023 ರಲ್ಲಿ ತಪ್ಪುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಅತಿ ಬೇಗ ನಿನ್ನ ತಿಥಿಗೆ ನಿನ್ನ ಭಕ್ತಾದಿಗಳಿಗೆ ಹೇಳು. ನಮ್ಮ ಧರ್ಮ ದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿದೆ. ಇನ್ನೂ ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ- ಎಂದು ಹೇಳಿ ಸಹಿಷ್ಣು ಹಿಂದು ಎಂದು ಬರೆಯಲಾಗಿದೆ.

ನಿಜಗುಣಾನಂದ ಸ್ವಾಮೀಜಿ ಅವರು ಸಮಾಜದ ಆಚರಣೆಗಳನ್ನು ಪ್ರಶ್ನೆ ಮಾಡುತ್ತಾರೆ. ಬಸವಣ್ಣನವರ ವಿಚಾರಗಳನ್ನು ಮೀರಿ ಲಿಂಗಾಯತರು ನಡೆದುಕೊಳ್ಳುತ್ತಿದ್ದಾರೆ ಎಂದು ವಚನಗಳನ್ನು ಉಲ್ಲೇಖಿಸಿ ವಾದ ಮಾಡುತ್ತಾರೆ. ಧರ್ಮ ಸಂಬಂಧಿತ ಜಿಜ್ಞಾಸೆಗಳಿಗೆ ಉತ್ತರಿಸುತ್ತಾರೆ. ಮೂರ್ತಿ ಪೂಜೆ, ಮೌಢ್ಯಾಚರಣೆಗಳನ್ನು ಖಡಾಖಂಡಿತವಾಗಿ ಖಂಡಿಸುತ್ತಾರೆ. ಇದು ಅವರಿಗೆ ಹಲವು ವಿರೋಧಿಗಳನ್ನು ಸೃಷ್ಟಿ ಮಾಡಿದೆ.

ಪತ್ರದ ಬಗ್ಗೆ ಸ್ವಾಮೀಜಿಗಳು (Nijagunananda swameeji) ಹೇಳುವುದೇನು?

ʻʻಸುಮಾರು ನಾಲ್ಕೈದು ವರ್ಷಗಳಿಂದ ಇಂತಹ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಒಬ್ಬನೇ ವ್ಯಕ್ತಿ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದಾನೆ. ಒಂದೇ ಹಸ್ತಾಕ್ಷರ ಇದೆ, ಹೆಸರು ಇಲ್ಲ. ನನ್ನ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇದ್ದಂತಿಲ್ಲ. ಸೈದ್ಧಾಂತಿಕ ಹೋರಾಟದ ಬಗ್ಗೆ ದ್ವೇಷ ಇಟ್ಟುಕೊಂಡು ಪತ್ರ ಬರೆಯುತ್ತಿದ್ದಾನೆ ಅನಿಸುತ್ತಿದೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

ʻʻ15 ದಿನಗಳ ಹಿಂದೆ ನನಗೆ ಬೆದರಿಕೆ ಪತ್ರ ಬಂದಿದೆ. ಈಗಾಗಲೇ ಕಿತ್ತೂರು ಪೊಲೀಸರಿಗೆ ದೂರು ನೀಡಿದ್ದೇನೆ. ಒಂದು ಸಲ ಒಂದೊಂದು ಕಡೆಯಿಂದ ಪತ್ರ ಬರೆಯುತ್ತಿದ್ದಾನೆ. ಶಿವಮೊಗ್ಗ, ಮೈಸೂರು, ಧಾರವಾಡ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಗಳಿಂದ ಪತ್ರಗಳು ಬರುತ್ತಿವೆʼ ಎಂದಿರುವ ನಿಜಗುಣಾನಂದ ಅವರು, ʻʻನನಗೆ ಸಾವಿನ ಬಗ್ಗೆ ಯಾವುದೇ ಭಯವಿಲ್ಲ, ಆದರೆ ಸಮಾಜಕ್ಕೆ ನಮ್ಮ ಸೇವೆ ನಿಂತು ಹೋಗುತ್ತೆ ಎನ್ನುವ ಚಿಂತೆ ಇದೆʼʼ ಎಂದರು. ʻʻಸರ್ಕಾರ ಆದಷ್ಟು ಬೇಗ ಇದರ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಪತ್ತೆ ಮಾಡಬೇಕುʼʼ ಎಂದು ಮನವಿ ಮಾಡಿದರು.

ʻʻಅನೇಕ ಸಾಹಿತಿಗಳು, ಸ್ವಾಮೀಜಿಗಳಿಗೆ ಬೆದರಿಕೆ ಬಂದಿದೆ. ಎಂಎಂ ಕಲಬುರ್ಗಿ, ದಾಬೋಲ್ಕರ್‌, ಗೌರಿ ಲಂಕೇಶ್‌ರಂಥವರ ಹತ್ಯೆಯಾಗಿದೆ. ಸತ್ಯದ ವಿಚಾರವನ್ನು ಹೇಳುವವರಿಗೆ, ಬಸವಾದಿ ಶರಣರ ವಿಚಾರವನ್ನು ಹೇಳುವವವರಿಗೆ ಇಂತಹ ಬೆದರಿಕೆ ಬರುತ್ತಿದೆ. ಇದು ಹೊಸತಲ್ಲ. ಅಂದಿನಿಂದ ಇಂದಿನ ಕಾಲದವರೆಗೂ ಬಸವಣ್ಣನವರ ಕಾಲದಿಂದಲೂ ನಡೆದಿದೆ. ಬೇರೆ ಬೇರೆ ಮುಖಗಳಲ್ಲಿ ನಡೆದಿದೆ. ಆದರೆ ಪ್ರಜಾಪ್ರಭುತ್ವ ಕಾಲದಲ್ಲೂ ಇಂತಹ ಬೆದರಿಕೆಗಳು ನಿಂತಿಲ್ಲ ಎನ್ನುವುದು ಬೇಸರದ ಸಂಗತಿʼʼ ಎಂದರು ಸ್ವಾಮೀಜಿ.

ʻʻಪ್ರಭು ಪರಂಪರೆಯಲ್ಲಿ ಆಗಬಹುದು ಆದರೆ ಪ್ರಜಾಪ್ರಭುತ್ವದಲ್ಲಿ ಇಂತಹ ರೀತಿ ಆಗಬಾರದು ಎನ್ನುವುದು ನಮ್ಮ ಕೋರಿಕೆʼʼ ಎಂದರು.

ಇದನ್ನೂ ಓದಿ: Threatening letters : ಏಳು ಸಾಹಿತಿಗಳಿಗೂ ಒಬ್ಬನಿಂದಲೇ ಕೊಲೆ ಬೆದರಿಕೆ! ಸಿಸಿಬಿ ತನಿಖೆಯಲ್ಲಿ ಬಹಿರಂಗ

ಬಸವ ತತ್ವದಿಂದ ಮತೀಯ ವಾದಿಗಳಿಗೆ ನೋವಾಗುವುದು ಸಹಜ

ನಿಜಗುಣಾನಂದ ಶ್ರೀಗಳು ಹೇಳುವ ಮಾತುಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿರುತ್ತವೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ʻʻಹಿಂದೂ ತತ್ವಕ್ಕೂ ಬಸವ ತತ್ವಕ್ಕೂ ಅಜಗಜಾಂತರವಿದೆ. ಬಸವ ತತ್ವವನ್ನು ಪರಿಪಾಲನೆ ಮಾಡುವುದರಿಂದ ಮತಿಯವಾದಿಗಳಿಗೆ ಸಂಪ್ರದಾಯವಾದಿಗಳಿಗೆ ನೋವಾಗುವುದು ಸಹಜ. ಆ ನೋವಿನ ರೀತಿಯಲ್ಲಿ ಇಂತಹ ಪತ್ರಗಳು ಬರ್ತಿವೆ ಎನ್ನುವುದು ನನ್ನ ಅಭಿಪ್ರಾಯ. ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದೇನೆ. ಗೃಹ ಇಲಾಖೆಗೆ ಪತ್ರ ಬರೆದಿದ್ದೇನೆ, ಸದ್ಯವೇ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ತೋರಿಸುತ್ತೇನೆ. ಶೀಘ್ರದಲ್ಲಿಯೇ ಗೃಹ ಸಚಿವ ಪರಮೇಶ್ವರ ಅವರ ಗಮನಕ್ಕೂ ಈ ವಿಚಾರ ತರುತ್ತೇನೆʼʼ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು.

Exit mobile version