ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮಲಪ್ರಭ, ಘಟಪ್ರಭ ನದಿಗಳಿಗೆ ನೀರಿನ ಒಳ ಹರಿವು ಹೆಚ್ಚಳವಾಗಿದ್ದು, ಅಪಾಯದಮಟ್ಟ ತಲುಪುತ್ತಿವೆ. ಬಹುತೇಕ ಸೇತುವೆಗಳ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಸಹ ಈ ಭಾಗಕ್ಕೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ.
ಖಾನಾಪುರ ತಾಲೂಕಿನಲ್ಲಿ 88 ಮಿಮೀ, ಬೆಳಗಾವಿ 41 ಮಿಮೀ ಮಳೆ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ವೇದಗಂಗಾ, ದೂಧ್‌ಗಂಗಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ ದತವಾಡ ಸೇತುವೆ ಜಲಾವೃತವಾಗಿದೆ. ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ ಭೋಜ ಸೇತುವೆ, ನಿಪ್ಪಾಣಿ ತಾಲೂಕಿನ ನಾಲ್ಕು ಗ್ರಾಮಗಳ ಬೆಸೆಯುವ ಎರಡು ಸೇತುವೆಗಳು, ಯಡೂರ ಕಲ್ಲೋಳ ಹಳೆಯ ಸೇತುವೆಯೂ ಜಲಾವೃತವಾಗಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಕರ್ನಾಟಕದತ್ತ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಜಿಲ್ಲೆಗೆ ಆಗಮಿಸಿವೆ.
ಇದನ್ನೂ ಓದಿ | Weather Report: ಮುಂದಿನ 24 ಗಂಟೆ ಭಾರಿ ಮಳೆ ಸಾಧ್ಯತೆ, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪಂಚಗಂಗಾ ನದಿ ಒಳ ಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಕಳೆದ 12 ಗಂಟೆ ಅವಧಿಯಲ್ಲಿ 4 ಅಡಿಗಳಷ್ಟು ನೀರಿನ ಮಟ್ಟ ಏರಿಕೆಯಾಗಿದೆ.
ಕೊಲ್ಹಾಪುರ ಜಿಲ್ಲೆಯಾದ್ಯಂತ ಸುಮಾರು 28 ಸಣ್ಣ ಸೇತುವೆಗಳು ಜಲಾವೃತವಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಯಡೂರು ಕಲ್ಲೋಳ ಸೇತುವೆಯೂ ಜಲಾವೃತವಾಗಿದೆ. ಇದು ಚಿಕ್ಕೋಡಿ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಿಗೂ ಸಹ ಭಾರಿ ಸಮಸ್ಯೆಯನ್ನುಂಟು ಮಾಡಿದೆ. ಸದ್ಯ ಪಂಚಗಂಗಾ ನದಿ ನೀರಿನ ಪ್ರಮಾಣ 30 ಅಡಿಗಳಷ್ಟು ಏರಿಕೆ ಆಗಿದ್ದು, 39 ಅಡಿಯಷ್ಟು ನೀರು ಹೆಚ್ಚಾದರೆ ಪಂಚಗಂಗೆ ಅಪಾಯದ ಮಟ್ಟ ತಲುಪಲಿದೆ. ಮುಂಜಾಗ್ರತಾ ಕ್ರಮವಾಗಿ ಕೊಲ್ಹಾಪುರ ಜಿಲ್ಲೆಯಾದ್ಯಂತ 2 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ | Rain News | ಶಿವಮೊಗ್ಗದಲ್ಲಿ ಭಾರಿ ಮಳೆ; ತಗ್ಗು ಪ್ರದೇಶ ಜಲಾವೃತ, ಕುಸಿದ ಮನೆಗಳು