ಬೆಳಗಾವಿ: ಗಾಜಿನ ಬಾಟಲಿಯೊಳಗೆ ಪತ್ತೆಯಾದ ಭ್ರೂಣ ನಮ್ಮ ಆಸ್ಪತ್ರೆಯದ್ದು ಎಂದು ಮೂಡಲಗಿ ಪಟ್ಟಣದ ವೆಂಕಟೇಶ ಮೆಟಿರ್ನಿಟಿ & ಸ್ಕ್ಯಾನಿಂಗ್ ಸೆಂಟರ್ ಆಸ್ಪತ್ರೆಯ ವೈದ್ಯರು ತಪ್ಪೊಪ್ಪಿಕೊಂಡಿದ್ದಾರೆ.
ಇದನ್ನೂ ಓದಿ | ರಾಜಕಾಲುವೆಯಲ್ಲಿ ತೇಲಿ ಬಂತು ನವಜಾತ ಶಿಶುಗಳ ಮೃತದೇಹ
ಮೂಡಲಗಿ ಬಸ್ ನಿಲ್ದಾಣದ ಸಮೀಪದಲ್ಲಿದ್ದ ರಾಜಕಾಲುವೆಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದವು. ಹೀಗೆ ಎಸೆದು ಹೋದವರು ಯಾರು ಎಂದು ಪೊಲೀಸರು, ಆರೋಗ್ಯಾಧಿಕಾರಿಗಳು ವಿಚಾರಣೆ ನಡೆಸಿದಾಗ, ಇವೆಲ್ಲವೂ ವೆಂಕಟೇಶ ಆಸ್ಪತ್ರೆಯದ್ದು ಎಂದು ತಿಳಿದು ಬಂದಿದ್ದು ಸದ್ಯ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯೆ ಡಾ. ವೀಣಾಶ್ರೀ ಕನಕರೆಡ್ಡಿ, ಇವೆಲ್ಲ ಭ್ರೂಣಗಳು ನಮ್ಮ ಆಸ್ಪತ್ರೆಗೆ ಸೇರಿದ್ದು. ಸರಿಯಾಗಿ ಬೆಳವಣಿಗೆ ಆಗದ ಭ್ರೂಣಗಳನ್ನು ರೋಗಿಗಳಿಗೆ ಗೊತ್ತಾಗಲಿ ಎಂದು ತೋರಿಸಲು ತೆಗೆದು ಇಟ್ಟಿದ್ದೆವು. ಆದರೆ ಆಸ್ಪತ್ರೆಯ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ವೇಳೆ ಏನಾಗಿದೆ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
7 ಭ್ರೂಣಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿದೆ. ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ನಿಷೇಧವಿದ್ದರೂ ಗರ್ಭದೊಳಗೆ ಇರುವುದು ಹೆಣ್ಣು ಎಂಬ ಕಾರಣಕ್ಕೆ ಇಂತಹ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶುಕ್ರವಾರ ರಾಜಕಾಲುವೆಯಲ್ಲಿ ಪತ್ತೆಯಾಗಿರುವ 7 ಭ್ರೂಣಗಳನ್ನು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಪತ್ತೆಯಾಗಿರುವ ಏಳು ನವಜಾತ ಶಿಶುಗಳ ಭ್ರೂಣವು ಹೆಣ್ಣೋ ಅಥವಾ ಗಂಡೊ ಎಂಬುದು ತಿಳಿಯಬೇಕಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಭ್ರೂಣಗಳ ಹತ್ಯೆ ತನಿಖೆ ಚುರುಕುಗೊಳ್ಳಲಿದೆ.
ಆರೋಗ್ಯಾಧಿಕಾರಿಗಳ ದಿಢೀರ್ ದಾಳಿ
ಇತ್ತ ಭ್ರೂಣಗಳು ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತಿರುವ ಆಗಿರುವ ಆರೋಗ್ಯಾಧಿಕಾರಿಗಳು, ಸ್ಕ್ಯಾನಿಂಗ್ ಸೆಂಟರ್ ಇರುವ ಖಾಸಗಿ ಆಸ್ಪತ್ರೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಗೋಕಾಕ್, ಮೂಡಲಗಿ ತಾಲೂಕಿನ ಆರು ಆಸ್ಪತ್ರೆಗಳ ಮೇಲೆ ಡಿಎಚ್ಒ ಡಾ.ಮಹೇಶ ಕೋಣಿ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಅನುಮಾನಾಸ್ಪದ ಆಸ್ಪತ್ರೆಗಳನ್ನು ಸೀಜ್ ಮಾಡಲಾಗುತ್ತಿದೆ.
ಭ್ರೂಣಗಳನ್ನು ರಾಜಕಾಲುವೆ ಎಸೆದು ರಾಕ್ಷಸಿ ಕೃತ್ಯ ಎಸೆಗಿದವರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು ಇದಕ್ಕಾಗಿ ಕಂದಾಯ, ಆರೋಗ್ಯ, ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಬೆಳಗಾವಿಯ ಡಿಎಚ್ಓ ಡಾ. ಮಹೇಶ ಕೋಣಿ ಹೇಳಿದ್ದಾರೆ. ನಿನ್ನೆ ಈ ಸಂಬಂಧ ಮೆಸೇಜ್ ಬಂದ ನಂತರ ಡಿಸಿ ಗಮನಕ್ಕೆ ತಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.ಸ್ಥಳೀಯ ಸ್ಕ್ಯಾನಿಂಗ್ ಸೆಂಟರ್, ಹೆರಿಗೆ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ.ವೆಂಕಟೇಶ್ವರ ಮೆಟರ್ನಿಟಿ ಆಸ್ಪತ್ರೆ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಗೊತ್ತಾಗಿದೆ. ಏಳು ಭ್ರೂಣ ಮೃತದೇಹಗಳು ನಮ್ಮ ಆಸ್ಪತ್ರೆಯದ್ದೇ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಸ್ಪತ್ರೆ ವಿರುದ್ದ ಕೇಸ್ ದಾಖಲಿಸಿ ಆಸ್ಪತ್ರೆ ಸೀಜ್ ಮಾಡಲಾಗಿದೆ. ಭ್ರೂಣವನ್ನು ಭೀಮ್ಸ್ ವಿಧಿ ವಿಜ್ಞಾನ ಕೇಂದ್ರದಲ್ಲಿ ಇರಿಸಲಾಗಿದ್ದು, ಪ್ರಯೋಗಾಲಯದ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಎಂಬುದು ಗೊತ್ತಾದರೆ 6-7 ವರ್ಷ ಜೈಲುಶಿಕ್ಷೆ ಇದೆ.
ಇದನ್ನೂ ಓದಿ | ಬೆಳಗಾವಿಯಲ್ಲಿ ಕಾರು-ಲಾರಿ ಭೀಕರ ಅಪಘಾತದಲ್ಲಿ ನಾಲ್ವರ ಸಾವು