Site icon Vistara News

Bellary Accident | ಕಾಲುವೆಗೆ ರಿಕ್ಷಾ ಪಲ್ಟಿ ಪ್ರಕರಣ; ನಾಪತ್ತೆಯಾಗಿದ್ದ ಹುಲಿಗೆಮ್ಮ ಮೃತದೇಹ ಪತ್ತೆ

bellery canel auto

ಬಳ್ಳಾರಿ: ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋವೊಂದು ಎಚ್‌ಎಲ್‌ಸಿ (HLC) ಕಾಲುವೆಯಲ್ಲಿ ಪಲ್ಟಿಯಾಗಿ ನಾಪತ್ತೆಯಾಗಿದ್ದ (Bellary Accident) ಕೃಷಿ ಕಾರ್ಮಿಕರಾದ ಹುಲಿಗೆಮ್ಮ ಮೃತದೇಹವು ಬಂಡಿಹಟ್ಟಿ ಸಮೀಪದಲ್ಲಿ ಶುಕ್ರವಾರ (ಸೆ.೧೬) ಮಧ್ಯಾಹ್ನ ಪತ್ತೆಯಾಗಿದೆ. ಇದರಿಂದಾಗಿ ಕಾಲುವೆಯಲ್ಲಿ ನಾಪತ್ತೆಯಾದ ಮೂವರ ಮೃತ ದೇಹಗಳು ಪತ್ತೆಯಾದಂತಾಗಿದೆ.

ಗುರುವಾರ ಸಂಜೆ ನಾಗರತ್ನಮ್ಮ ಅವರ ಮೃತದೇಹವು ಬಳ್ಳಾರಿ ಸಮೀಪದ ಬಂಡಿಹಟ್ಟಿಯಲ್ಲಿ ಸಿಕ್ಕಿದ್ದರೆ, ಶುಕ್ರವಾರ ಬೆಳಗ್ಗೆ ಆಂಧ್ರಪ್ರದೇಶದ ಉಂತಕಲ್ ಸಮೀಪ ಮಲ್ಲಮ್ಮ (30) ಮೃತದೇಹ ಸಿಕ್ಕಿತ್ತು. ಈಗ ಹುಲಿಗೆಮ್ಮ ಅವರ ಮೃತದೇಹವೂ ದೊರೆತಿದ್ದು, ಮೂರು ಮೃತದೇಹ ಪತ್ತೆಯಾದಂತಾಗಿದೆ. ಕಳೆದ ಎರಡು ದಿನಗಳಿಂದ ಮೃತರ ಸಂಬಂಧಿಗಳು ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು.

ಶುಕ್ರವಾರ ದೊರೆತಿರುವ ಮಲ್ಲಮ್ಮ ಮತ್ತು ಹುಲಿಗೆಮ್ಮ ಮೃತ ದೇಹಗಳನ್ನು ವಿಮ್ಸ್‌ನಲ್ಲಿ ಶವಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಕೊಳಗಲ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಬಳ್ಳಾರಿ ತಾಲೂಕಿನ ಕೊಳಗಲ್ ಸಮೀಪದಲ್ಲಿ ನಡೆದಿದ್ದ ಅಪಘಾತದಲ್ಲಿ ಐವರನ್ನು ರಕ್ಷಣೆ ಮಾಡಲಾಗಿತ್ತು. ಮೂವರ ಮೃತದೇಹ ಘಟನಾ ಸ್ಥಳದಲ್ಲಿ ಸಿಕ್ಕಿದ್ದರೆ, ಇನ್ನುಳಿದ ಮೂರು ಮೃತದೇಹಗಳು ನೀರಿನಲ್ಲಿ ನಾಪತ್ತೆಯಾಗಿದ್ದವು.

ಮೃತರ ಕುಟುಂಬಗಳ ಪರಿಹಾರ ನೀಡಲು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿಯವರು ಸರ್ಕಾರಕ್ಕೆ ವರದಿ ಕಳಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಬಳ್ಳಾರಿ ವಿಮ್ಸ್ ಆಸ್ಪತ್ರೆ ವಿದ್ಯುತ್‌ ಸಮಸ್ಯೆ: ಇಬ್ಬರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚನೆ

Exit mobile version