Site icon Vistara News

NH-63 | 6 ವರ್ಷ ಕಳೆದರೂ ಮುಗಿಯದ ಬಳ್ಳಾರಿ-ಹೊಸಪೇಟೆ ಹೆದ್ದಾರಿ ಕಾಮಗಾರಿ!

NH-63

| ಶಶಿಧರ ಮೇಟಿ, ಬಳ್ಳಾರಿ
95 ಕಿ.ಮೀ ರಸ್ತೆ ನಿರ್ಮಾಣಕ್ಕೆ ಆರು ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡರೂ ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 63ರ (NH-63) ಕಾಮಗಾರಿ ಪೂರ್ಣಗೊಂಡಿಲ್ಲ!

ರಾಜ್ಯದ ಆರೇಳು ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶ ಮೂರ್ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ-63ರ ಹೊಸಪೇಟೆಯಿಂದ ಬಳ್ಳಾರಿ ಮೂಲಕ ಆಂಧ್ರದ ಗಡಿವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ಆಮೆಗತಿಯ ವೇಗವನ್ನು ಪಡೆದುಕೊಂಡಿದೆ. ಈ ಕಾಮಗಾರಿ ಆರಂಭವಾಗಿ ಆರು ವರ್ಷ ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಕಾಮಗಾರಿಯಲ್ಲಿ ಕಾಣದ ನಿರೀಕ್ಷಿತ ಪ್ರಗತಿ
2017ರಲ್ಲಿ‌ ಆರಂಭವಾಗಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ 2019ಕ್ಕೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿತ್ತು. 95.37 ಕಿ.ಮೀ ರಸ್ತೆ ಕಾಮಗಾರಿಯನ್ನು ಆರಂಭದಲ್ಲಿ ಬೇರೊಂದು ಕಂಪನಿಗೆ ವಹಿಸಿಕೊಂಡಿತ್ತು. ನಂತರದಲ್ಲಿ ಗ್ಯಾಮನ್ ಇಂಡಿಯಾದವರು 900 ಕೋಟಿ ರೂ.ಗಳ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡು ಬರೋಬ್ಬರಿ ಆರು ವರ್ಷವಾಯಿತು. ಆದರೆ ಕಾಮಗಾರಿ ಕುಂಟುತ್ತಾ ಸಾಗಿದೆ.

ಇದನ್ನೂ ಓದಿ | Rain News | ಕೃಷಿ ಜಮೀನಿಗೆ ನುಗ್ಗಿದ ನೀರು; ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡಿದ ಮಳೆ

ರಾಜಕೀಯ ನಾಯಕರ ಇಚ್ಛಾಶಕ್ತಿಗೆ ಸವಾಲು
ಮಣ್ಣಿನ ಕೊರತೆ, ಭೂಸ್ವಾಧೀನ, ವರ್ಷದಿಂದ ವರ್ಷಕ್ಕೆ‌ ಏರಿಕೆಯಾಗುತ್ತಿರುವ ವೆಚ್ಚ ಸೇರಿ ಇತರ ತಾಂತ್ರಿಕ ಕಾರಣಗಳಿಂದಾಗಿ ಹೆದ್ದಾರಿ ಕಾಮಗಾರಿ ಪ್ರಗತಿ ಕಂಡಿಲ್ಲ. ಇಂತಹ ರಸ್ತೆ ವ್ಯಾಪ್ತಿಗೆ ಸಚಿವರಾದ ಬಿ.ಶ್ರೀರಾಮುಲು, ಆನಂದ್ ಸಿಂಗ್, ಸಂಸದ ದೇವೇಂದ್ರಪ್ಪ ಮತ್ತು ಮೂರು ಜನ ಶಾಸಕರಾದ ಇ.ತುಕಾರಾಂ, ಸೋಮಶೇಖರ ರೆಡ್ಡಿ, ನಾಗೇಂದ್ರ ಬರುತ್ತಾರೆ. ಆದರೂ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಸಭೆ ಕರೆಯುವ ಭರವಸೆ
ಇತ್ತೀಚೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಬಳ್ಳಾರಿಗೆ ಬಂದಾಗ ರಸ್ತೆಯ ದುಸ್ಥಿತಿ ಬಿಸಿ ತಟ್ಟಿದೆ. ಒಂದು ವಾರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಯೊಂದಿಗೆ ಸಭೆ ಕರೆಯುವುದಾಗಿ ಹೇಳಿದ್ದಾರೆ. ಈಗಾಗಲೇ ನಾಲ್ಕು ದಿನ ಕಳೆದಿವೆ, ಈ ಮಾತು ಕೇವಲ ಭರವಸೆ ಸೀಮಿತವಾಗುವುದೋ ಅಥವಾ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗಂಭೀರ ಹಜ್ಜೆ ಇಡುವರೋ ಎಂಬುವುದನ್ನು ಕಾದುನೋಡಬೇಕಾಗಿದೆ.

ಹಲವು ಅಪಘಾತಗಳಿಗೆ ಸಾಕ್ಷಿಯಾದ ರಸ್ತೆ
ಅರೆಬರೆ ಕಾಮಗಾರಿಯಿಂದಾಗಿ ಹಲವು ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಸಾಕ್ಷಿಯಾಗಿದೆ‌. ಹಲವರ ಪ್ರಾಣಕ್ಕೆ ಸಂಚಕಾರ ತಂದಿದೆ. ಇತ್ತೀಚೆಗೆ‌ ಹೆದ್ದಾರಿಯಲ್ಲಿ ಪಿ.ಡಿ‌‌.ಹಳ್ಳಿ ಸಮೀಪ ಹೂವು ಮಾರಿಕೊಂಡು ಬರುತ್ತಿದ್ದ ಇಬ್ಬರು ಮೃತ ಪಟ್ಟಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಈ ಅರೆಬರೆ ಹೆದ್ದಾರಿ ಮತ್ತಷ್ಟು ಜನರ ಬಲಿ ಪಡೆಯುವ ಸಾಧ್ಯತೆ ಇದೆ.

ನಾನು ಹೊಪಸೇಟೆಯಿಂದ ಬಳ್ಳಾರಿಗೆ ಬರುವಾಗ ರಸ್ತೆಯು ಹದಗೆಟ್ಟಿರುವುದು ನೋಡಿದ್ದೇನೆ. ಆ.15ರ ನಂತರ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಲಾಗುತ್ತದೆ. ಅಷ್ಟರೊಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗಳೊಂದಿಗೆ ಸಭೆ ನಡೆಸಿ, ವಾಸ್ತವತೆ ತಿಳಿದುಕೊಳ್ಳುತ್ತೇನೆ.
-ಸಿ.ಸಿ.ಪಾಟೀಲ್, ಲೋಕೋಪಯೋಗಿ ಸಚಿವ

ಇದನ್ನೂ ಓದಿ | ಗೃಹ ಸಚಿವರ ಕ್ಷೇತ್ರದಲ್ಲಿ ಸೂಕ್ತ ರಸ್ತೆಯಿಲ್ಲದೆ ನೀರಿನಲ್ಲೆ ಶವ ಹೊತ್ತು ಸಾಗಿದ ಜನ

Exit mobile version