Site icon Vistara News

ಅದಿರು ಉತ್ಪಾದನೆಗೆ ಮೂಗುದಾರ, ಏಕಸ್ವಾಮ್ಯಕ್ಕೆ ಕಡಿವಾಣ

bellary mining

ಶಶಿಧರ್ ಮೇಟಿ ಬಳ್ಳಾರಿ
ರಾಜ್ಯದ ಕಬ್ಬಿಣ ಅದಿರು ರಫ್ತಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದರೂ ಅದಿರು ಉತ್ಪಾದನೆ ವರ್ಷಕ್ಕೆ 42 ಮಿಲಿಯನ್ ಟನ್ (4.2 ಕೋಟಿ ಟನ್) ಮೀರುವಂತಿಲ್ಲ. ಹೌದು, ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ 56 ಗಣಿ ಕಂಪನಿಗಳಿವೆ. ಅದರಲ್ಲಿ ಕೇವಲ 46 ಗಣಿ ಕಂಪನಿಗಳು ಅದಿರು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ. ಇದೀಗ ಸುಪ್ರೀಂಕೋರ್ಟ್‌ ಆದೇಶದ ಪರಿಣಾಮ ಒಟ್ಟಾರೆ ಅದಿರು ಉತ್ಪಾದನೆ ಜತೆಗೆ ಕೆಲ ಕಂಪನಿಗಳ ಏಕಸ್ವಾಮ್ಯಕ್ಕೂ ಕಡಿವಾಣ ಹಾಕಿದಂತಾಗಿದೆ.

ಹಿಂದೆ ಗಣಿ ಗುತ್ತಿಗೆ ಪಡೆದಿರುವ ಎ ಮತ್ತು ಬಿ ಕೆಟಗರಿಯಲ್ಲಿ ಬರುವ 35 ಗಣಿ ಕಂಪನಿಗಳು ವರ್ಷಕ್ಕೆ ಕೇವಲ 35 ಮಿಲಿಯನ್ ಟನ್ (3.5 ಕೋಟಿ ಟನ್) ಅದಿರು ಉತ್ಪಾದನೆಗೆ ಮಾತ್ರ ಅವಕಾಶವಿದೆ. ಇ ಹರಾಜಿನಲ್ಲಿ 21 ಗಣಿ ಗುತ್ತಿಗೆಗಳು ಹರಾಜಾಗಿದ್ದರೂ, ಕೇವಲ 11 ಕಂಪನಿಗಳು ವರ್ಷಕ್ಕೆ ಕೇವಲ 7.5 ಮಿಲಿಯನ್ ಟನ್ (75 ಲಕ್ಷ ಟನ್ ) ಅದಿರು ಉತ್ಪಾದನೆ ಮಾಡುತ್ತಿವೆ.

ಇದನ್ನೂ ಓದಿ | ರೆಡ್ಡಿ ಸಮಾಜಕ್ಕಿದೆ ಸರ್ಕಾರ ಬದಲಿಸುವ ಶಕ್ತಿ: ಜನಾರ್ದನ ರೆಡ್ಡಿ ಹೇಳಿಕೆ

ಗಣಿ ಉದ್ಯಮಿಗಳಿಗೆ ಕೈ ಹಿಡಿದ ಆದೇಶ

ಸುಪ್ರೀಂಕೋರ್ಟ್ ಆದೇಶದಿಂದ ಇ ಆ್ಯಕ್ಷನ್‌ನಲ್ಲಿ ದೊಡ್ಡ ಕಂಪನಿಗಳ ಜತೆಗೆ ಸ್ಪರ್ಧೆ ಮಾಡಲಾಗದೆ, ಅದಿರು ಕೊರತೆಯಿಂದ ಅದಿರು ಉತ್ಪಾದನೆಗೆ ಗುಡ್ ಬೈ ಹೇಳುವ ಸಣ್ಣಪುಟ್ಟ ಕಬ್ಬಿಣ ಉತ್ಪಾದನೆ ಘಟಕಗಳಿಗೆ ನಿಟ್ಟುಸಿರು ಬಿಟ್ಟಿವೆ‌. ಗಣಿ ಉದ್ಯಮಿಗಳು ತಮ್ಮ ಅದಿರನ್ನು ಇ ಹರಾಜು ಮೂಲಕವೇ ಮಾರಾಟ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ಗಣಿ ಉದ್ಯಮಿಗಳಿಗೆ ಸಂಜೀವಿನಿಯಾಗಿದೆ‌. ಹರಾಜಿನಿಂದ ಅದಿರನ್ನು ಮಾರಾಟ ಮಾಡುವುದು ಕಷ್ಟವಾಗಿತ್ತು. ಆದರೆ ಗಣಿ ಉದ್ಯಮಿಗಳು ಈಗ ನೇರವಾಗಿ ಕಬ್ಬಿಣ ಉತ್ಪಾದನೆ ಘಟಕಗಳೊಂದಿಗೆ ದೀರ್ಘಕಾಲದ ಅದಿರು ಪೂರೈಕೆ ಒಪ್ಪಂದ ಮಾಡಿಕೊಳ್ಳಬಹುದು‌. ಅದಿರು ಖರೀದಿಯಲ್ಲಿ ಮೊನೊಪಲಿ ಮಾಡುವ ದೊಡ್ಡ ದೊಡ್ಡ ಕಬ್ಬಿಣ ಕೈಗಾರಿಕೆಗಳಿಗೆ ಸುಪ್ರೀಂಕೋರ್ಟ್ ಆದೇಶ ಬಿಸಿ ತುಪ್ಪವಾಗಿದೆ‌.

ಪರಿಸ್ಥಿತಿ ಉಲ್ಟಾಪಲ್ಟಾ

ಮೊದಲು ಗಣಿ ಉದ್ಯಮಿಗಳು ಕಬ್ಬಿಣ ಕೈಗಾರಿಕೆಗಳ ಮುಂದೆ ಹೋಗಿ ಅದಿರು ಮಾರಾಟಕ್ಕೆ ನಿಲ್ಲುವ ಪರಿಸ್ಥಿತಿ ಇದ್ದರೆ, ಸುಪ್ರೀಂ ಆದೇಶದಿಂದ ಇದು ಉಲ್ಟ ಆಗಿದೆ. ಗಣಿ ಉದ್ಯಮಿಗಳ ಮುಂದೆ ಕಬ್ಬಿಣ ಉತ್ಪಾದನೆ ಘಟಕಗಳು ನಿಲ್ಲುವಂತಾಗಿದೆ‌. ಕಬ್ಬಿಣದ ಅದಿರು ಮಾರಾಟದಲ್ಲಿ ದೇಶದ ಒಡಿಶಾ ಮತ್ತು ಕರ್ನಾಟಕದಲ್ಲಿ ಸಾಕಷ್ಟು ವ್ಯತ್ಯಾಸ ಇತ್ತು. ಪ್ರತಿ ಟನ್ ಗೆ ಸುಮಾರು ₹1,000 ವ್ಯತ್ಯಾಸ ಇರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಒಂದೇ ವ್ಯವಸ್ಥೆ ಇರಬೇಕೆಂಬ ಕಲ್ಪನೆ ಸುಪ್ರೀಂಕೋರ್ಟ್ ಆದೇಶದಿಂದ ಸಾಕಾರಗೊಂಡಿದೆ.

ಇದನ್ನೂ ಓದಿ | ಅಕ್ರಮ ಗಣಿಗಾರಿಕೆ ಹಾಗೂ ಕೊಲೆ: ನರಗಲು ಗ್ರಾಮದಲ್ಲಿ ಪೊಲೀಸರ ವಿರುದ್ಧವೇ ಆಕ್ರೋಶ

Exit mobile version