Site icon Vistara News

Bellary Politics | ಜೀವದ ಗೆಳೆಯರು ದೂರ ದೂರವಾಗಲು ಅಹಂ ಕಾರಣವಾಯಿತೇ?

Bellary Politics janardhan reddy sriramulu

ಶಶಿಧರ ಮೇಟಿ, ಬಳ್ಳಾರಿ
ಬಳ್ಳಾರಿ:
“ನನ್ನಿದಂಲೆ ನನ್ನಿಂದಲೆʼʼ ಎನ್ನುವ ಪದಗಳೇ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಮನಸ್ತಾಪಕ್ಕೆ ಕಾರಣವಾಯ್ತೆ? ರೆಡ್ಡಿಯಿಂದಲೇ ಶ್ರೀರಾಮುಲು, ಶ್ರೀರಾಮುಲನಿಂದಲೇ ರೆಡ್ಡಿ ಎಂಬ ವಿಚಾರಗಳು ಇಬ್ಬರ ನಡುವಿನ ಅಂತರಕ್ಕೆ ಕಾರಣವಾಗಿ, ರಾಜಕೀಯ ಭಿನ್ನ ನಡೆ ತುಳಿಯಲು ಕಾರಣವಾಯ್ತೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ (Bellary Politics) ಮುನ್ನಲೆಗೆ ಬಂದಿದೆ.

ಈ ಕುರಿತು ಚರ್ಚೆ ನಡೆಯಲು ಈ ಇಬ್ಬರು ನಾಯಕರು ಆಡುತ್ತಿರುವ ಮಾತುಗಳೇ ಕಾರಣವಾಗಿವೆ. “ನಾನು ಶ್ರೀರಾಮುಲು ಅವರನ್ನು 1994ರಲ್ಲಿ ನಗರಸಭೆ ಸದಸ್ಯನ್ನಾಗಿ ಮಾಡಿದೆ, ಶಾಸಕರಾಗಲು ಕಾರಣನಾದೆ, ಬಿಜೆಪಿ ಪಕ್ಷ 2008ರಲ್ಲಿ ಅಧಿಕಾರಕ್ಕೆ ಬರಲು ಕಾರಣನಾದೆʼʼ ಎಂದು ಜನಾರ್ದನ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ಶ್ರೀರಾಮಲು, “ಜನಾರ್ದನ ರೆಡ್ಡಿ ಪರವಾಗಿ ಈವರೆಗೆ ಬಂಡೆಯಂತೆ ಇದ್ದೆʼʼ ಎಂದಿದ್ದಾರೆ. ಇವರಿಬ್ಬರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ “ನನ್ನಿಂದಲೇ ಎಲ್ಲವುʼʼ ಎಂಬ ಧೋರಣೆ ಇಬ್ಬರ ನಡುವೆ ಕಂದಕವನ್ನು ಸೃಷ್ಟಿ ಮಾಡಿದಂತೆ ಕಾಣುತ್ತಿದೆ.

ಶ್ರೀರಾಮುಲು ಅವರ ಬಲವಿದ್ದುದ್ದರಿಂದಲೇ ಜನಾರ್ದನ ರೆಡ್ಡಿ ಮೈನಿಂಗ್‌ನಲ್ಲಿ ಏಳಿಗೆ ಸಾಧಿಸಲು ಸಾಧ್ಯವಾಯಿತು ಎನ್ನುವುದು ಶ್ರೀರಾಮುಲು ಮತ್ತು ಅವರ ಆಪ್ತರ ವಲಯದಲ್ಲಿ ಕೇಳಿ ಬರುವ ಮಾತುಗಳಾದರೆ, ಜನಾರ್ದನ ರೆಡ್ಡಿ ಅವರು ಬಲ ದಿಂದಾಗಿ ಶ್ರೀರಾಮುಲು ರಾಜಕೀಯದಲ್ಲಿ ಏಳಿಗೆ ಸಾಧಿಸಿದ ಎಂಬ ಮಾತುಗಳು ರೆಡ್ಡಿ ಆಪ್ತಬಳಗದಲ್ಲಿ ಕೇಳಿಬರುತ್ತಿವೆ. ಇಂತಹ ವಿಚಾರಗಳಿಂದಾಗಿ ಸ್ನೇಹ ಮತ್ತು ಆತ್ಮೀಯತೆಗೆ ಚ್ಯುತಿ ತಂದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಆತ್ಮೀಯ ಸಂಬಂಧಗಳಲ್ಲಿ ಬಿರುಕು?
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅಳಿಯ ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ.ಎಚ್.ಸುರೇಶ್‌ ಬಾಬು ಅವರು ಆತ್ಮೀಯರಾಗಿದ್ದರು. ಕಾರಾಣಾಂತರಗಳಿಂದ ಈ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದೀಗ ಶ್ರೀರಾಮುಲು ಮತ್ತು ರೆಡ್ಡಿ ನಡುವಿನ ಸಂಬಂಧದಲ್ಲಿಯೂ ಬಿರುಕು ಕಾಣಿಸಿಕೊಂಡಿಸಿದೆ. ಶ್ರೀರಾಮುಲು ಮತ್ತು ರೆಡ್ಡಿ ಸಹೋದರರ ಮಧ್ಯೆ ಸಣ್ಣಪುಟ್ಟ ವ್ಯತ್ಯಾಸ ಕಂಡು ಬಂದರೆ, ಜನಾರ್ದನ ರೆಡ್ಡಿ ಸರಿಪಡಿಸುವ ಕೆಲಸ ಮಾಡುತ್ತಿದ್ದರು, ಇದೀಗ ಜನಾರ್ದನ ರೆಡ್ಡಿಯೇ ದೂರು ಹೋಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಒಂಟಿಯಾದರೆ ಜನಾರ್ದನ ರೆಡ್ಡಿ?
ಜನಾರ್ದನ ರೆಡ್ಡಿಯವರು ಚುನಾವಣೆಯ ತಂತ್ರಗಾರಿಕೆ ಹೆಣೆಯುವಲ್ಲಿ ಸಿದ್ದಹಸ್ತರು ಎಂಬ ಮಾತಿದೆ. ಇದಕ್ಕೆ ಶ್ರೀರಾಮುಲು ಜನಬಲದ ಸಾಥ್ ನೀಡುತ್ತಿದ್ದರು. “ಹೊಸ ಪಕ್ಷ ಕಟ್ಟದರೆ ನಾನೇನು ಮಾಡಲಿ, ಹೊಸ ಪಕ್ಷ ನನಗೇನು ಸಂಬಂಧ, ಅದರ ಬಗ್ಗೆ ನನಗೆ ಗೊತ್ತಿಲ್ಲʼʼ ಎಂದು ಜನಾರ್ದನ ರೆಡ್ಡಿ ಹಿರಿಯ ಸಹೋದರ ಕರುಣಾಕರ ರೆಡ್ಡಿ ಹೇಳಿಕೆ ನೀಡಿದ್ದಾರೆ. ತಮ್ಮ ಸಹೋದರ ಹೊಸ ಪಕ್ಷ ಕಟ್ಟಿದರೂ, ನಾನು ಹೋಗುವುದಿಲ್ಲ ಎಂದು ಇನ್ನೊಬ್ಬ ಸಹೋದರರ ಜಿ.ಸೋಮಶೇಖರ ರೆಡ್ಡಿ ಕೆಲ ದಿನಗಳ ಹಿಂದೆ ಹೇಳಿದ್ದರು. ಈವರೆಗೆ ರೆಡ್ಡಿ ಪರವಾಗಿ ಬಂಡೆಯಂತೆ ಇದ್ದೆ, ಪಕ್ಷ ಸಿದ್ದಾಂತವೇ ಬೇರೆ, ನಾನು ಬಿಜೆಪಿಯ ಶಿಸ್ತಿನ ಸಿಫಾಯಿ, ಮನವೊಲಿಸುವ ಪ್ರಶ್ನೆಯ ಬರುವುದಿಲ್ಲ ಎಂದು ಆಪ್ತಮಿತ್ರ ಶ್ರೀರಾಮುಲು ಹೇಳಿದ್ದರಿಂದ ಜನಾರ್ದನ ರೆಡ್ಡಿ ಒಂಟಿಯಾದರೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಉದ್ಭವಿಸಿದೆ.

ಕುಗ್ಗಿದ ಜಂಘಾ ಬಲ
ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಕೂಡಿದರೆ ಇವರನ್ನು ರಾಜಕೀಯವಾಗಿ ಮಣಿಸುವುದು ಕಷ್ಟಸಾಧ್ಯ ಎಂಬ ಮಾತಿತ್ತು. ಇಬ್ಬರ ಮಧ್ಯ ಅಸಮಾಧಾನ ಸೃಷ್ಟಿಯಾಗಲಿದೆ ಎಂದು ವಿರೋಧಿಗಳು ಕಾದು ಕುಳಿತ್ತಿದ್ದರು. ಇದೀಗ ಅವರುಗಳ ನಿರೀಕ್ಷೆ ಈಡೇರಿ ದಂತಾಗಿದೆ. ಇದರಿಂದಾಗಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಜಂಘಾಬಲ ಕುಸಿದಂತಾಗಿದೆ. ರೆಡ್ಡಿಯ ಐಡಿಯಾಲಜಿ ಮತ್ತು ಶ್ರೀರಾಮುಲು ಅವರ ಜನಬಲದಿಂದಾಗಿ ಪ್ರತಿಯೊಂದು ವಿಚಾರದಲ್ಲಿ ಸಕ್ಸಸ್ ಆಗುತ್ತಿದ್ದರೂ ಎನ್ನುವ ಮಾತ್ತಿತ್ತು. ಇದೀಗ ಇಬ್ಬರು ರಾಜಕೀಯ ಭಿನ್ನ ದಾರಿ ತುಳಿದಿರುವುದು ರಾಜಕೀಯ ಮತ್ತು ಸಾಮಾಜಿಕವಾಗಿ ಇಬ್ಬರ ಬಲ ಕುಂಸಿದಂತಾಗಿದೆ ಎಂದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ | Janardhan Reddy | ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭದ ಲೆಕ್ಕ; ಟಿಕೆಟ್ ವಂಚಿತರಿಗೆ ವೇದಿಕೆಯಾಗಲಿದೆಯೇ ಹೊಸ ಪಕ್ಷ?

Exit mobile version