ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ ಎಂದು ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಕ್ಯಾಮ್ ಸಿದ್ದರಾಮಯ್ಯ ಅಭಿಯಾನ ಮತ್ತು ಕಾಂಗ್ರೆಸ್ ವಿರುದ್ಧ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ರೆಡ್ಡಿ ಅವರು, ಈಗಾಗಲೇ ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವುದಕ್ಕೆ ಮಾತುಕತೆ ನಡೆಸುತ್ತಿದ್ದಾರೆ ಎಂದರು. ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಸಿನಿಮಾ ಈಗ ಶುರು, ಮುಂದಿದೆ ಬಹಳ
ʻʻಈಗ ಸಿನಿಮಾ ಆರಂಭವಾಗಿದೆ, ಮುಂದೆ ಬಹಳ ಇದೆ, ಯಾರು ಎಲ್ಲಿಗೆ ಹೋಗುತ್ತಾರೆ ಮುಂದೆ ತಿಳಿಯಲಿದೆ. ಕಾಂಗ್ರೆಸ್ ಮುಳುಗುವ ಹಡುಗು, ಅಲ್ಲಿಗೆ ಹೋಗುವುದಕ್ಕೆ ಚಾನ್ಸೇ ಇಲ್ಲ. ರಾಹುಲ್ ಗಾಂಧಿ ಅವರು ಐರನ್ ಲೆಗ್ ಇದ್ದಂತೆ, ಅವರು ಬಳ್ಳಾರಿ ಬಂದರೆ ನಮ್ಮ ಗೆಲುವು ಖಚಿತ. ಇಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದ್ದಾರೆ, ರಾಜಸ್ಥಾನ ದಲ್ಲಿ ಕಾಂಗ್ರೆಸ್ ತೋಡೋ ಯಾತ್ರೆ ನಡೆಯುತ್ತಿದೆʼʼ ಎಂದು ಲೇವಡಿ ಮಾಡಿದರು.
ಜನಾರ್ದನ ರೆಡ್ಡಿ ಎಲ್ಲಿಯೂ ಸ್ಪರ್ಧಿಸಲ್ಲ
ʻʻನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ನೀಡಲಿದ್ದಾರೆ. ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂʼʼ ಎಂದ ರೆಡ್ಡಿ ಅವರು, ಕಾಂಗ್ರೆಸ್‌ನವರು ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಾ, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಅವರ ಅವಧಿಯಲ್ಲಿ ಎಷ್ಟೊಂದು ಸ್ಕ್ಯಾಮ್ ಮಾಡಿದ್ದಾರೆಂಬುದು ಜನರಿಗೆ ಗೊತ್ತಿದೆ, ಬಸವರಾಜ ಬೊಮ್ಮಾಯಿಯವರನ್ನು ಹೀಗೆ ಬಿಟ್ಟರೆ, ಮುಂದಿನ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯ ಕಾಂಗ್ರೆಸ್ಸಿಗಿದೆ ಎಂದರು. ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿ ಸ್ಪರ್ಧೆ ಮಾಡುವ ಯೋಚನೆಯಲ್ಲಿಲ್ಲ. ಒಂದು ವೇಳೆ ಮಾಡುವುದಿದ್ದರೆ, ನಮ್ಮೊಂದಿಗೆ ಚರ್ಚೆ ಮಾಡುತ್ತಾರೆ ಎಂದರು.
ಬಿಜೆಪಿಯಿಂದ ಸ್ಕ್ಯಾಮ್ ರಾಮಯ್ಯ ಅಭಿಯಾನ
ಬಳ್ಳಾರಿ ಬಿಜೆಪಿ ಘಟಕದಿಂದ ಸ್ಕ್ಯಾಮ್ ರಾಮಯ್ಯ ಪೋಸ್ಟರ್ ಅಭಿಯಾನವನ್ನು ನಗರದ ಗಡಗಿ ಚೆನ್ನಪ್ಪ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕರ್ತರು ಮತ್ತು ಮುಖಂಡರು ಸ್ಕ್ಯಾಮ್ ರಾಮಯ್ಯ ಪೋಸ್ಟರನ್ನು ಅಂಟಿಸಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾಹರಿಗೌಡ, ಮುಖಂಡರಾದ ಗುರುಲಿಂಗನಗೌಡ, ಶಿವಾರೆಡ್ಡಿ ಸೇರಿದಂತೆ ಇತರರು ಇದ್ದರು.